ಬೆಳ್ತಂಗಡಿ ‘ಕನ್ನಡ ತೇರು’ ಏರುಪೇರು!?

ಬೆಳ್ತಂಗಡಿ : ಅತೀ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಈ ಭಾರಿಯ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮ ಒಣ ಪ್ರತಿಷ್ಠೆಗಾಗಿ ಎಳ್ಳು ನೀರು ಬಿಟ್ಟವರು ಯಾರು ಎಂಬ ಪ್ರಶ್ನೆಗೆ ತಾಲೂಕಿನ ಸಾಹಿತ್ಯಾಭಿಮಾನಿಗಳು ಇದೀಗ ಉತ್ತರ ಹುಡುಕಿಕೊಂಡಿದ್ದಾರೆ.
ಇದಕ್ಕೆ ಕಾರಣ ಅಧ್ಯಕ್ಷರಿಬ್ಬರ ಮುಸುಕಿನ ಗುದ್ದಾಟದಿಂದಾಗಿ ತಾಲೂಕಿನಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದಿರುವುದು ಆಗಿರಬಹುದೇ? ಎಂಬ ಪ್ರಶ್ನೆ ಮೂಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಸಂಪ್ರದಾಯದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಪನ್ನಗೊಂಡಿದ್ದು ಇತ್ತ ಕ.ಸಾ.ಪ.ದ ಬೆಳ್ತಂಗಡಿ ತಾಲೂಕು ಘಟಕ ನಿದ್ದೆಯಲ್ಲಿದೆಯೋ… ನಿದ್ದೆಯಲ್ಲಿದ್ದಂತೆ ನಟಿಸುತ್ತಿದೆಯೋ…
ಅಥವಾ ಅಧ್ಯಕ್ಷರಿಬ್ಬರ ಸಮನ್ವಯತೆಯ ಕೊರತೆಯಲ್ಲಿ ನರಳುತ್ತಿದ್ದಾರೋ ಎಂಬಿತ್ಯಾದಿ ಪ್ರಶ್ನೆಗಳು ಬಲವಾಗಿ ಕೇಳಿ ಬರುತ್ತಿದೆ.
ತಾಲೂಕಿನಲ್ಲಿ ಕನ್ನಡದ ತೇರು ಎಳೆಯುವುದು ಯಾವಾಗ ಮತ್ತು ಎಳೆಯುವವರು ಯಾರು ಎಂದು ಕನ್ನಡ ಸಾಹಿತ್ಯ ಪ್ರಿಯರು ಪ್ರಶ್ನಿಸುತ್ತಿದ್ದಾರೆ. ಪ್ರತಿ ವರ್ಷ ನವೆಂಬರ್ ನಿಂದ ಫೆಬ್ರವರಿಯೊಳಗೆ ತಾಲೂಕಿನ ಯಾವುದಾದರೊಂದು ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಾ ಬಂದಿರುವುದು ಇತಿಹಾಸ.
ಬೆಳ್ತಂಗಡಿ, ಉಜಿರೆ, ವೇಣೂರು, ಮಡಂತ್ಯಾರು, ಕೊಲ್ಲಿ, ಮುಂಡಾಜೆ, ನಿಡ್ಲೆ, ಗುರುವಾಯನಕೆರೆ, ಸೌತಡ್ಕ, ಇಳಂತಿಲ, ಶಿಶಿಲ, ಬೆಳಾಲು, ಅಳದಂಗಡಿ, ಪೆರಿಂಜೆ ಮುಂತಾದೆಡೆ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಕೆಲವೆಡೆ ನೀರಸವಾಗಿ ನಡೆದಿವೆ.
ಕಳೆದ ಬಾರಿ ಬೆಳ್ತಂಗಡಿಯ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು.
ಆದರೆ ಈ ಬಾರಿ ಯಾಕೋ ತಾಲೂಕಿನಲ್ಲಿ ಕನ್ನಡ ತೇರನ್ನು ಎಳೆಯಲು ಕ.ಸಾ.ಪ. ತಾಲೂಕಾಧ್ಯಕ್ಷರು ಉತ್ಸಾಹ ತೋರದೆ ನಿರ್ಲಕ್ಷ್ಯವಹಿಸಿ ತಮ್ಮ ಜವಾಬ್ದಾರಿಯುತ ಹುದ್ದೆಗೆ ಅನ್ಯಾಯವೆಸಗಲು ಬಲವಾದ ಕಾರಣಗಳೇನಿರಬಹುದು ಎಂಬುದನ್ನು ಬಲ್ಲವರೇ ಬಲ್ಲರು..!
ಕ.ಸಾ.ಪ. ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಬೆಳ್ತಂಗಡಿಯವರೇ ಆಗಿದ್ದರೂ ಕ.ಸಾ.ಪ.ಗೆ ಇಂಥ ಸ್ಥಿತಿ ಬಂದಿರುವುದು ಕನ್ನಡ ಸಾಹಿತ್ಯಾಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದ ನ. 23 ರಂದು, ಕಡಬದಲ್ಲಿ ನ. 30 ರಂದು, ಬಂಟ್ವಾಳದಲ್ಲಿ ಜ. 4 ರಂದು, ಮೂಲ್ಕಿ ತಾಲೂಕಿನಲ್ಲಿ
ಫೆ. 8 ರಂದು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು ಉಳ್ಳಾಲ ತಾಲೂಕಿನ ಮಂಗಳೂರು ವಿ.ವಿ.ಯಲ್ಲಿ ಫೆ. 21 ಮತ್ತು 22 ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪುತ್ತೂರಿನಲ್ಲಿ ಕ್ರಿಯಾಶೀಲ ಅಧ್ಯಕ್ಷರೇ ಇದ್ದಾರೆ. ಅವರು ಗ್ರಾಮ ಸಾಹಿತ್ಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ತಾಲೂಕು ಸಮ್ಮೇಳನ ನಡೆಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ದ.ಕ.ದ ಪಕ್ಕದ ಜಿಲ್ಲೆಯ ಹೆಬ್ರಿಯ ಶಿವಪುರದಲ್ಲಿ ಸಮ್ಮೇಳನ ನಡೆಯುತ್ತಿದೆ. ಸರಕಾರದಿಂದ ಅನುದಾನ ಬರುವುದಿಲ್ಲ ಎಂಬ ಮಾತು ಇದ್ದರೂ ಅನ್ಯ ತಾಲೂಕಿನಲ್ಲಿ ದಾನಿಗಳ ಮತ್ತು ಸ್ಥಳೀಯಾಡಳಿದ ಸಹಕಾರದಲ್ಲಿ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿರುವುದು ಬೆಳ್ತಂಗಡಿ ತಾಲೂಕು ಕ.ಸಾ.ಪ. ಗಮನಿಸಬೇಕಾದ ಸಂಗತಿ.
ಬೆಳ್ತಂಗಡಿ ತಾಲೂಕಿನಲ್ಲಿ ಕನ್ನಡದ ಮನಸ್ಸುಗಳು ಸಾಹಿತ್ಯಾಭಿಮಾನಿ ದಾನಿಗಳು ಸಂಘ ಸಂಸ್ಥೆಗಳು ಒಂದಾಗಿ ಕೈಜೋಡಿಸಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಉದಾಹರಣೆಗಳಿವೆ ಎಂಬುದನ್ನು ಬೆಳ್ತಂಗಡಿ ಕ.ಸಾ.ಪ. ಪದಾರ್ಥಗಳು ಮರೆತಿರುವುದು ಏಕೆ ಎನ್ನುವುದೇ ಅಚ್ಚರಿಯ ಸಂಗತಿ. ಆದರೆ ಮನಸ್ಸುಗಳನ್ನು ಬೆಸೆಯುವ, ಒಂದು ಮಾಡುವ ಕೆಲಸ ಅಧ್ಯಕ್ಷರಿಂದ ಆಗದೇ ಇರುವುದು ವಿಪರ್ಯಾಸ. ಒಂದೆಡೆ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಕ.ಸಾ.ಪ. ಅಧ್ಯಕ್ಷರು ಕಳೆದ ಬಾರಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಸಮ್ಮೇಳನ ಸಂಘಟಿಸಿ ಕಾಲರ್ ಮೇಲೆತ್ತಿಕೊಂಡಿದ್ದರು. ಆದರೆ ಸಂಘಟಿತ ಪ್ರಯತ್ನದಿಂದ ತಾಲೂಕಿನ ಬೇರೆ ಊರಿನಲ್ಲಿ ಕನಿಷ್ಠ ಒಂದು ದಿನದ ಸಮ್ಮೇಳನವನ್ನಾದರೂ ಆಯೋಜಿಸಲು ವಿಫಲರಾಗಿರುವುದು ತಮ್ಮ ಹುದ್ದೆಗೆ ತಾವೇ ಅವಮಾನಿಸಿದಂತಾಗಿದೆ ಮತ್ತು ಕನ್ನಡ ಸೇವೆಯ ನಿಷ್ಠೆಯನ್ನೇ ಅನುಮಾನಿಸುವಂತೆ ಮಾಡಿದೆ ಎಂಬ ಆರೋಪಗಳು ಕೇಳಿ ಬರಲು ಕಾರಣವಾಗಿದೆ.
ಪ್ರತೀ ವರ್ಷದ ಸಮ್ಮೇಳನದಲ್ಲಿ ‘ಚಾರುಮುಡಿ’ (ಸ್ಮರಣಸಂಚಿಕೆ) ಬಿಡುಗಡೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು ಆದರೆ ಉಜಿರೆ ಸಮ್ಮೇಳನದಲ್ಲಿ ಆರ್ಥಿಕ ಅಡಚಣೆ ನೆಪದಲ್ಲಿ ಅದೂ ಇಲ್ಲ. ‘ಚಾರುಮುಡಿ’ ಸಂಚಿಕೆಗೆ ಸಂಪಾದಕರಾಗಿ ಸಮ್ಮೇಳನಾಧ್ಯಕ್ಷರ ಭಾಷಣದಿಂದ ವಿವಿಧ ಬರಹಗಾರರಿಂದ ಕವನ, ಲೇಖನಗಳನ್ನು ಪಡೆದುಕೊಂಡವರು ಎಲ್ಲಿದ್ದಾರೋ ಗೊತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬೆಳವಣಿಗೆ ತಾಲೂಕಿನ ಕನ್ನಡ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದೆ. ಇನ್ನೊಂದೆಡೆ ಜಿಲ್ಲಾಧ್ಯಕ್ಷರು ಬೆಳ್ತಂಗಡಿ ತಾಲೂಕಿನವರೇ ಆಗಿದ್ದು ಇಬ್ಬರು ಅಧ್ಯಕ್ಷರ ತವರು ತಾಲೂಕಿನಲ್ಲೆ ಸಮ್ಮೇಳನ ನಡೆಸದೆ ಜಾರಿಕೊಂಡಿರುವುದು ನಂಬಲೇಬೇಕಾದ ಸತ್ಯವಾಗಿದೆ.
“ಸಮ್ಮೇಳನ ನಡೆಸಬೇಕಿತ್ತು. ಜವಾಬ್ದಾರಿ ತೆಗೆದುಕೊಂಡು, ಕೆಲಸ ಮಾಡುವ ಸಾಮರ್ಥ್ಯದವರು ಯಾರಾದರು ಇದ್ದರೆ ಸಮ್ಮೇಳನ ನಡೆಸಬಹುದು. ಇನ್ನು ಕಾಲೇಜು, ಹೈಸ್ಕೂಲು ಮಕ್ಕಳಿಗೆ ಪರೀಕ್ಷೆಗಳು ಇರುವುದರಿಂದ ಸಮ್ಮೇಳನ ನಡೆಸುವುದು ಕಷ್ಟ ಸಾಧ್ಯ ಹೀಗಾಗಿ ಈ ಬಾರಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲ” ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಯದುಪತಿ ಗೌಡ ಜಾರಿಕೊಳ್ಳುತ್ತಾರೆ.
ಇನ್ನೊಂದೆಡೆ “ತಾಲೂಕಿನಲ್ಲಿ ಸಮ್ಮೇಳನ ನಡೆಸಲಾಗದಿರುವುದು ಬೇಸರದ ಸಂಗತಿ. ಈ ಬಾರಿ ನಾರಾವಿಯಲ್ಲಿ ಸಮ್ಮೇಳನ ನಡೆಸುವುದು ಎಂಬ ಚಿಂತನೆ ಇತ್ತು. ಆದರೆ ಇದುವರೆಗೆ ಸಾಧ್ಯವಾಗಿಲ್ಲ. ನನಗೆ ಜಿಲ್ಲೆಯ ಜವಾಬ್ದಾರಿ ಇರುವುದರಿಂದ ತಾಲೂಕಿನ ಕಡೆ ಗಮನ ಕಡಿಮೆಯಾಯಿತು.” ಎಂದು ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಶ್ರೀನಾಥ್ ಸಮಜಾಯಿಷಿಕೊಳ್ಳುತ್ತಾರೆ. ಅಚ್ಚರಿಯ ಸಂಗತಿ ಎಂದರೆ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು “ಯಾರಾದರೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವ ಸಾಮರ್ಥ್ಯದವರು ಇದ್ದರೆ” ಸಮ್ಮೇಳನ ನಡೆಸಬಹುದೆಂದು ಉಡಾಫೆಯಿಂದ ಜಾರಿಕೊಳ್ಳುವ ಯದುಪತಿ ಗೌಡ ಅವರು ಕೆಲಸ ಮಾಡಲು ಸಾಮರ್ಥ್ಯ ಇಲ್ಲದೆ ಜವಾಬ್ದಾರಿ ತೆಗೆದುಕೊಂಡರೆ ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
Post Comment