ತೆಕ್ಕಾರು ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಭಾಷಣ ಪ್ರಕರಣ :

ಬೆಳ್ತಂಗಡಿ : ಮೇ 3ರಂದು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಗ್ರಾಮದ ಮುಸ್ಲಿಮರ ವಿರುದ್ದ ಅವಹೇಳನಕಾರಿ ಭಾಷಣ ಮಾಡಿದ ಪರಿಣಾಮ ಗ್ರಾಮದಲ್ಲಿ ಉಂಟಾದ ಬೆಳವಣಿಗೆಯ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರ ಜತೆ ದೇವಸ್ಥಾನದ ಆಡಳಿತ ಮಂಡಳಿಯು ಸಭೆ ನಡೆಸಿತು. ದೇವಸ್ಥಾನದ ಮುಖ್ಯಸ್ಥ ನಾಗಭೂಷಣ್ ರಾವ್ ಅವರ ನೇತೃತ್ವದಲ್ಲಿ ನಡೆದ ಶಾಂತಿ- ಸಂಧಾನ ಸಭೆಯಲ್ಲಿ ಏನೇ ಬೆಳೆವಣಿಗಗಳಾದ ಸಂದರ್ಭಗಳಲ್ಲೂ ಹಿಂದಿನಿಂದ ಕಾಪಾಡಿಕೊಂಡು ಬಂದಿರುವ ಸೌರ್ದತೆಗೆ ಧಕ್ಕೆಯಾಗದಂತೆ ಮುಂದುವರಿಯುವ ಬಗ್ಗೆ ಚಿಂತನೆ ನಡೆಯಿತು.
ಇತ್ತೀಚೆಗೆ ನಡೆದ ತೆಕ್ಕಾರು ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿದ್ದ ಗಣ್ಯರ, ಉದ್ಯಮಿಗಳ, ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಮಧ್ಯೆಯೇ ಇಂತಹ ಘಟನೆ ನಡೆದಿರುವುದರ ಬಗ್ಗೆ ಸ್ಥಳೀಯ ಮುಸ್ಲಿಂ ಒಕ್ಕೂಟ ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮ ನಿಲುವಿನ ಕುರಿತು ಸ್ಪಷ್ಠಪಡಿಸುವಂತೆ ಪತ್ರ ಬರೆದಿತ್ತು, ಇದಕ್ಕೆ ಸ್ಪಷ್ಠೀಕರಣ ನೀಡುವ ಸಲುವಾಗಿ ಹಿಂದೂ – ಮುಸ್ಲಿಂ ಮುಖಂಡರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಶಾಸಕರ ಭಾಷಣ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿಯು ತೀವ್ರ ವಿಷಾದವನ್ನು ವ್ಯಕ್ತಪಡಿಸಿತು ಎನ್ನಲಾಗಿದೆ.
ಸ್ಥಳೀಯ ಮುಸ್ಲಿಮರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಸರ್ವ ರೀತಿಯಲ್ಲಿ ಸಹಾಯ-ಸಹಕಾರಗಳ ಮೂಲಕ ಕೈಜೋಡಿಸಿದ್ದರು. ಮುನೀರ್ ಎಂಬವರು ಮರವನ್ನು ನೀಡಿದ್ದರು, ಅಬ್ಬಾಸ್ ಎಂಬವರು ವೇದಿಕೆ ನಿರ್ಮಿಸಲು ಸ್ಥಳವನ್ನು ನೀಡಿದ್ದರು, ಭಕ್ತಾದಿಗಳಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಟಿ.ಎಚ್ ಉಸ್ತಾದರ ಮಕ್ಕಳ ಒಡೆತನದ ಜಮೀನಿನಲ್ಲಿ ನೀಡಲಾಗಿತ್ತು, ನೀರಿನ ವ್ಯವಸ್ಥೆಗೆ ಮತ್ತು ಅನ್ನ ಸಂತರ್ಪಣೆಗೆ ಮುಸ್ಲಿಮರ ಜಾಗವನ್ನೇ ಉಪಯೋಗಿಸಲಾಗಿತ್ತು.
ಮುಸ್ಲೀಮರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ ಆರ್ಥಿಕವಾಗಿಯೂ ಗ್ರಾಮದ ಮುಸ್ಲಿಮರು ದೇವಸ್ಥಾನಕ್ಕೆ ಸಹಾಯವನ್ನು ನೀಡಿದ್ದರು, ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಸ್ಥಳೀಯ ಮುಸ್ಲಿಮರು ಬ್ಯಾನರ್ ಗಳನ್ನು ಅಳವಡಿಸಿದ್ದರ ಬಗ್ಗೆ ಮುಸ್ಲಿಂ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳ ಗಮನ ಸೆಳೆದರು.
ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿಯೇ ನೀಡಿದ್ದರಿಂದ ಘಟನೆಯ ಹೊಣೆ ಹೊತ್ತುಕೊಂಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯು ಸ್ಥಳೀಯ ಒಕ್ಕೂಟದ ಮುಸ್ಲಿಂ ಮುಖಂಡರಿಗೆ ವಿಷಾದ ವ್ಯಕ್ತಪಡಿಸಿ ಪತ್ರವನ್ನು ನೀಡಿದ್ದು, ಪ್ರಕರಣವನ್ನು ಅಂತ್ಯಗೊಳಿಸಲು ಮನವಿ ಮಾಡಿಕೊಂಡಿದೆ. ಆ ಮೂಲಕ ತೆಕ್ಕಾರು ಗ್ರಾಮದ ಹಿಂದೂ -ಮುಸ್ಲೀಮ್ ಕೋಮು ಸೌಹಾರ್ದತೆಯನ್ನು ಗ್ರಾಮಸ್ಥರೇ ಮತ್ತೊಮ್ಮೆ ಎತ್ತಿ ಹಿಡಿದಂತಾಗಿದೆ.

ಮೇ 3ರಂದು ಇಲ್ಲಿನ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡ ಎಸ್ ಎಂ ಎಸ್ ಇಬ್ರಾಹಿಂ ಮುಸ್ಲಿಯಾರ್ ಎಂಬವರು ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದರು, ದೂರಿನನ್ವಯ ಶಾಸಕ ಹರೀಶ್ ಪೂಂಜ ವಿರುದ್ದ ಪ್ರಕರಣವೂ ದಾಖಲಾಗಿತ್ತು. ಇದರ ಬೆನ್ನಲ್ಲೇ ಶಾಸಕ ಹರೀಶ್ ಪೂಂಜ ತನ್ನ ವಿರುದ್ಧದ ಎಫ್ ಐ ಆರ್ ಅನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಲೇರಿದ್ದರು.
ಸದ್ಯ ಪ್ರಕರಣವು ಮೇ 20ರಂದು ವಿಚಾರಣೆಗೆ ಬರಲಿದ್ದು ಕೋರ್ಟ್ ಕೊಡುವ ತೀರ್ಪಿನ ಬಗ್ಗೆ ಕುತೂಹಲ ಮೂಡಿದೆ.



Post Comment