ಧರ್ಮಸ್ಥಳ ಶವಗಳ ಸರಣಿ ದಫನ ಪ್ರಕರಣ : 3ನೇ ದಿನದ ಸಮಾಧಿ ಶೋಧ ಕಾರ್ಯದಲ್ಲಿ ಅ(ಶ)ವ ಶೇಷ ಪತ್ತೆ !





ಬೆಳ್ತಂಗಡಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತು ದಿನದಿಂದ ದಿನಕ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖಾಧಿಕಾರಿಗಳ ಮುಂದೆ , ಅರಣ್ಯ-ಕಂದಾಯ ಇಲಾಖಾಧಿಕಾರಿಗಳು ಮತ್ತು ವಕೀಲರ ಸಮಕ್ಷಕ ನೇತ್ರಾವತಿ ಸ್ನಾನಘಟ್ಟದ ಕಾಡಿನ ಬದಿಯಲ್ಲಿ ಶವಗಳನ್ನು ದಫನ ಮಾಡಿದ ಸಮಾಧಿ ಸ್ಥಳಗಳನ್ನು ದೂರುದಾರ ಗುರುತಿಸುವ ಮೂಲಕ ತನಿಖೆ ಆರಂಭಗೊಂಡಿತ್ತು.
ದೂರುದಾರ ‘ಧೀರ’ ಮೊದಲ ದಿನ ಸೋಮವಾರ ಸುತ್ತಮುತ್ತಲಿನಲ್ಲಿ ತಾನು ಶವಗಳನ್ನು ದಫನ ಮಾಡಿದ 14 ಸ್ಥಳಗಳನ್ನು ಗುರುತಿಸಿದ್ದು 13 ಸಮಾಧಿ ಸ್ಥಳಗಳಿಗೆ
ಕ್ರಮ ಸಂಖ್ಯೆಗಳನ್ನು ಅಳವಡಿಸುವ ಮೂಲಕ ಗುರುತು ಮಾಡಲಾಗಿತ್ತು. ಮಂಗಳವಾರ ದಫನ ಸ್ಥಳ 1ರಲ್ಲಿ 12 ಕಾರ್ಮಿಕರು ಮತ್ತು ಹಿಟಾಚಿ ಮೂಲಕ ಅಸ್ಥಿಪಂಜರ ಕುರುಹುಗಳನ್ನು ಹುಡುಕಲಾಗಿದ್ದು ಕುರುಹುಗಳು ಪತ್ತೆಯಾಗಿರುವ ಬಗ್ಗೆ ಎಸ್ ಐ ಟಿ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಮೂರನೇ ದಿನವಾದ ಬುಧವಾರ ಹಿಟಾಚಿ ಕೈಬಿಟ್ಟು ಸಮಾಧಿ ಸ್ಥಳ ಸಂಖ್ಯೆ: 2,3,4ರಲ್ಲಿ ಕಾರ್ಮಿಕರ ಮೂಲಕ ಹುಡುಕಾಟ ಕಾರ್ಯ ನಡೆದಿದ್ದು 4.30ರವರೆಗಿನ ಶೋಧ ಕಾರ್ಯದಲ್ಲಿ ಯಾವುದೇ ಕಳೇಬರ ಪತ್ತೆಯಾಗಿದೆ ಅಥವಾ ಪತ್ತೆಯಾಗಿಲ್ಲ ಎಂಬ ಬಗ್ಗೆ ಡಾ.ಪ್ರಣವ್ ಕುಮಾರ್ ಮೊಹಾಂತಿ ಅವರಾಗಲಿ ಎಸ್ ಐಟಿಯ ಇತರ ಅಧಿಕಾರಿಗಳಾಗಲಿ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನೊಂದೆಡೆ ಎಸ್ ಐ ಟಿ ತನಿಖೆಯು ತನಿಖಾ ತಂಡದ ಮುಖ್ಯಸ್ಥ ಡಾ.ಪ್ರಣವ್ ಕುಮಾರ್ ಮೊಹಾಂತಿ ಅವರ ನೇತೃತ್ವದಲ್ಲಿ ಮಹತ್ವದ ಘಟ್ಟ ತಲುಪುವ ಹಂತದಲ್ಲಿದ್ದು 20 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದ ಎಸ್ ಐ ಟಿ ತನಿಖಾ ತಂಡಕ್ಕೆ ಇದೀಗ ಪೊಲೀಸ್ ಇಲಾಖೆ ಮತ್ತೆ 9 ಮಂದಿ ಅಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರಕಾರವು ಎಸ್.ಐ.ಟಿ.ಗೆ ಪ್ರಾರಂಭ ಹಂತದಲ್ಲಿ ನಾಲ್ಕು ಮಂದಿ ಉನ್ನತ ಅಧಿಕಾರಿಗಳನ್ನು ನೇಮಕಗೊಳಿತ್ತು.
ಬಳಿಕ 20 ಮಂದಿ ಅಧಿಕಾರಿಗಳು ನೇಮಕಗೊಂಡಿದ್ದು
ಇದೀಗ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಡಿಜಿ/ಐಜಿಪಿ ಡಾ.ಎಂ.ಎ ಸಲೀಂ ಅವರ ಜುಲೈ 30ರ ಹೊಸ ಅದೇಶದಂತೆ ಉಪ್ಪಿನಂಗಡಿ ಠಾಣೆಯ ಎಎಸ್ಐ ಲಾರೆನ್ಸ್, ಹೆಚ್.ಸಿ ಮನೋಹರ, ಹೆಚ್.ಸಿ. ಪುನೀತ್ , ವಿಟ್ಲ ಠಾಣೆಯ ಪಿ.ಸಿ. ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ. ಸಂದೀಪ್, ಉಡುಪಿ ಸಿ.ಎಸ್.ಪಿ. ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಠಾಣೆಯ ಹೆಚ್.ಸಿ ಸತೀಶ್ ನಾಯ್ಕ,ಮಂಗಳೂರು ಎಫ್.ಎಮ್.ಎಸ್ ದಳದ ಹೆಚ್.ಸಿ ಜಯರಾಮೇಗೌಡ ಮತ್ತು ಹೆಚ್.ಸಿ ಬಾಲಕೃಷ್ಣ ಗೌಡ ಮುಂತಾದವರು
ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್.ಐ.ಟಿ ಸಂಸ್ಥೆಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ ಐ ಟಿಯ ಇದುವರೆಗಿನ ತನಿಖೆಯ ಬಗ್ಗೆ ಮತ್ತು ವಿಶೇಷವಾಗ 1ನೇ ಸಂಖ್ಯೆಯ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿರುವ ಮಹತ್ವದ ಕುರುಹುಗಳ ಬಗ್ಗೆ ವಕೀಲರಾದ ಮಂಜುನಾಥ್ ಎನ್ ಶ್ಲಾಘನೆ ಮತ್ತು ಮುಂದಿನ ತನಿಖೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ. ಇಂದು ಆರಂಭಗೊಂಡ ಸಮಾಧಿ ಸ್ಥಳ ಸಂಖ್ಯೆ 5 ಹಾಗೂ ಉಳಿದ ಸಮಾಧಿ ಸ್ಥಳ ಸಂಖ್ಯೆಗಳ ಶೋಧ ಕಾರ್ಯದ ಬಗ್ಗೆ ಕುತೂಹಲ ಮೂಡಿದೆ.
Post Comment