ಬೆಳ್ತಂಗಡಿ ಬಿ.ಎಂ.ಎಸ್ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ರಾಜಕೀಯ ಪಕ್ಷಗಳ ಪ್ರತಿಭಟನೆಗಳ ದಾಖಲೆ ಮುರಿದ ಕಾರ್ಮಿಕರು

ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಬಿ.ಎಂ.ಎಸ್. ರಾಜ್ಯಾಧ್ಯಕ್ಷ ಎನ್ ರಮೇಶ್ ಮಾತನಾಡಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರ , ಕಾರ್ಮಿಕ ವಿರೋಧಿ ನೀತಿ ನಮಗೆ ಗೊತ್ತಿದೆ, ಕಾರ್ಮಿಕರ ಹಕ್ಕು, ಹಿತ ಕಾಯಲು ವಿಫಲರಾದ ಕಾರ್ಮಿಕ ಸಚಿವ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಅಶ್ವಥ್ ಮರಿಗೌಡ್ರು ಮಾತನಾಡಿ ರಾಜ್ಯದ ದರಿದ್ರ ಸರಕಾರ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ, ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಯೋಜನೆಗಳನ್ನು ಬಿಡುಗಡೆ ಮಾಡದೆ ಕಾರ್ಮಿಕರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಶಾಸಕ ಹರೀಶ್ ಪೂಂಜ ಅವರು ವಿಧಾನ ಸಭೆಯಲ್ಲಿ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಬೇಕು, ಅದು ನಿಮ್ಮ ಜವಾಬ್ದಾರಿ ನಾವು ವಿಧಾನ ಸೌಧಕ್ಕೆ , ಬಂದು ನಿಮ್ಮೊಂದಿಗೆ ನಿಲ್ಲುತ್ತೇವೆ, ನೀವು ಕಾರ್ಮಿಕರಿಗೆ ಧ್ವನಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರಿಗೂ ಘೇರಾವ್ ಹಾಕುತ್ತೇವೆ, ಕಾರ್ಮಿಕ ಸಚಿವರ ವಿರುದ್ಧ ಪ್ರತಿಭಟಿಸಿ ನಮ್ಮ ಹಕ್ಕುಗಳನ್ನು ಪಡೆಯಲು ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಿ.ಎಂ.ಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಅರ್ಹತೆಯಿದ್ದು ಇಲಾಖೆಯ ವಿವಿಧ ಸೌಲಭ್ಯಗಳನ್ನು ಅರಸಿ ಹೋಗುವ ಬಡ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಿನಾಕಾರಣ ಅಲೆದಾಡಿಸಿ ಶೋಷಣೆ ಮಾಡುತ್ತಿದ್ದಾರೆ, ಇನ್ನೊಂದೆಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಒಬ್ಬ ಹಿಟ್ಲರ್ ಮನಸ್ಥಿತಿಯ ವ್ಯಕ್ತಿ ಎಂದು ಆರೋಪಿಸಿದರು.
ಬಿ.ಎಂ.ಎಸ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಅನಿಲ್ ಕುಮಾರ್ ಮಾತನಾಡಿ ಕೆಂಪುಕಲ್ಲು ಮತ್ತು ಮರಳು ಸ್ಥಗಿತಗೊಂಡ ಪರಿಣಾಮ ಬಡ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದು ಸಂಕಷ್ಟದಲ್ಲಿದ್ದಾರೆ. ಕೆಂಪುಕಲ್ಲು , ಮರಳು ಕೊರತೆಗೆ ಕಾರಣರಾದ ಆಡಳಿತ ವ್ಯವಸ್ಥೆ ವಿರುದ್ಧ ಬಿ.ಎಂ.ಎಸ್. ಹೋರಾಟ ನಡೆಸಲಿದೆ, ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ಮದ್ದೂರ್ ಸಂಘ ತಾಲೂಕು ಅಧ್ಯಕ್ಷ, ನ್ಯಾಯವಾದಿ ಉದಯ್ ಕುಮಾರ್ ಬಿಕೆ ಅಧ್ಯಕ್ಷತೆವಹಿಸಿ ಮಾತನಾಡಿ ದ.ಕ.ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತದಿಂದ ದಿನಗೂಲಿ ಕಾರ್ಮಿಕರು, ಹಾಗೂ ಗೃಹ ನಿರ್ಮಾಣ ನಿರೀಕ್ಷೆಯಲ್ಲಿರುವ ಸಾಮಾನ್ಯ ಜನರು ಎದುರಿಸುತ್ತಿರುವ ತೀವ್ರವಾದ ಸಂಕಷ್ಟಗಳನ್ನು ಪರಿಹರಿಸಲು ಕಾರ್ಮಿಕ ಸಚಿವರು ಮತ್ತು ಇಲಾಖಾಧಿಕಾರಿಗಳ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡರು ಮಾತನಾಡಿ ಕಾರ್ಮಿಕ ಸಚಿವರ ಮತ್ತು ಇಲಾಖಾಧಿಕಾರಿಗಳ ಕಾರ್ಮಿಕ ವಿರೋಧಿ ನಡೆಗಳನ್ನು ಖಂಡಿಸಿದರು.
ಪ್ರತಿಭಟನಾ ಸಭೆಗೆ ಆಗಮಿಸಿದ ಶಾಸಕ ಹರೀಶ್ ಪೂಂಜ
ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಸಂಘಟನೆಯ ಹಿತ ದೃಷ್ಠಿಯಿಂದ ಹಾಗೂ ಬಡ ಕಾರ್ಮಿಕರ ಹಿತದೃಷ್ಠಿಯಿಂದ ನಾನು ಶಾಸಕನಾಗಿ ಬಿ.ಎಂ.ಎಸ್ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬೆಲವಿದೆ
ಎಂದರು.
ನಾನು ವಿಧಾನ ಸಭೆಯಲ್ಲಿ ಜಿಲ್ಲೆಯ ಕಾರ್ಮಿಕರ ಹಕ್ಕು ಸವಲತ್ತುಗಳ ಬಗ್ಗೆ ಮಾತ್ರವಲ್ಲ ಇಡೀ ರಾಜ್ಯದ ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದರು.
ಬಿ.ಎಂ.ಎಸ್. ತಾಲೂಕಿನ ಸಮಿತಿ ಬೆಳ್ತಂಗಡಿ ತಾಲೂಕು ಸಹಭಾಗಿತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಪ್ರತಿಭಟನೆಗಳಲ್ಲಿ ಸೇರುತ್ತಿದ್ದ ಜನರಿಗಿಂತಲೂ ಹೆಚ್ಚಿನ ಕಾರ್ಮಿಕರನ್ನು ಸೇರಿಸುವಲ್ಲಿ ಬೆಳ್ತಂಗಡಿಯ ಬಿ.ಎಂ.ಎಸ್ ಮುಖಂಡರಾದ ಅನಿಲ್ ಜಯರಾಜ್ ಸಾಲ್ಯಾನ್, ಉದಯ ಬಿ.ಕೆ., ಯಶಸ್ವಿಯಾದರು.
ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಸಂಚಾಲಕ ಕುಮಾರ್ ವೈ ಚಿತ್ರದುರ್ಗ, ಭಾರತೀಯ ಮಜೂರ್ ಸಂಘ ತಾಲೂಕಿನ ಸಮಿತಿಯ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಇದ್ದರು.
ಹೋರಾಟದಲ್ಲಿ ಬಿ.ಎಂ.ಎಸ್. ಸಂಘಟನೆಗಳ ಪ್ರತಿನಿಧಿಗಳು ಮತ್ತು ಕಾರ್ಮಿಕ ಹೋರಾಟಗಾರರು ಪಾಲ್ಗೊಂಡರು.
ಪ್ರತಿಭಟನಾ ವೇದಿಕೆಗೆ ಆಗಮಿಸಿದ ತಹಶೀಲ್ದಾರ್ ಪೃಥ್ವೀ ಸಾನಿಕಂ ಮನವಿ ಸ್ವೀಕರಿಸಿ ಮಾತನಾಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತರುತ್ತೇನೆ, ಕಾರ್ಮಿಕರ ಸಮಸ್ಯೆ ಇಷ್ಟೊಂದು ಗಂಭೀರವಾಗಿದೆ ಅಂತ ಗೊತ್ತಿರಲಿಲ್ಲ, ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರನ್ನು ನೋಡಿ ಈಗ ಅರ್ಥವಾಯಿತು, ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಗಳ ಬಗ್ಗೆ ಫ್ರಯತ್ನಿಸುವೆ ಎಂದು ಭರವಸೆ ನೀಡಿದರು.
Post Comment