ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

Share
IMG-20250108-WA0004-1024x526 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!
IMG-20250108-WA0007-433x1024 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

ಬೆಳ್ತಂಗಡಿ : ನಗರ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು-ಕೆಲ್ಲಗುತ್ತು ಮಧ್ಯೆ ಸಮೀಪದ ಗುಡ್ಡದಲ್ಲಿರುವ ಬಡ ಕುಟುಂಬಗಳ ಮೃತ ದೇಹಗಳ ಅಂತ್ಯ ಸಂಸ್ಕಾರಕ್ಕಾಗಿ ಉಪಯೋಗಕ್ಕೆ ಸಿಗಬೇಕಾಗಿರುವ ಸಾರ್ವಜನಿಕ ಸ್ಮಶಾನವೊಂದು ಕಳೆದೊಂದು ವರ್ಷದಿಂದ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಸ್ಥಳೀಯ ವ್ಯಕ್ತಿಯೊಬ್ಬರು ಅಂತ್ಯಸಂಸ್ಕಾರಕ್ಕಾಗಿ ಮೃತರ ಕುಟುಂಬದವರೇ ತುರ್ತು ಅಗತ್ಯದ ಸಾಮಾಗ್ರಿಗಳನ್ನು ತಂದು ಸ್ಮಶಾನವನ್ನು ದುರಸ್ತಿ ಮಾಡಿಕೊಂಡ ಪ್ರಸಂಗ ಬುಧವಾರ ನಡೆಯಿತು.
ಇದು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಮಶಾನ ಮೂಕ ಸಾಕ್ಷಿಯಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಮತ್ತು ಕೆಲ್ಲಗುತ್ತು , ಮುಗುಳಿ, ಹುಣ್ಸೆಕಟ್ಟೆ ಸುತ್ತಮುತ್ತಲಿನಲ್ಲಿ ಯಾರಾದರೂ ಮೃತರಾದರೆ ಇದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಕ್ಕಿದರೆ ಅನುಕೂಲ, ಆದರೆ ಇಲ್ಲಿನ ಸ್ಮಶಾನವು ಕಳೆದ 1 ವರ್ಷದಿಂದ ಹೆಣಗಳೇ ಮುಜುಗರಪಡುವಷ್ಟು ದುಸ್ಥಿತಿಯಲ್ಲಿದೆ.

IMG-20250108-WA0008-433x1024 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

ಇತ್ತೀಚೆಗೆ 35 ವರ್ಷಗಳಿಂದ ಬೆಳ್ತಂಗಡಿ ನಗರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಾಗಿ ದುಡಿದು ನೂರಾರು ಮೃತ ದೇಹಗಳ ಅಂತ್ಯಸಂಸ್ಕಾರ ಮಾಡಿದ್ದ ರೆಂಕೆದಗುತ್ತು ನಿವಾಸಿ ಅಣ್ಣಿ ಯಾನೆ ಪುನ್ಕುಡ ಎಂಬವರು
ನಿಧನರಾದಾಗ ಮನೆಯಿಂದ 300 ಮೀಟರ್ ದೂರದಲ್ಲಿ ಸಾರ್ವಜನಿಕ ಸ್ಮಶಾನವಿದ್ದರೂ ಇದು ಶಿಥಿಲಾವಸ್ಥೆಯಲ್ಲಿರುವ ಕಾರಣ 6 ಕಿ.ಮೀ ದೂರದ ಲಾಯಿಲಾ ಸಾರ್ವಜನಿಕ ಸ್ಮಶಾನಕ್ಕೆ ಶವವನ್ನು ಬಾಡಿಗೆ ಅಂಬ್ಯುಲೆನ್ಸ್ ನಲ್ಲಿ ಸಾಗಿಸಿ 5,000 ರೂಪಾಯಿ ಕೊಟ್ಟು
ಅಂತ್ಯಸಂಸ್ಕಾರ ಮಾಡಬೇಕಾಯಿತು.
ಇದೀಗ ಮೆಸ್ಕಾಂ ನ ಪವರ್ ಮ್ಯಾನ್ ಶೀನ ಎಂಬವರು ನಿಧನರಾಗಿದ್ದು ಇವರ ಅಂತ್ಯಸಂಸ್ಕಾರಕ್ಕಾಗಿ ಸಂಪೂರ್ಣ ಅಂಗವೈಕಲ್ಯ ಹೊಂದಿರುವ , ಬಹುಭಾಗ ಗುಜರಿ ಕಳ್ಳರ ಪಾಲಾಗಿರುವ ರೆಂಕೆದಗುತ್ತು ಸಾರ್ವಜನಿಕ ಸ್ಮಶಾನವನ್ನು ಅನಿವಾರ್ಯವಾಗಿ ಮೃತರ ಮನೆಯವರೇ ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡು ಅಂತ್ಯಸಂಸ್ಕಾರ ನಡೆಸಿದ ಘಟನೆ ವರದಿಯಾಗಿದೆ.

IMG-20250108-WA0002-576x1024 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

ರೆಂಕೆದಗುತ್ತು-ಕೆಲ್ಲಗುತ್ತು ಸಾರ್ವಜನಿಕ ಸ್ಮಶಾನವು 2008-09 ಮತ್ತು 2009-10ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಯೋಜನೆಯ ಅನುದಾನದ 6.50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ
ನಿರ್ಮಾಣಗೊಂಡಿದ್ದು ಇದೀಗ ನಿರುಪಯುಕ್ತವಾಗಿದೆ.

ಇತ್ತೀಚೆಗೆ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯ ಜಗದೀಶ್ ಅವರು ಈ ಸ್ಮಶಾನದ ದುಸ್ಥಿತಿಯ ಬಗ್ಗೆ ಧ್ವನಿ ಎತ್ತಿದ್ದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದು ಸಾಮಾನ್ಯ ಸಭೆಯಲ್ಲಿ ದುರಸ್ತಿ ಬಗ್ಗೆ ಕೈಗೊಂಡ ನಿರ್ಣಯಗಳು ಅಕಸ್ಮಾತ್ ಮರುದಿನವೇ ಮರೆತಿದ್ದರೂ ಇಲ್ಲಿಗೆ ಇನ್ನೊಂದು ಶವ ಬರುವ ಮೊದಲಾದರೂ ನೆನಪಾಗುವುದೇ? ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬಂದರೂ ಅಚ್ಚರಿ ಇಲ್ಲ.

IMG-20250108-WA0001-576x1024 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

ಈ ನಿರ್ಲಕ್ಷಿತ ಸ್ಮಶಾನದ ದುಸ್ಥಿತಿಯನ್ನು ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತದ ನಿರ್ಲಕ್ಷ್ಯವನ್ನು ಕಂಡು ಬೆಳ್ತಂಗಡಿಯ ಜನಪ್ರಿಯ ಖಾಸಗಿ ಸಂಸ್ಥೆಯೊಂದು ಸ್ಮಶಾನವನ್ನು ನವೀಕರಿಸಲು ಹಾಗೂ ನಿರ್ವಹಣೆಯ ಜವಾಬ್ದಾರಿವಹಿಸಿಕೊಳ್ಳಲು ಮುಂದೆ ಬಂದಿತ್ತು,
ಆದರೆ ಪಟ್ಟಣ ಪಂಚಾಯತ್ ನಿರೀಕ್ಷೆಯಂತೆ ಸ್ಪಂದಿಸದೆ ಖಾಸಗಿ ಸಂಸ್ಥೆಯ ಕನಸಿಗೆ ಕಲ್ಲು ಬಿತ್ತೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಮೃತ ದೇಹಗಳ ಅಂತ್ಯ ಸಂಸ್ಕಾರ ನಡೆಸುವ ಸ್ಮಶಾನದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವಿರುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಬದುಕಿರುವವರ ಸಂಕಷ್ಟ, ಕುಂದು , ಕೊರತೆಗಳನ್ನು ನಿವಾರಿಸುವ ಕಾಳಜಿ ಇರಬಹುದೇ? ಎಂಬ ಪ್ರಶ್ನೆಯೊಂದು ನಾಗರಿಕರಿಂದ ಕೇಳಿ ಬರುತ್ತಿದೆ.
ರೆಂಕೆದಗುತ್ತು ಸಾರ್ವಜನಿಕ ಸ್ಮಶಾನದ ದುಸ್ಥಿತಿ ಹೀಗಾದರೆ ನಗರದಲ್ಲಿ 40 ಲಕ್ಷ ರೂ ವೆಚ್ಚದ ನೂತನ ಸ್ಮಶಾನಕ್ಕೆ ಬುಧವಾರ ನಗರ ಪಂಚಾಯತ್ ವತಿಯಿಂದ ಶಿಲಾನ್ಯಾಸ ನಡೆದಿದೆ.
ಶಿಥಿಲಾವಸ್ಥೆಯಲ್ಲಿರುವ ರೆಂಕೆದಗುತ್ತು ಸ್ಮಶಾನದ ದುರಸ್ತಿಗೆ ಒತ್ತಾಯಿಸಿ ಮೃತರ ಆತ್ಮಗಳು ಧರಣಿ ಕೂರಬೇಕೆಂದು ಪಟ್ಟಣ ಪಂಚಾಯತ್ ಆಡಳಿತವು ಕಾಯುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬರುವಂತಾಗಿದೆ.

IMG-20250108-WA0000-433x1024 ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

Post Comment

ಟ್ರೆಂಡಿಂಗ್‌