ಬಂದಾರು: ಕೌಟುಂಬಿಕ ಕಲಹ ಕುಟುಂಬಗಳ ಮಧ್ಯೆ ಮಾರಾಮಾರಿ; ಗಾಯಗೊಂಡ ಎರಡೂ ಕುಟುಂಬದವರೂ ಆಸ್ಪತ್ರೆಗೆ ದಾಖಲು
ಬೆಳ್ತಂಗಡಿ : ಕೌಟುಂಬಿಕ ಕಲಹವೊಂದರಲ್ಲಿ ಎರಡು ಕುಟುಂಬಗಳ ನಡುವೆ ಪರಸ್ಪರ ಕತ್ತಿ,ದೊಣ್ಣೆ ಮತ್ತಿತರ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿದ್ದು ಮಾರಣಾಂತಿಕ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಎರಡೂ ಕುಟುಂಬಗಳಿಗೆ ಸೇರಿದವರು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾದ ಘಟನೆ ಬಂದಾರು ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಓಜಾಳಿ ಎಂಬಲ್ಲಿನ ನಿವಾಸಿಗಳಾದ ನೆರೆಹೊರೆಯ ಜಾರಪ್ಪ ಗೌಡ ಮತ್ತು ಕುಟುಂಬದವರು , ಎಲ್ಯಣ್ಣ ಗೌಡ ಕುಟುಂಬದವರು ಮಧ್ಯೆ ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಟ ನಡೆದಿದೆ.
ಕ್ಷುಲ್ಲಕ ಕಾರಣಕ್ಕಾಗಿ ಮತ್ತು ಸೋದರ ಸಂಬಂಧಿಗಳಾದ ಎರಡು ಕುಟುಂಗಳ ಮಧ್ಯೆ ಅಪಾರ್ಥದಿಂದ ಕೌಟುಂಬಿಕ ಕಲಹ ಉಂಟಾಗಿದ್ದು ಎರಡು ದಿನಗಳ ಹಿಂದೆ ಮಾರಣಾಂತಿಕ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಜಾರಪ್ಪ ಗೌಡ (47) ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು ಪತ್ನಿ ಸುನಂಧ ಎಂಬವರ ಸೊಂಟಕ್ಕೆ ಏಟು ಬಿದ್ದಿದೆ ಎಂದು ತಿಳಿದು ಬಂದಿದೆ.
ಮಾರಣಾಂತಿಕ ಹಲ್ಲೆಯಲ್ಲಿ ಭಾಗಿಯಾಗಿ ಘಟನೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ಜಿತೇಂದ್ರ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ತಡ ರಾತ್ರಿ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಎಲ್ಯಣ್ಣ ಗೌಡ ಎಂಬವರ ಮಗ ಗಣೇಶ ಎಂಬಾತ ಜಾರಪ್ಪ ಗೌಡ ಅವರ ಮಗನ ವಿರುದ್ಧ ತನ್ನ ಪತ್ನಿಯ ಮಾನಭಂಗ ಯತ್ನದ ದೂರು ನೀಡಿದ್ದು ಇದರ ಬೆನ್ನಲ್ಲೇ ದೂರು ಕೊಟ್ಟ ಗಣೇಶ , ರಮೇಶ ಎಲ್ಯಣ್ಣ ಎಂಬವರು ಮನೆಗೆ ನುಗ್ಗಿ ಪಕ್ಕದ ಮನೆಯ ಜಾರಪ್ಪ ಗೌಡ ಹಾಗೂ ಪತ್ನಿ ಸುನಂಧ ಎಂಬವರನ್ನು ಮನೆಯಿಂದ ಹೊರಗೆಳೆದು ಅಂಗಳದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆಗೆ ನುಗ್ಗಿ ಹಲ್ಲೆ ಮಾಡಿದ ಸಂದರ್ಭ ಜಿತೇಂದ್ರ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಆದರೆ ಜಾರಪ್ಪ ಗೌಡ ಮತ್ತು ಸುನಂಧ ಎಂಬವರ ಮೇಲೆ ಗಂಭೀರ ಹಲ್ಲೆ ನಡೆಸಿದ ಬೆನ್ನಲ್ಲೇ ಇವರ ಮಗನಾದ ಜಿತೇಂದ್ರ ಎಂಬವರು ಎಲ್ಯಣ್ಣ ಗೌಡ, ನಾಗಮ್ಮ , ಗಣೀಶ, ರಮೇಶ ಎಂಬವರಿಗೆ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮಧ್ಯೆ ಮಾನಭಂಗ ಯತ್ನಿಸಿದ್ದಾನೆ ಎಂಬ ಆರೋಪಿಸಿ ಪತಿ ಕೊಟ್ಟ ದೂರನ್ನು ಪತ್ನಿ ನಿರಾಕರಿಸಿದ್ದು ಇದೇ ಸುಳ್ಳು ದೂರು ಎರಡು ಕುಟುಂಬಗಳ ನಡುವಿನ ಮಾರಾಮಾರಿಗೆ ಕಾರಣವಾಯಿತೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಕೆಲವು ದಿನಗಳ ಹಿಂದೆ ಸಂಬಂಧಿ ಮಹಿಳೆ ಬಿಸಿಲಿನ ಹೊತ್ತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆ ಕೇಳಿಕೊಂಡ ಕಾರಣಕ್ಕಾಗಿ ಬೈಕಿನಲ್ಲಿ ಕೂರಿಸಿಕೊಂಡು ಮನೆಗೆ ಬಿಟ್ಟಿದ್ದನ್ನು ಅಪಾರ್ಥ ಮಾಡಿಕೊಂಡು ಮಾನಭಂಗ ಯತ್ನದ ದೂರು ಕೊಟ್ಟಿರುವುದು ಇದೀಗ ಕೌಟುಂಬಿಕ ರಾದ್ಧಾಂತಕ್ಕೆ ಕಾರಣವಾಗಿದೆ.
ಇದೀಗ ಎರಡೂ ಕುಟುಂಬಕ್ಕೆ ಸೇರಿದವರು ಬೆಳ್ತಂಗಡಿ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Post Comment