ದಾರಿ ಮಧ್ಯೆ ಮಹಿಳೆ ಕಳೆದುಕೊಂಡಿದ್ದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರಳಿ ಕೈಸೇರಿತು..!

ಚಿನ್ನಾಭರಣಗಳಿದ್ದ ಬ್ಯಾಗ್ ವಾರಿಸುದಾರರಿಗೆ ಮರಳಿಸಿ
ಪ್ರಾಮಾಣಿಕತೆ ಮೆರೆದ ಜಯಂತ್ ಶೆಟ್ಟಿ ಹಕ್ಕೇರಿ
ಬೆಳ್ತಂಗಡಿ : ತಾಯಿ ಮನೆಯಿಂದ ಗಂಡನ ಮನೆಗೆ
ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು
ದಾರಿ ಮಧ್ಯೆ ಕಳೆದುಕೊಂಡಿದ್ದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಕೂಡಲೇ ಆತ ವಾರಿಸುದಾರರನ್ನು ಪತ್ತೆ ಹಚ್ಚಿ ತಲುಪಿಸಿ ಪ್ರಾಮಾಣಿಕತೆ ಮೆರೆದ ಮಾನವೀಯ ಪ್ರಸಂಗ
ಆರಂಬೋಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಅಳದಂಗಡಿ ನಿವಾಸಿ ಹರಿಣಾಕ್ಷಿ ಎಂಬವರು ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿರುವ ತಾಯಿ ಮನೆಯಿಂದ ಗಂಡನ ಮನೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ತಮ್ಮ
6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳೆದುಕೊಂಡು ಆಕಾಶವೇ ಜಾರಿ ತಲೆಗೆ ಕುಸಿದು ಬಿದ್ದ ಅನುಭವವಾಗಿ ಚಿನ್ನಾಭರಣಗಳ ಚೀಲವನ್ನು ಎಲ್ಲಿ ಕಳೆದುಕೊಂಡೆನೆಂದು ತಿಳಿಯದೆ ಆತಂಕಗೊಂಡು ಹುಡುಕಾಟ ಆರಂಭಿಸಿದರು. ಚಿನ್ನಾಭರಣ ಕಳೆದು ಹೋದ ತಲೆ ಬಿಸಿಯಲ್ಲಿ ಅಳುವುದೊಂದೇ ಬಾಕಿಯಿತ್ತು. ಕಳೆದು ಹೋದ ಚಿನ್ನದ ಆಸೆಯನ್ನೇ ಬಿಟ್ಟಿದ್ದರು. ಈ ಮಧ್ಯೆ ಹರಿಣಾಕ್ಷಿ ಅವರು ದಾರಿ ಮಧ್ಯೆ ಕಳೆದುಕೊಂಡ ತಮ್ಮ ಚಿನ್ನಾಭರಣಗಳ ಬ್ಯಾಗ್ ಅಂಗಾರಕರಿಯ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಸ್ಥಿತಿಯಲ್ಲಿ ಜಯಂತ್ ಶೆಟ್ಟಿ ಹಕ್ಕೇರಿ ಎಂಬವರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಿಕ್ಕಿದೆ.
ಜಯಂತ ಶೆಟ್ಟಿ ಅವರು ಕೂಡಲೇ ಅಳದಂಗಡಿಯ ವಿಶ್ವನಾಥ ಬಂಗೇರ ಅವರನ್ನು ಸಂಪರ್ಕಿಸಿ ಚಿನ್ನಾಭರಣಗಳ
ಬ್ಯಾಗನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಸಂದರ್ಭ ಈ ಮಾನವೀಯ ಪ್ರಸಂಗಕ್ಕೆ ಆರಂಬೋಡಿ ಗ್ರಾಮದ ಪ್ರದೀಪ್ ಪಾಣಿಮೇರು, ಜಯಂತ್ ದೇಲೋಡಿ, ರಾಜೇಶ್ ಹುಲಿಮೇರು, ರಿಕ್ಷಾ ಚಾಲಕ ಯತೀಶ್ ಪಾಡ್ಯಾರು ಮತ್ತಿರರು ಸಾಕ್ಷಿಯಾದರು. ಜಯಂತ ಶೆಟ್ಟಿ ಅವರ ಪ್ರಾಮಾಣಿಕತೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.














Post Comment