ಬ್ರಹ್ಮಕಲಶೋತ್ಸವ ಸಮಿತಿಯವರು ಮಸೀದಿಗಳಿಗೆ ಹೋಗಿ ಮುಸ್ಲೀಮರನ್ನು ಆಮಂತ್ರಿಸಿದರು…!

ಬೆಳ್ತಂಗಡಿ : ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ
ಮೇ 3ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ತಮ್ಮ ಭಾಷಣದಲ್ಲಿ ಮುಸ್ಲೀಮ್ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣದ ವಿವಾದಕ್ಕೆ ಕಾರಣವಾಗಿದ್ದು ಒಂದೆಡೆ
ಈ ಭಾಷಣ ತೆಕ್ಕಾರು ಸುತ್ತಮುತ್ತಲಿನ ಗ್ರಾಮಸ್ಥರು ಹಲವಾರು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಹಿಂದೂ-ಮುಸ್ಲೀಮ್ ಸೌಹಾರ್ದತೆಗೆ ಹುಳಿ ಹಿಂಡಿದಂತಾಗಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ. ಆದರೆ ಅಸಲಿಗೆ ತೆಕ್ಕಾರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವದಲ್ಲಿ ಸ್ಥಳೀಯ ಮುಸ್ಲೀಮ್ ಸಮುದಾಯದವರು ತನು, ಮನ, ಧನಗಳ ಸಹಕಾರ ನೀಡಿದ್ದರು. ಸ್ಥಳೀಯರಾದ ಮುನೀರ್ ಎಂಬವರು ಮರವೊಂದನ್ನು ಕಡಿಸಿ ಕೊಟ್ಟಿದ್ಧರು, ಮುಸ್ಲೀಮ್ ಮುಖಂಡರು ಶುಭ ಕೋರುವ ಫ್ಲೆಕ್ಸ್ ಹಾಕಿದ್ದರು.
ಇನ್ನೊಂದೆಡೆ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು ಗ್ರಾಮದ
ಅನೇಕ ಮುಸ್ಲೀಮ್ ದಾನಿಗಳಿಗೆ ಆಮಂತ್ರಣ ನೀಡಿ ಮುಸ್ಲೀಮರು ಕೊಟ್ಟ ದೇಣಿಗೆಯನ್ನೂ ಪಡೆದಿದ್ದರು. ಸಮಿತಿಯ ಪ್ರಮುಖರು ಸುತ್ತಮುತ್ತಲಿನ ಎಲ್ಲಾ ಮಸೀದಿಗಳಿಗೆ ಆಮಂತ್ರಣ ಕೊಟ್ಟು ತನು- ಮನ- ಧನಗಳ ಸಹಕಾರ ಕೇಳುವಾಗ ಅವರಿಂದ ದೇಣಿಗೆ ಪಡೆಯುವಾಗ ಡೀಸೆಲ್ ಕಳ್ಳರು ಆಗಿರಲಿಲ್ಲ, ಬ್ಯಾರಿಗಳು ಕಂಟ್ರಿಗಳು ಆಗಿರಲಿಲ್ಲ. ದೇವಸ್ಥಾನಕ್ಕೆ ಇಜಿಲಬೋವು ಮರವನ್ನು ಉಚಿತವಾಗಿ ಕೊಟ್ಟಾಗ, ವೇದಿಕೆ ಮಾಡಲು ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಬಿಟ್ಟು ಕೊಟ್ಟಾಗ, ನೀರು ಕೊಟ್ಟಾಗ ಮುಸ್ಲೀಮರು ಕಂಟ್ರಿಗಳು ಆಗಿರಲಿಲ್ಲ ; ಆದ್ರೆ ಬ್ರಹ್ಮಕಲಶೋತ್ಸವ ದಿನ ಶಾಸಕರು ಬಂದಾಗ ಕಂಟ್ರಿಗಳಾದ್ರು , ಕಳ್ಳರಾದ್ರು.!!
ಶಾಸಕ ಹರೀಶ್ ಪೂಂಜರವರಿಗೆ ತೆಕ್ಕಾರಿನ ಹಿಂದೂ -ಮುಸ್ಲಿಮ್ ಸೌಹಾರ್ದತೆಯ ವಿಚಾರ ತಿಳಿದಿರಲಿಕ್ಕಿಲ್ಲವೇ.!?
ವೈಯ್ಯಕ್ತಿಕವಾಗಿ ಮುಸ್ಲೀಮರ ವಿರುದ್ಧ ಉದ್ದೇಶಪೂರ್ವಕವಾಗಿ ಮಾತನಾಡಿದರೇ? ತೆಕ್ಕಾರು ಸುತ್ತಮುತ್ತಲಿನ ಹಿಂದೂ-ಮುಸ್ಲೀಮ್ ಸೌಹಾರ್ದತೆಗೆ ಹುಳಿ ಹಿಂಡಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರದಿಂದ ಯಾರೋ ಕೋಮು’ವ್ಯಾಧಿ’ ಕಂಟ್ರಿ’ಗಳು ಶಾಸಕ ಹರೀಶ್ ಪೂಂಜರವರ ಕಿವಿ ಊದಿರಬಹುದೇ?
ಶಾಸಕರಿಗೆ ಸ್ಥಳೀಯ ‘ಕೋಮುಖ’ ಶಕುನಿಗಳು ಮುಸ್ಲೀಮರ ವಿರುದ್ಧ ತಪ್ಪು ಮಾಹಿತಿ , ಸುಳ್ಳು ಮಾಹಿತಿ ಕೊಟ್ಟು ಮಜಾ ನೋಡಿರಬಹುದೇ?
ಎಂಬ ಪ್ರಶ್ನೆಗಳು ಕೇಳಿ ಬಂದಿದೆ.
ಇನ್ನೊಂದೆಡೆ ತೆಕ್ಕಾರು ಬಾರ್ಯದಲ್ಲಿ ಶಾಸಕರಿಗೆ ತಪ್ಪು ಮಾಹಿತಿ ನೀಡಲೆಂದೇ ಕೆಲವು ‘ಕೋಮುಖ’ರಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಬ್ರಹ್ಮಕಲಶೋತ್ಸವದ ಸಂದರ್ಭ ಪ್ರತ್ಯಕ್ಷ,ಪರೋಕ್ಷವಾಗಿ ಸರ್ವ ರೀತಿಯಲ್ಲಿ ಸಹಕಾರ ನೀಡಿದ್ದ ಇತರ ಮುಸ್ಲೀಮ್ ಸಮುದಾಯಕ್ಕೆ
ವೇದಿಕೆಯಲ್ಲಿ ಒಂದು ಕೃತಜ್ಞತೆ ಅಥವಾ ಅಭಿನಂದನೆಯ ಮಾತುಗಳನ್ನಾಡಬೇಕಿತ್ತು. ದೇಣಿಗೆ , ಮರ ಮುಂತಾದವುಗಳನ್ನು ಕೊಟ್ಟ ಮುಸ್ಲೀಮ್ ಬಂಧುಗಳಿಗೆ ಅಭಿನಂದನೆ, ಕೃತಜ್ಞತೆ ಸಲ್ಲಿಸದಿದ್ದರೂ ಪರವಾಗಿರಲಿಲ್ಲ ನಿಂದನೆ ಮಾಡಬಾರದಿತ್ತು ಎನ್ನುವುದು ಸ್ಥಳೀಯ ಹಿಂದೂ-ಮುಸ್ಲೀಮ್ ನಾಗರಿಕರ ಅಭಿಪ್ರಾಯ.
ತೆಕ್ಕಾರು ಗ್ರಾಮದಲ್ಲಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ತಮ್ಮ ಜಾಗದಿಂದ ಉಚಿತವಾಗಿ ಮರವನ್ನು ಕೊಡುವ ಮುಸ್ಲೀಮರೂ ಇದ್ದಾರೆ, ಮಸೀದಿಗಳಿಗೆ ಉಚಿತವಾಗಿ ಮರ,ದೇಣಿಗೆ ಕೊಟ್ಟವರೂ ಇದ್ದಾರೆ ಇದನ್ನು ಯಾಕೆ ಯಾರೂ ಹೇಳುವುದಿಲ್ಲ ಎಂಬುದೇ ಪ್ರಶ್ನೆ.
ಅಂಥ ಸಹಜ ಸೌಹಾರ್ದತೆಯ ಗ್ರಾಮವದು. ಇಂಥ ಊರಲ್ಲಿ ಇಂಥ ಕಹಿ ಘಟನೆ ನಡೆದಿದ್ದು ಇಷ್ಟು ವರ್ಷಗಳಿಂದ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿರುವ ಹಿಂದೂ-ಮುಸ್ಲೀಮ್ ನಾಗರಿಕರ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತುಗಳು ಸ್ಥಳೀಯ ಎರಡೂ ಧರ್ಮಗಳ ನಾಗರಿಕರಿಂದ ಕೇಳಿ ಬರುತ್ತಿದೆ.



Post Comment