ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ 13 ವರ್ಷ: ಇಂದಿಗೂ ಕೊನೆಯಾಗದ ಸೌಜನ್ಯ ನ್ಯಾಯದ ಕೂಗು

ಬೆಳ್ತಂಗಡಿ : 2012ರಲ್ಲಿ ನಡೆದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ – ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ರ ಇಂದಿಗೆ ಭರ್ತಿ 13 ವರ್ಷಗಳು ತುಂಬುತ್ತಿದ್ದು ದೇಶಾದ್ಯಂತ ಸಾವಿರಾರು ನ್ಯಾಯಪರ ಸಂಘಟನೆಗಳು ಮತ್ತು ಸೌಜನ್ಯ ತಾಯಿ 2012ರಿಂದ ಇಂದಿನವರೆಗೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ಉಜಿರೆ ಎಸ್ ಡಿ ಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು.ಸೌಜನ್ಯ(17)
2012ರ ಅಕ್ಟೋಬರ್ 9ರಂದು ಕಾಲೇಜಿಗೆ ಹೋದವಳು ಸಂಜೆ ಕಾಲೇಜು ಬಿಟ್ಟು ಗೆಳತಿಯೊಂದಿಗೆ ಕೆಎಸ್ ಆರ್ ಟಿ ಸಿ ಬಸ್ಸಿನಲ್ಲಿ ಬಂದು ಧರ್ಮಸ್ದಳ ನೇತ್ರಾವತಿ ಸ್ನಾನಘಟ್ಟ ಬಸ್ ನಿಲ್ದಾಣದಲ್ಲಿ ಇಳಿದಿದ್ದಳು.

ಬಸ್ ನಿಲ್ದಾಣದಿಂದ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯ ಪ್ರವೇಶ ಧ್ವಾರ ಮತ್ತು ಎದುರಿನ ಮತ್ತೊಂದು ಬಸ್ ನಿಲ್ದಾಣದ ಮೂಲಕ ಹಾದು ಜೀಪಿನಲ್ಲಿ ಬರುತ್ತಿದ್ದ ಮಾವ ವಿಠಲ ಗೌಡ ಅವರತ್ತ ಕೈಬೀಸಿದ್ದ ಸೌಜನ್ಯ. ಪಾಂಗಾಳ ಕ್ರಾಸ್ ನತ್ತ ನಡೆದುಕೊಂಡು ಹೋಗಿದ್ದಳು.
ಅಂದು ಸಂಜೆ ಎಂದಿಗಿಂತ ಬೇಗನೇ ಮನೆಗೆ ತಲುಪಬೇಕಿದ್ದ ಮಗಳು ಸೌಜನ್ಯ 6-7 ಗಂಟೆವರೆಗೂ ಬಾರದಿದ್ದಾಗ ಗಾಬರಿಗೊಂಡ ತಾಯಿ ಮನೆಯವರಿಗೆಲ್ಲ , ಸಂಬಂಧಿಕರಿಗೆಲ್ಲಾ
ದೂರವಾಣಿ ಕರೆ ಮಾಡಿ ವಿಚಾರಿಸಿ ನೇತ್ರಾವತಿ ಸ್ನಾನಘಟ್ಟ ಮಣ್ಣಸಂಕ ಪರಿಸರದಲ್ಲಿ ಹುಡುಕಾಡಿ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೌಜನ್ಯ ಹೆತ್ತವರು ಮತ್ತು ನೂರಾರು ಯುವಕರ ಗುಂಪು ಹಿಂದೂ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಸ್ಥಳೀಯರು ಸಂಬಂಧಿಕರು ಇಡೀ ರಾತ್ರಿ ಬೆಳಗ್ಗಿನ ಜಾವದವರೆಗೂ ಪಾಂಗಾಳ ಕ್ರಾಸ್-ಮಣ್ಣಸಂಕ-ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಹೆದ್ದಾರಿ ಬದಿಯ ಕಾಡಿನಲ್ಲಿ ಹುಡುಕಾಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಆದರೆ ಮರುದಿನ ಅಕ್ಟೋಬರ್ 10-2012 ರಂದು ಬೆಳಿಗ್ಗೆ ಮಣ್ಣಸಂಕ ಎಂಬಲ್ಲಿ ಮುಖ್ಯ ರಸ್ತೆಯ ಬದಿಯ ತೋಡಿನಾಚೆ ಪೊದೆಯ ಮರೆಯಲ್ಲಿ ಸೌಜನ್ಯ ನಗ್ನ ಮೃತದೇಹ
ಅತ್ಯಾಚಾರಕ್ಕೊಳಗಾಗಿ ಪತ್ತೆಯಾಗಿತ್ತು.
ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್ 9ರಂದು ಅಪಹರಣಕ್ಕೊಳಗಾಗಿ 10ರಂದು ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಬೆಳಕಿಗೆ ಬಂದರೆ ಇದಕ್ಕೂ 21 ದಿನಗಳ ಹಿಂದೆ ಸೆಪ್ಟಂಬರ್ 20ರಂದು ಧರ್ಮಸ್ಥಳ ((ಮಾಜಿ ಆನೆ ಮಾವುತ ನಾರಾಯಣ ಸಫಲ್ಯ ಮತ್ತು ಸಹೋದರಿ ಯಮುನಾ) ಜೋಡಿ ಕೊಲೆ ಪ್ರಕರಣ ನಡೆದಿತ್ತು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಾರಂಭದಲ್ಲೇ ಹಿಂದೂ ಜಾಗರಣ ವೇದಿಕೆ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ತನಿಖೆಗೆ ಪ್ರಬಲ ಪ್ರತಿಭಟನೆ ವ್ಯಕ್ತವಾಗಿ ಆರೋಪಿಗಳ ಪತ್ತೆ ಹಚ್ಚಲು ಒತ್ತಾಯಗಳು ಕೇಳಿ ಬಂದಿದ್ದು ಇದರ ಬೆನ್ನಲ್ಲೇ 2012ರ ಅಕ್ಟೋಬರ್ 11ರ ಸಂಜೆ ಸಂತೋಷ್ ರಾವ್ ನನ್ನು ಧರ್ಮಸ್ಥಳ ದೇವಳದ ಸಿಬ್ಬಂದಿಗಳು ಗೊಮ್ಮಟ ಬೆಟ್ಟದಲ್ಲಿ ಹಿಡಿದು ಗುಂಪು ಹಲ್ಲೆಯ ಬಳಿಕ ಪೊಲೀಸರಿಗೊಪ್ಪಿಸಿದ್ದರು.

ರಾತ್ರಿ ಬೆಳಗಾಗುವುದರೊಳಗೆ ಸಂತೋಷ್ ರಾವ್ ನನ್ನು ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಯಿತು. ಪ್ರಾರಂಭದಲ್ಲೇ ಸಂತೋಷ್ ರಾವ್ ಆರೋಪಿ ಎಂಬ ವಿಚಾರದಲ್ಲಿ ವ್ಯಾಪಕ ಪರ-ವಿರೋಧ ಸಂಶಯ ವ್ಯಕ್ತವಾಗಿದ್ದರೂ ಒತ್ತಡಕ್ಕೆ ಮಣಿದೋ ಆಮಿಷಕ್ಕೆ ಬಲಿಯಾಗಿಯೋ ಪೊಲೀಸರು ಸಂತೋಷ್ ರಾವ್ ನನ್ನೇ ಆರೋಪಿ ಎಂದು ಅಂತಿಮಗೊಳಿಸಿ ತನಿಖೆ ಆರಂಭಿಸಿದ್ದರು.
ಸಂತೋಷ್ ರಾವ್ ಆರೋಪಿಯೇ ಅಲ್ಲ, ಕೃತ್ಯ ಒಬ್ಬನಿಂದ ನಡೆದಿಲ್ಲ, ಸಂತೋಷ್ ರಾವ್ ಒಬ್ಬನೇ ಆರೋಪಿ ಅಲ್ಲ , ಸಂತೋಷ್ ರಾವ್ ಅಮಾಯಕ ಎಂಬಿತ್ಯಾದಿ ಪರ-ವಿರೋಧಗಳ ನಡುವೆಯೂ ಜೋಡಿಕೊಲೆ ಪ್ರಕರಣವನ್ನೂ ಸಂತೋಷ್ ರಾವ್ ಮತ್ತು ‘ಹಕ್ಕಿಪಿಕ್ಕಿ’ ಗಳ ತಲೆಗೆ ಕಟ್ಟುವ ವಿಫಲ ಯತ್ನವೂ ನಡೆದಿತ್ತು.
ಬಂದವು. ಹೋರಾಟಗಾರರೂ ಇದನ್ನೇ ಪ್ರತಿಪಾದಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಗಳು ತೀವ್ರವಾಗುತ್ತಾ ಹೋಯಿತು.


ಈ ಮಧ್ಯೆ 2013ರಲ್ಲಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾದ ‘ಸಂತೋಷ್ ರಾವ್ ಅಮಾಯಕ’ ನಿಜವಾದ ಆರೋಪಿಗಳು ನಿರ್ಭೀತವಾಗಿ ರಾಜರೋಷವಾಗಿ ತಿರುಗಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಪೂರ್ವಯೋಜಿತ ಷಡ್ಯಂತ್ರದ ಭಾಗವಾಗಿ ಸಂತೋಷ್ ರಾವ್ ನನ್ನು ಪ್ರಕರಣಕ್ಕೆ ವ್ಯವಸ್ಥಿತವಾಗಿ
ಸಿಲುಕಿಸಲಾಗಿದೆ. ಹಾಗೂ ಎಸ್ ಪಿ ಅಭಿಷೇಕ್ ಗೋಯಲ್ ತನಿಖಾಧಿಕಾರಿ ಯೋಗೀಶ್, ವೈದ್ಯಾಧಿಕಾರಿಗಳು ಸೇರಿ ಇಡೀ ಪ್ರಕರಣದ ಪ್ರಮುಖ ಸಾಕ್ಷ್ಯಗಳನ್ನು ಗೋಲ್ಡನ್ ಟೈಮ್ ನಲ್ಲಿ ನಾಶಪಡಿಸಿ ತನಿಖೆಯ ದಿಕ್ಕುತಪ್ಪಿಸಿ ಮುಚ್ಚಿಹಾಕಿದ್ದಾರೆ ಎಂಬ ಆರೋಪ 2012ರಿಂದ ಇಂದಿನವರೆಗೂ ಕೇಳಿ ಬರುತ್ತಲೇ ಇದೆ. ಸಿಬಿಐ ಹಿರಿಯ ಅಧಿಕಾರಿಗಳೂ ಪ್ರಕರಣದ ಆಳ ಅಗಲಕ್ಕೆ ಇಣುಕದೆ ಸ್ಥಳೀಯ ತನಿಖಾಧಿಕಾರಿಯ ‘ಸಿದ್ಧ ವರದಿ’ ಗೆ ಸಿಬಿಐ ಮುದ್ರೆ ಒತ್ತಿದಂತೆ ತನಿಖಾ ವರದಿ ಕಂಡು ಬಂದಿತ್ತು. ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳು ನಡೆದುಕೊಂಡ ರೀತಿ ಆರೋಪಗಳಿಗೆ ಪುಷ್ಠಿ ನೀಡುತ್ತಲೇ ಇತ್ತು. ಈ ಮಧ್ಯೆ
ಸೌಜನ್ಯ ಹೆತ್ತವರು ದೂರಿನಲ್ಲಿ ಪ್ರಬಲವಾಗಿ ಉಲ್ಲೇಖಿಸಿರುವ ವ್ಯಕ್ತಿಗಳನ್ನು ಸೂಕ್ತ ತನಿಖೆಗೊಳಪಡಿಸಬೇಕೆಂದು ಮರು ದೂರು ನೀಡಿದ್ದರು.

ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಆಗ್ರಹಿಸಿ
ಹಿಂದೂ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು,
ದಲಿತ ಸಂಘಟನೆಗಳು, ಡಿವೈಎಫ್ ಐ, ಜನವಾದಿ ಮಹಿಳಾ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳು ರಾಜ್ಯ, ದೇಶದಾದ್ಯಂತ ಸೌಜನ್ಯಪರ ಹೋರಾಟಗಳಲ್ಲಿ ಭಾಗಿಯಾದರು. ರಾಜ್ಯಾದ್ಯಂತ ನಡೆದ ಸರಣಿ ಹೋರಾಟಗಳಿಗೆ ಮಣಿದ ರಾಜ್ಯ ಸರ್ಕಾರ ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿತ್ತು.
ಪ್ರಕರಣದ ತನಿಖೆಯ ಬಳಿಕ ಸಿಬಿಐ ವಿಶೇಷ ಕೋರ್ಟ್ ಸಂತೋಷ್ ರಾವ್ ನನ್ನು ನಿರ್ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ಪ್ರಕರಣವು ಮತ್ತೆ ಮರುಜೀವ ಪಡೆದಿತ್ತು.
ಬಳಿಕ ನೈಜ ಆರೋಪಿಗಳ ಪತ್ತೆಗಾಗಿ ಉನ್ನತ ತನಿಖೆಗೆ ಒತ್ತಾಯಿಸಿ ಮತ್ತೆ ಹೋರಾಟ ಮುಂದುವರಿದಿದ್ದು ಇಂದಿನವರೆಗೂ ಸೌಜನ್ಯ ನ್ಯಾಯದ ಕೂಗು ಕೇಳಿಸುತ್ತಲೇ ಇದೆ. ಇದೀಗ 2025ರ ಜುಲೈಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ರಚಿಸಿದ ಎಸ್ ಐ ಟಿ ತನಿಖೆ ಆರಂಭಗೊಂಡ ಬಳಿಕ ಸೌಜನ್ಯ ಪ್ರಕರಣ, ಜೋಡಿ ಕೊಲೆ, ಪದ್ಮಲತಾ, ವೇದವಲ್ಲಿ ಪ್ರಕರಣಗಳೂ ಮುನ್ನೆಲೆಗೆ ಬಂದಿದ್ದು ದೇಶದ ಗಮನ ಸೆಳೆದಿದೆ.
ಇದೀಗ ಸೌಜನ್ಯ ಪ್ರಕರಣಕ್ಕೆ 13 ವರ್ಷಗಳೇ ತುಂಬಿದ್ದು ಸೌಜನ್ಯ ಹೆತ್ತ ತಾಯಿಯ ನ್ಯಾಯದ ಕೂಗು ಇಂದಿಗೂ ಕೊನೆಯಾಗಲೇ ಇಲ್ಲ ಎನ್ನುವುದು ಮಾತ್ರ ದುರಂತ.














Post Comment