ಶ್ರೀರಾಮ ನವಮಿ ದಿನ ಧರ್ಮಸ್ಥಳದಿಂದ ಸೌಜನ್ಯ ನ್ಯಾಯ ಯಾತ್ರೆ : ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಪರ ಹೋರಾಟಕ್ಕೆ ಕಾನೂನಾತ್ಮಕ ಅಡ್ಡಿ ತೆರವಾದ ಬೆನ್ನಲ್ಲೇ ಬೆಂಗಳೂರು,ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿದ್ದು
ಇದೀಗ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಸಮೀಪದ ಸೌಜನ್ಯ ಶವ ಪತ್ತೆಯಾದ ಸ್ಥಳವಾದ ಮಣ್ಣಸಂಕ ಎಂಬಲ್ಲಿಂದ ಬೆಳ್ತಂಗಡಿ ತಾಲೂಕು ಆಡಳಿತ ಸೌಧ ವಠಾರದವರೆಗೆ ಹಿಂದೂಗಳ ಪವಿತ್ರ ರಾಮ ನವಮಿ ದಿನವಾದ ಏಪ್ರಿಲ್ 6ರಂದು ಸೌಜನ್ಯ ತಾಯಿ ಕುಸುಮಾವತಿ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ ಎಂಬ ಮಾಹಿತಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪಿ.ಯು.ಸಿ. ವಿದ್ಯಾರ್ಥಿನಿ ಕು.ಸೌಜನ್ಯ 2012ರ ಅಕ್ಟೋಬರ್ 9ರಂದು ಬೆಳಿಗ್ಗೆ ಕಾಲೇಜಿಗೆ ಹೋದವಳು ಮಧ್ಯಾಹ್ನ ಮೇಲೆ ಕಾಲೇಜಿನಿಂದ ಹೊರಟವಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಳು.
ಕಾಲೇಜಿನಿಂದ ಹೊರಟು ಗೆಳತಿಯೊಂದಿಗೆ ಕೆಎಸ್ ಆರ್ ಟಿಸಿ ಬಸ್ಸಲ್ಲಿ ಬಂದು ನೇತ್ರಾವತಿ ಸ್ನಾನಘಟ್ಟ ನಿಲ್ದಾಣದಲ್ಲಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಪ್ರಕೃತಿ ಚಿಕಿತ್ಸಾಲಯ ಗೇಟ್ ಬಳಿಯ ಮಣ್ಣಸಂಕ ಎಂಬಲ್ಲಿಂದ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಸೌಜನ್ಯ ಅಕ್ಟೋಬರ್ 10ರಂದು ಅತ್ಯಾಚಾರಕ್ಕೊಳಗಾಗಿ ಬರ್ಭರವಾಗಿ ಕೊಲೆಯಾಗಿ ಪತ್ತೆಯಾಗಿದ್ದಳು.
ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ದೇವಳದ ಕೆಲಸಗಾರರು ಗೊಮ್ಮಟ ಬೆಟ್ಟದಲ್ಲಿ ಕುಳಿತಿದ್ದ ಸಂತೋಷ್ ರಾವ್ ಎಂಬಾತನನ್ನು ಸಂಶಯದ ಮೇಲೆ ಹಿಡಿದು ಪೊಲೀಸರಿಗೊಪ್ಪಿಸಿದ್ದು ರಾತ್ರಿ ಬೆಳಗಾಗುವುದರೊಳಗೆ ಈತನೇ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಯಾಗಿ ಬಂಧಿಸಲ್ಪಟ್ಟು ಜೈಲು ಸೇರಿದ್ದ. ಸಂತೋಷ್ ರಾವ್ ಅಮಾಯಕ, ಪ್ರಕರಣದ ನೈಜ ಆರೋಪಿಗಳು ಬೇರೆಯೇ ಇದ್ದಾರೆ, ಸೌಜನ್ಯ ಅತ್ಯಾಚಾರ-ಕೊಲೆ ಒಬ್ಬನಿಂದ ನಡೆದಿಲ್ಲ ಇದೊಂದು ಸಾಮುಹಿಕ ಕೃತ್ಯವಾಗಿದೆ. ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಲಾಗುತ್ತಿದೆ, ಪ್ರಕರಣವನ್ನು ಮುಚ್ಚಿ ಹಾಕಿ ನೈಜ ಆರೋಪಗಳನ್ನು ರಕ್ಷಿಸಲಾಗುತ್ತಿದೆ, ಇದರ ಹಿಂದೆ ಪ್ರಭಾವೀ ವ್ಯಕ್ತಿಗಳ ಕೈವಾಡ ಇದೆ ಎಂಬ ಆರೋಪ ಬಲವಾಗಿ ಮತ್ತು ವ್ಯಾಪಕವಾಗಿ ಕೇಳಿ ಬಂದಿತ್ತು.
ಸಮರ್ಪಕ ತನಿಖೆಗಾಗಿ ನೈಜ ಅರೋಪಿಗಳ ಪತ್ತೆಗಾಗಿ ಪ್ರಾರಂಭದಲ್ಲೆ ವ್ಯಾಪಕ ಒತ್ತಾಯಗಳು ಕೇಳಿ ಬಂದಿತ್ತು. ರಾಜ್ಯಾದ್ಯಂತ ನಡೆದ
ಹೋರಾಟಗಳಿಗೆ ಮಣಿದ ರಾಜ್ಯ ಸರಕಾರ ಅಂದಿನ ಶಾಸಕ ಕೆ. ವಸಂತ ಬಂಗೇರ ಅವರ ಶಿಫಾರಸ್ಸಿನಂತೆ ಸೌಜನ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಆದರೆ ಪ್ರಕರಣದಾರಂಭದಲ್ಲಿ
ಇಂಥ ಗಂಭೀರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ರಕ್ಷಿಸಬೇಕಿದ್ದ ಪೊಲೀಸ್ ಅಧಿಕಾರಿಗಳೇ ಸಾಕ್ಷ್ಯ ನಾಶದ ಗುತ್ತಿಗೆ ಪಡೆದಂತೆ ವರ್ತಿಸಿದ್ದೇ ಆಕ್ರೋಶ ಕೆರಳಲು ಕಾರಣವಾಗಿತ್ತು.
ಸಾಕ್ಷ್ಯ ನಾಶದಲ್ಲಿ ಪೊಲೀಸರೇ ಪ್ರಮುಖ ಪಾತ್ರವಹಿಸಿರುವಂತೆ ವರ್ತಿಸಿದ್ದರು.
ಇಡೀ ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಕಾಣದ ಕೈಗಳ ಕಾಣುವ ಖಾಕಿಗಳ ಪೂರ್ವಯೋಜಿತ ಸಂಚಿನ ಭಾಗವಾಗಿ ಸಾಂದರ್ಭಿಕ ಆರೋಪಿಯಾಗಿ ವ್ಯವಸ್ಥಿತವಾಗಿ ಸಿಲುಕಿಸಲ್ಪಟ್ಟ ಸಂತೋಷ್ ರಾವ್ ನನ್ನು ಸ್ಥಳ ಮಹಜಿರಿನ ವೇಳೆ ನಡೆಸಿಕೊಂಡ ರೀತಿ ಮತ್ತು ಸೌಜನ್ಯ ಮರಣೋತ್ತರ ಪರೀಕ್ಷೆ ಸಂಶಯಾಸ್ಪದವಾಗಿ ನಡೆದಿತ್ತು. ಒಂದೆಡೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇನ್ನೊಂದೆಡೆ
ಎಫ್ ಎಸ್.ಎಲ್. ಪರೀಕ್ಷೆಯಲ್ಲಿ ಕಾಣದ ಕೈಗಳು ‘ಆಟ’ ಆಡಿದ್ದವು. ಎಂಬ ಆರೋಪಗಳು ಕೇಳಿ ಬಂದಿದ್ದವು. ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಸೌಜನ್ಯ ಮೃತದೇಹ ಪತ್ತೆಯಾಗಿ ಸೌಜನ್ಯ ಹೆತ್ತವರು ಪೊಲೀಸ್ ಠಾಣೆಗೆ ಕೊಟ್ಟ ದೂರು ದಾಖಲಿಸುವಲ್ಲಿಂದ ಹಿಡಿದು ಮರಣೋತ್ತರ ಪರೀಕ್ಷೆ, ಸ್ಥಳ ಮಹಜರು ಇತ್ಯಾದಿ ಎಲ್ಲಾ ಮಹತ್ವದ ಪೊಲೀಸ್ ಪ್ರಕ್ರಿಯೆಗಳು ಸೌಜನ್ಯ ಹೆತ್ತವರ ವಿಶ್ವಾಸಾರ್ಹವಾಗಿ ನಡೆದಿಲ್ಲ ಅಥವಾ ಸಾಕ್ಷ್ಯ ನಾಶಕ್ಕಾಗಿಯೇ ನಡೆದ ಪೂರ್ವ ಯೋಜಿತ ಪ್ರಹಸನದಂತೆ ನಡೆದಿತ್ತು.
ಸರಣಿ ಪ್ರತಿಭಟನೆಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆದು ಸರಕಾರಕ್ಕೆ ವರದಿ ಸಲ್ಲಿಕೆಯಾಗಿ ಇನ್ನೊಂದೆಡೆ ನ್ಯಾಯಾಲಯದಲ್ಲಿ ನಡೆದ ಕಾನೂನಾತ್ಕಕ ಹೋರಾಟ ಮುಂದುವರಿದಿತ್ತು.
ಸಿಬಿಐ ವಿಶೇಷ ನ್ಯಾಯಾಲಯವು 12 ವರ್ಷಗಳ ಬಳಿಕ ನೀಡಿದ ಸೌಜನ್ಯ ಪ್ರಕರಣದ ತೀರ್ಪಿನಲ್ಲಿ ಸಂತೋಷ್ ರಾವ್ ನಿರಪರಾಧಿಯಾಗಿ ಹೊರಬಂದಿದ್ದು ಸೌಜನ್ಯ ಪ್ರಕರಣ ನೈಜ ಆರೋಪಿಗಳ ಪತ್ತೆಗಾಗಿ ನಿಜವಾದ ಹೋರಾಟ ಆರಂಭವಾಗಿದ್ದೇ ಸಂತೋಷ್ ರಾವ್ ನಿರ್ದೋಷಿ ಎಂಬ ತೀರ್ಪು ಬಂದಾಗ.
ಇದರ ಬೆನ್ನಲ್ಲೇ ಮತ್ತೆ ಹೋರಾಟಗಳು ಸಮರೋಪಾದಿಯಲ್ಲಿ ಮುಂದುವರಿದರೂ ಇನ್ನೊಂದೆಡೆ ಸೌಜನ್ಯಪರ ಹೋರಾಟಗಾರರಿಗೆ ಕಾನೂನಾತ್ಮಕ ಅಡೆತಡೆಗಳು ಎದುರಾಗಿದ್ದವು. ಹೋರಾಟಗಳಿಗೆ ಎದುರಾದ ಅಡೆತಡೆಗಳನ್ನು ಕಾನೂನಾತ್ಮಕ ಹೋರಾಟದಿಂದಲೇ ಎದುರಿಸಿದ ಸೌಜನ್ಯ ಹೆತ್ತವರು ಮತ್ತು ಹೋರಾಟಗಾರರಿಗೆ ಇದೀಗ ಹೋರಾಟವನ್ನು ಮುಂದುವರಿಸಬಹುದೆಂಬ ತೀರ್ಪನ್ನು ನ್ಯಾಯಾಲಯವೇ ನೀಡಿದ್ದು ಇದೀಗ ಮತ್ತೆ ಇಡೀ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೂರಾರು ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಇನ್ನಷ್ಟು ಪ್ರತಿಭಟನೆಗಳಿಗೆ ವೇದಿಕೆ ಸಿದ್ಧವಾಗುತ್ತಿದೆ.
ಇದರ ಮೊದಲ ಭಾಗವಾಗಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಮರುತನಿಖೆಗಾಗಿ ಒತ್ತಾಯಿಸಿ ಏಪ್ರಿಲ್ 6 ಶ್ರೀ ರಾಮ ನವಮಿ ದಿನ ಧರ್ಮಸ್ಥಳ ಮಣ್ಣಸಂಕ (ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳ ಮತ್ತು ಅಪಹರಣಕ್ಕೊಳಗಾದ ಪ್ರದೇಶ) ಎಂಬಲ್ಲಿಂದ ಬೃಹತ್ ಪಾದಯಾತ್ರೆ ಹೊರಡಲಿದೆ.
ಸೌಜನ್ಯ ತಾಯಿ ಕುಸುಮಾವತಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ , ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಾಯಕತ್ವದಲ್ಲಿ ಹೊರಡಲಿರುವ ಬೃಹತ್ ಪಾದಯಾತ್ರೆಯು ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಡೆಯಲಿದ್ದು ರಾಜ್ಯದ ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಲೇಖಕಿಯರ ಸಂಘ ಮುಂತಾದ ಸಾಮಾಜಿಕ ಸಂಘಟನೆಗಳು ಭಾಗಿಯಾಗಗಲಿವೆ.
‘ಸೌಜನ್ಯ’ ಪಾದಯಾತ್ರೆಯ ಬೇಡಿಕೆಗಳು :
ಸೌಜನ್ಯ ಪ್ರಕರಣದ ಕಳಪೆ ತನಿಖೆ ಮಾಡಿ ನ್ಯಾಯದ ದಾರಿ ತಪ್ಪಿಸಿದ ಅಧಿಕಾರಿಗಳನ್ನು ನ್ಯಾಯಾಲಯ ಆದೇಶದಂತೆ ಶಿಕ್ಷೆಗೆ ಒಳಪಡಿಸಬೇಕು, ಧರ್ಮಸ್ಥಳ ಆನೆ ಮಾವುತ ನಾರಾಯಣ ಮತ್ತು ಯಮುನಾ ಕೊಲೆ, ಪದ್ಮಲತಾ, ವೇದವಲ್ಲಿ ಅತ್ಯಾಚಾರ-ಕೊಲೆ ಪ್ರಕರಣಗಳ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.,
ಸೌಜನ್ಯ ಪ್ರಕರಣದ ಪ್ರಮುಖ ಸಾಕ್ಷಿಗಳ ಸಂಶಯಾಸ್ಪದ ಸಾವುಗಳ ತನಿಖೆ ನಡೆಸಿ ಅಪರಾಧಿಗಳನ್ನು ಮತ್ತು ಅಪರಾಧಿಗಳನ್ನು ರಕ್ಷಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ, ಶಿಕ್ಷೆ ಆಗಬೇಕು.,
ನೇತ್ರಾವತಿ ತೀರದಲ್ಲಿ ನಡೆದ 460ಕ್ಕಿಂತಲೂ ಹೆಚ್ಚು ಅಸಹಜ ಮತ್ತು ಸಂಶಯಾಸ್ಪದ ಸಾವುಗಳ ತನಿಖೆ ಆರಂಭವಾಗಬೇಕು, ದಬ್ಬಾಳಿಕೆಯಿಂದ ಅಕ್ರಮವಾಗಿ ವಶ ಪಡಿಸಿಕೊಂಡ ಸರ್ಕಾರೀ ಜಮೀನು, ನಿಮ್ನ ವರ್ಗ ಮತ್ತು ಎಲ್ಲ ವರ್ಗದವರ ಜಮೀನನ್ನು ಭೂಬಾಕರಿಂದ ಸರ್ಕಾರ ತೆರವು ಗೊಳಿಸಬೇಕು,
ರಾಜ್ಯದ ಮೂಲೆ ಮೂಲೆಯಲ್ಲಿ ಜನರ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂಧೆ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಅಮಾಯಕ ಜನತೆಯನ್ನು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸುವುದು, ರಾಜ್ಯಾಧ್ಯoತ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಪೊಲೀಸ್ ಇಲಾಖೆಯಿಂದ ‘ಸೌಜನ್ಯ ಸಹಾಯ ವಾಣಿ’ (SOUJANYA HELP LINE) ಪ್ರಾರಂಭಿಸಿ ಹೆಣ್ಣು ಮಕ್ಕಳನ್ನು ಅತ್ಯಾಚಾರಿ ಮತ್ತು ಬೀದಿ ಕಾಮುಕರಿಂದ ರಕ್ಷಿಸಬೇಕು ಮುಂತಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹೋರಾಟ ಸಾಕ್ಷ್ಯ ನಾಶಗೈದವರ ವಿರುದ್ಧ ನಿರ್ಣಾಯಕ ಸಮರವಾಗಲಿದೆಯೋ ಎಂಬುದನ್ನು ರಾಜ್ಯದ ಜನತೆ ಕಾದು ನೋಡಬೇಕಿದೆ.
Post Comment