ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತಾತ್ಕಾಲಿಕ ಸ್ಥಳಾಂತರ : ಸಾರ್ವಜನಿಕರ ಪರದಾಟ

ಬೆಳ್ತಂಗಡಿ : ಶಿಕ್ಷಣ ಇಲಾಖಾಧಿಕಾರಿಗಳ ಬೇಜವಾಬ್ದಾರಿಯ ಪರಿಣಾಮ ಸರಕಾರದಿಂದ ದುರಸ್ತಿಗೆ ಅನುದಾನ ಬಾರದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ತಾಲೂಕು ಪಂಚಾಯತ್ ಕಟ್ಟಡದ ಹಿಂಭಾಗದ ‘ಸಾಮರ್ಥ್ಯ ಸೌಧ’ಕ್ಕೆ ಸ್ಥಳಾಂತರಗೊಂಡಿದ್ದು ಗ್ರಾಮೀಣ ಭಾಗದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬೇರೆ ಬೇರೆ ಅಗತ್ಯಗಳಿಗೆ ಬರುವ ಸಾರ್ವಜನಿಕರು ತಾಲೂಕು ಕಚೇರಿ ಮತ್ತು ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಮಹಡಿಗಳನ್ನು ಹತ್ತಿ, ಇಳಿದು ಹುಡುಕಿ, ಇಣುಕಿ ವಿಚಾರಿಸಿ ಪರದಾಡುವಂತಾಗಿದೆ.
ಬೆಳ್ತಂಗಡಿ ನಗರದ ಮುಖ್ಯ ರಸ್ತೆಯ ಮಾರಿಗುಡಿ ಬಳಿಯ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಇದೀಗ ಮೂರು ದಿನಗಳ ಹಿಂದೆ ತಾಲೂಕು ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿರುವ ರಾಜ್ಯ ಅಬ್ದುಲ್ ನಜೀರ್ ಸಾಬ್ ತರಬೇತಿ ಸಂಸ್ಥೆ ಮೈಸೂರು ಹೆಸರಿನಲ್ಲಿ ನಿರ್ಮಾಣಗೊಂಡಿರುವ ‘ಸಾಮರ್ಥ್ಯ ಸೌಧ’ಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಹಳೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೇಟ್ ನಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ ಸೂಚನಾ ಫಲಕದಲ್ಲಿ
“ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯನ್ನು ತಾಲೂಕು ಪಂಚಾಯತ್ ‘ಸಾಮರ್ಥ್ಯ ಸೌಧ’ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.” ಎಂದಿದೆ.
ಅದೇ ಫಲಕವನ್ನು ನೋಡಿ ಸಾರ್ವಜನಿಕರು ನೇರ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿಗಾಗಿ ಕೋರ್ಟ್ ರಸ್ತೆಯಲ್ಲಿ ನಡೆದುಕೊಂಡು ತಾಲೂಕು ಪಂಚಾಯತ್ ಗೆ ಹೋಗಿ ನೋಡಿದ್ರೆ ಅಲ್ಲಿ ತಾಲೂಕು ಪಂಚಾಯತ್ ಕಟ್ಟಡದ ಆವರಣದ ಮೂಲಕ ಬಿ.ಇ.ಒ. ಕಚೇರಿಗೆ ಹೋಗಲು ದಾರಿ ವ್ಯವಸ್ಥೆಯೂ ಇಲ್ಲ.! ವಾಪಾಸ್ ಅದೇ ರಸ್ತೆಯಲ್ಲಿ ಬಂದು ಐಬಿ ರಸ್ತೆಯ ಮೂಲಕ ಪಟ್ಟಣ ಪಂಚಾಯತ್ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ (ಸಿ.ಡಿ.ಪಿ.ಒ.) ಕಚೇರಿ ಹೋಗುವ ರಸ್ತೆಯಲ್ಲಿ ಹೋಗಬೇಕಾಗಿದೆ. ಮಾರಿಗುಡಿ ಬಳಿ ಇರುವ ಇಲಾಖಾ ಕಟ್ಟಡವು ತುಂಬಾ ಹಳೆಯದಾಗಿದ್ದು ದುರಸ್ತಿಯಾಗದ ಹಿನ್ನೆಲೆಯಲ್ಲಿ ಇದೀಗ ಬಿ.ಇ.ಒ. ಕಚೇರಿ ಮಾತ್ರವಲ್ಲ ಇಡೀ ಕಾರ್ಯಾಲಯವನ್ನು ಸ್ಥಳಾಂತರಿಸಲಾಗಿದೆ.

ಒಂದು ಮಾಹಿತಿಯಂತೆ ಬಿ.ಇ.ಒ. ಹಳೆಯ ಕಟ್ಟಡ ನಾದುರಸ್ತಿಯಲ್ಲಿದ್ದು ದುರಸ್ತಿ ಕಾಮಗಾರಿಗಾಗಿ ಅನುದಾನ ಮಂಜೂರು ಮಾಡಿಸುವಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಮತ್ತು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದೀಗ ಬಿ.ಇ.ಒ. ಕಚೇರಿ ತಾಲೂಕು ಪಂಚಾಯತ್ ಕಟ್ಟಡದ ಹಿಂಭಾದಲ್ಲಿದ್ದರೂ ಸಾರ್ವಜನಿಕರು ಸಿ.ಡಿ.ಪಿ.ಒ.ಕಚೇರಿಯ ರಸ್ತೆಯಲ್ಲಿ ಹೋಗುವುದೇ ಅನುಕೂಲವಾಗುತ್ತದೆ.
ಸ್ಥಳಾಂತರಗೊಂಡ ಬಗ್ಗೆ ಸರಿಯಾದ ಪತ್ರಿಕಾ ಪ್ರಕಟಣೆ ಅಥವಾ ಮಾಹಿತಿ ನೀಡದ ಪರಿಣಾಮ ಕೋರ್ಟ್ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ವಾಪಾಸು ಬರುವ ತೊಂದರೆಪಡುವಂತಾಗಿದೆ. ಹಾಗೆ ಹೋದವರು ವಾಪಾಸು ಬಂದು ಸಿ.ಡಿ.ಪಿ.ಒ. ಕಚೇರಿ ರಸ್ತೆಯಲ್ಲಿ ಹೋಗಬೇಕಾಗುತ್ತದೆ.
ಈ ಬಗ್ಗೆ ವಿಚಾರಿಸಿದರೆ ಸೂಕ್ತ ಪ್ರಕಟಣೆ , ಮಾಹಿತಿ ನೀಡದೆ ಜನರಿಗೆ ತೊಂದರೆಯಾಗುತ್ತದೆ ಎಂದು ವಿಚಾರಿಸಿದರೆ “ನಾವು ನಮ್ಮ ಗ್ರೂಪಲ್ಲಿ ಹಾಕಿದ್ದೇವೆ” ಎಂಬ ಉತ್ತರ ಬಿ.ಇ.ಒ. ಕಚೇರಿ ಅಧಿಕಾರಿಗಳಿಂದ ಬರುತ್ತಿದೆ. ಶಿಕ್ಷಕರ ಗ್ರೂಪಲ್ಲಿ ಪ್ರಕಟಣೆ ಹಾಕಿದರೂ ಅದು ಸಾರ್ವಜನಿಕರಿಗೆ ಹೇಗೆ ತಲುಪುತ್ತದೆ ? ಎಂಬಷ್ಟೂ ಸಾಮಾನ್ಯ ಜ್ಞಾನ ಇವರಿಗಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Post Comment