ಧರ್ಮಸ್ಥಳ ಪಾಂಗಾಳ ಕ್ರಾಸ್ ಗೂಂಡಾಗಿರಿ – ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: 7ಮಂದಿ ಆರೋಪಿಗಳ ಬಂಧನ


ಬಂಧನ ಭೀತಿಯಲ್ಲಿ
ತಲೆಮರೆಸಿಕೊಂಡ
‘ಡಿ’ ನಂಬರ್ ಆರೋಪಿಗಳು ?
ಯೂಟ್ಯೂಬರ್ ಗಳನ್ನು ಎದೆಯುಬ್ಬಿಸಿ ಸುತ್ತುವರಿದು ಹಲ್ಲೆಗೈದವರು ಇವರೇನಾ?
ಮುಖಗಳನ್ನೊಮ್ಮೆ ನೋಡಿ…!!

ಬೆಳ್ತಂಗಡಿ : ಧರ್ಮಸ್ಥಳ ಪಾಂಗಾಳ ತಿರುವು ರಸ್ತೆಯ ಬಳಿ ನಾಲ್ವರು ಯೂಟ್ಯೂಬರ್ಸ್ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆಗೈದು ಅವರ ಕ್ಯಾಮೆರಾ ಮತ್ತು ವಾಹನಗಳಿಗೆ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ, ಜೀಪು ಚಾಲಕ, ಕ್ರಿಮಿನಲ್ ಹಿನ್ನೆಲೆಯ
ಸೋಮನಾಥ ಸಫಲ್ಯ (48) ಎಂಬಾತನನ್ನು ಮೊದಲ ಹಂತದಲ್ಲಿ ಬಂಧಿಸಿದ್ದ ಧರ್ಮಸ್ಥಳ ಪೊಲಿಸರು ಇದೀಗ ಇದೇ ಪ್ರಕರಣದ ಮುಂದುವರಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಕಳೆದ ಬುಧವಾರ ಸಂಜೆ ಧರ್ಮಸ್ಥಳ ಪಾಂಗಾಳ ಕ್ರಾಸ್ ಬಳಿ ಮಂಗಳೂರಿನ ‘ಕುಡ್ಲ ರ‍್ಯಾಂಪೇಜ್’ ಎಂಬ ಹೆಸರಿನ ಯೂಟ್ಯೂಬರ್ ಅಜಯ್ ಅಂಚನ್ ಮತ್ತು ಇತರ ಮೂರು ಮಂದಿ ಯೂಟ್ಯೂಬರ್ಸ್ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕ್ಯಾಮೆರಾ ಪುಡಿಗೈದು, ವಾಹನಗಳಿಗೆ ಹಾನಿಗೊಳಿಸಿತ್ತು.
ಅಜಯ್ ಅಂಚನ್ ಅವರ ಜೊತೆಗೆ, ‘ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ‘ಕುಡ್ಲಾ ರಾಂಪೇಜ್’ ನ ಕ್ಯಾಮೆರಾ ಪರ್ಸನ್ ಮೇಲೆ ಹಲ್ಲೆ ನಡೆದಿತ್ತು.
ಪುಂಡರಿಂದ ಹಲ್ಲೆಗೊಳಗಾದ ನಾಲ್ವರು ಯೂಟ್ಯೂಬರ್ ಪೈಕಿ ದಲಿತರೂ ಸೇರಿದ್ದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ಕಾರ್ಯಾಚರಣೆಯ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ದಾಳಿ ನಡೆದಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಯಾಡಿಯ ಜೀಪು ಚಾಲಕ ಕ್ರಿಮಿನಲ್ ಹಿನ್ನೆಲೆಯ ಸೋಮನಾಥ ಸಫಲ್ಯ ಎಂಬಾತನನ್ನು ಬಂಧಿಸಿದ್ದರು.
ಬಂಧಿತ ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

ಆಗಸ್ಟ್ 6ರಂದು ಯೂಟ್ಯೂಬರ್ ಗಳ ಮೇಲೆ ಪುಂಡರಿಂದ ಗೂಂಡಾಗಿರಿ ನಡೆದ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಇದೀಗ 6 ಮಂದಿ ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಧರ್ಮಸ್ಥಳ ಪಾಂಗಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಯ ಸಂದರ್ಭ ಘರ್ಷಣೆ ನಿಯಂತ್ರಿಸಲು ಮುಂದಾದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ:47/2025 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್ (32), ಸುಹಾಸ್ (22), ಶಶಿಧರ್(30), ಉಜಿರೆ ನಿವಾಸಿ ಖಲಂದರ್ ಪುತ್ತುಮೋನು (42), ಕಳೆಂಜ ನಿವಾಸಿಗಳಾದ ಚೇತನ್ (21), ಗುರುಪ್ರಸಾದ್ (19), ಎಂಬವರುಗಳನ್ನು ಧರ್ಮಸ್ಥಳ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಆಗಸ್ಟ್9ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದು ಮುಂದಿನ ದಿನಾಂಕದಂದು ಹಾಜರಾಗಲು ಆದೇಶ ನೀಡಿದೆ.














Post Comment