ಧರ್ಮಸ್ಥಳ ಸೌಜನ್ಯ ನ್ಯಾಯಕ್ಕಾಗಿ ಸುಪ್ರೀಮ್ ಕೋರ್ಟ್ ಮೆಟ್ಟಲೇರಿ ಹೋರಾಡುತ್ತೇನೆ : ಸೌಜನ್ಯ ತಾಯಿಗೆ ಹೋರಾಟಗಾರ ಚೇತನ್ ಅಹಿಂಸಾ ಭರವಸೆ

ಬೆಳ್ತಂಗಡಿ : ಸೌಜನ್ಯ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಚಲನಚಿತ್ರ ನಟ , ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಅವರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಳದ ಮನೆಗೆ ಭೇಟಿ ನೀಡಿ ಸೌಜನ್ಯ ತಾಯಿ ಕುಸುಮಾವತಿ ಮತ್ತು ಕುಟುಂಬಸ್ಥರಲ್ಲಿ ಮಾತನಾಡಿ ಇಡೀ ಸೌಜನ್ಯ ಪ್ರಕರಣದ ತನಿಖೆಯ ಹಾದಿ ಮತ್ತು ಹೋರಾಟದ ರೂಪು ರೇಷೆಗಳ ವಿವರಗಳನ್ನು ಪಡೆದುಕೊಂಡು ಮುಂದಿನ ಕಾನೂನಾತ್ಮಕ ಹೋರಾಟದ ಬಗ್ಗೆ
ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದ ಗೃಹ ಸಚಿವರ ಜೊತೆ ಸೌಜನ್ಯ ಕುಟುಂಬದ ಮಾತುಕತೆಗಾಗಿ ಕೈಜೋಡಿಸುತ್ತೇನೆ. ಸೌಜನ್ಯ ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮೀಸಲಿಡುತ್ತೇನೆ. ಸೌಜನ್ಯಳು ಕುಸುಮಾವತಿರವರ ಮಗಳು ಮಾತ್ರವಲ್ಲದೆ ನಮ್ಮೆಲ್ಲರ ಮನೆ ಮಗಳಾಗಿದ್ದಾಳೆ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಎಲ್ಲರೂ ಒಂದಾಗಬೇಕು. ಈ ಹೋರಾಟ ರಾಜ್ಯಕ್ಕೆ ಸೀಮಿತವಾಗದೆ ಇಡೀ ದೇಶಕ್ಕೆ ವಿಸ್ತರಣೆಯಾಗಬೇಕು. ಈ ಬಗ್ಗೆ ನಾವೆಲ್ಲರೂ ಒಂದಾಗಿ ದುಡಿಯುವ ಅಗತ್ಯವಿದೆ ಎಂದ ಅವರು ಸೌಜನ್ಯ ನ್ಯಾಯಕ್ಕಾಗಿ ಇಡೀ ರಾಜ್ಯದ 80% ಜನರು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಶಮೀರ್ ಎನ್ನುವ ಯುವಕನ ಯೂಟ್ಯೂಬ್ ವೀಕ್ಷಣೆಯ ವೇಗವೇ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕನ್ನಡ ಮಾತನಾಡುವ 5.50 ಕೋಟಿ ಜನರಲ್ಲಿ 2.50 ಕೋಟಿಗೂ ಹೆಚ್ಚಿನ ಜನರು ಆ ವೀಡಿಯೋ ವೀಕ್ಷಿಸಿದ್ದಾರೆ ಎಂದರೆ ಈ ಹೋರಾಟ ಮುಂದಿನ ದಿನಗಳಲ್ಲಿ ತೀಕ್ಷ್ಣ ಸ್ವರೂಪ ಪಡೆಯಬಹುದು ಎಂದು ಎಚ್ಚರಿಸಿದ ಅವರು ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ಎದುರಿಸಬೇಕಾದೀತೆಂದು ಎಚ್ಚರಿಕೆ ನೀಡಿದರು.
ಅವರು ಸೌಜನ್ಯ ಹೋರಾಟದ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಬೇಕು ಎಂದು ಹೋರಾಟಗಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಸಾಮಾಜಿಕ ಹೋರಾಟಗಾರರಾದ ಜಯಂತ್ ಟಿ, ಶೇಖರ್ ಲಾಯಿಲ, ಸೌಜನ್ಯಳ ಮಾವ ವಿಠ್ಠಲ ಗೌಡ, ಬರಹಗಾರ ಶಫಿ ಬಂಗಾಡಿ , ಸಾಮಾಜಿಕ ಕಾರ್ಯಕರ್ತರಾದ ಸದಾನಂದ ನಾಲ್ಕೂರು , ಸತೀಶ್ ಪುದುವೆಟ್ಟು , ಮತ್ತಿತರರಿದ್ದರು.
Post Comment