ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ: ನೇತ್ರಾವತಿ ಸ್ನಾನಘಟ್ಟ ಬಳಿ ಅಗೆದರೂ ಪತ್ತೆಯಾಗದ ಅಸ್ಥಿಪಂಜರ

ಬೆಳ್ತಂಗಡಿ : ಧರ್ಮಸ್ಥಳ ನೂರಾರು ಶವಗಳ ರಹಸ್ಯ ದಫನ ಪ್ರಕರಣದ ದೂರುದಾರ ಗುರುತಿಸಿದ ಸ್ಥಳದಲ್ಲಿ ಮಂಗಳವಾರ ಸುಮಾರು 12 ಗಂಟೆಯಿಂದ 13 ಕಾರ್ಮಿಕರು ಮತ್ತು ಮಧ್ಯಾಹ್ನ ಬಳಿಕ ಜೆಸಿಬಿ ಮೂಲಕ ಸಮಾಧಿ ಅಗೆಯುವ ಕಾರ್ಯ ನಡೆಸಿದರೂ ಸಂಜೆವರೆಗೆ ಸಮಾಧಿ ಸ್ಥಳದಲ್ಲಿ ಹೂತ ಶವದ ಅಸ್ಥಿಪಂಜರ ಪತ್ತೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.
ಮಧ್ಯಾಹ್ನವರೆಗೆ ಎಸ್ ಐ ಟಿ ಅಧಿಕಾರಿಗಳ ಸಮಕ್ಷಮ ಕಾರ್ಮಿಕರ ಮೂಲಕ ಹುಡುಕಾಟ ನಡೆಸಿದರೂ ಹೂತ ಶವದ
ಅಸ್ಥಿಪಂಜರವಾಗಲಿ ಯಾವುದೇ ಕುರುಹಾಗಲಿ ಪತ್ತೆಯಾಗದ ಕಾರಣ 3 ಗಂಟೆಯ ಬಳಿಕ ಜೆಸಿಬಿ ಮೂಲಕ ಹೂಳೆತ್ತಿ ಹುಡುಕಾಟ ಮುಂದುವರಿಸಲಾಗಿತ್ತು. ಶವ ಹೂತ ಪ್ರಕರಣದ ಅಸ್ಥಿಪಂಜರ ಶೋಧ ಪ್ರಕ್ರಿಯೆಯು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಕ್ಷಣ ಕ್ಷಣ ಕುತೂಹಲ ಕೆರಳಿಸಿತು.
ಶೋಧ ಕಾರ್ಯಾಚರಣೆಯ ಮಧ್ಯೆ ಡಿಐಜಿ ಅನುಚೇತ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಇತರ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಎಸ್ ಐ ಟಿ ತನಿಖಾಧಿಕಾರಿಗಳ ತಂಡ, ಪುತ್ತೂರು ವಿಭಾಗಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ತಜ್ಞ ವೈದ್ಯರ ತಂಡ, ಕಂದಾಯ, ಅರಣ್ಯ ಇಲಾಖಾಧಿಕಾರಿಗಳು ಸ್ಥಳದಲ್ಲಿದ್ದು ಮಧ್ಯಾಹ್ನ ಬಳಿಕ ಜೆಸಿಬಿ ಮೂಲಕ ಅಗೆದು ಸಮಾಧಿ ಸ್ಥಳದಲ್ಲಿ ಹುಡುಕಾಟ ನಡೆಸಲಾಯಿತು.
ಮೊದಲಿಗೆ ಕಾರ್ಮಿಕರು ಅಗೆದಾಗ ತೆಗೆದ ಗುಂಡಿಯಲ್ಲಿ ನೀರು ತುಂಬಿಕೊಳ್ಳುತ್ತಲೇ ಇದ್ದ ಕಾರಣ ಅಗೆಯಲು ಅಡಚಣೆಯಾಗುತ್ತಿತ್ತು. ಹಿಟಾಚಿಯಲ್ಲಿ ಅಗೆದು ಹುಡುಕಾಟ ನಡೆಸಿದರೂ ಸಂಜೆ 6ಗಂಟೆವರೆಗೂ ದೂರುದಾರ ಕೆಲವು ವರ್ಷಗಳ ಹಿಂದೆ ಹೂತಿದ್ದೇನೆಂದು ತೋರಿಸಿದ ಸಮಾಧಿ ಸ್ಥಳದಲ್ಲಿ ಶವದ ಅಸ್ಥಿಪಂಜರದ ಯಾವುದೇ ಭಾಗವೂ ಪತ್ತೆಯಾಗಲಿಲ್ಲ. ಎಸ್ ಐ ಟಿ ತನಿಖಾ ತಂಡಕ್ಕೆ ಶ್ವಾನ ದಳವೂ ಸೇರಿಕೊಂಡಿದ್ದು ಎಸ್ ಐ ಟಿ ಅಧಿಕಾರಿಗಳು 6 ಗಂಟೆಗೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದು ಸಮಾಧಿ ಅಗೆತ ಮತ್ತು ಶೋಧ ಕಾರ್ಯ ಬುಧವಾರವೂ ಮುಂದುವರಿಯಲಿದೆ. 12-13 ಮಂದಿ ಕಾರ್ಮಿಕರು ಶೋಧ ಕಾರ್ಯದಲ್ಲಿ ಭಾಗಿಯಾದರು.

Post Comment