ಸೌಜನ್ಯ ಪ್ರಕರಣಕ್ಕೆ 13 ವರ್ಷ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ಜನಾಗ್ರಹ ಸಭೆ

ಎಸ್ ಐಟಿ ತನಿಖೆಯ ವರದಿ ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಗಲಿದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಲಿ” : ಪತ್ರಕರ್ತ ನವೀನ್ ಸೂರಿಂಜೆ
ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ 13 ವರ್ಷಗಳಾದರೂ ನ್ಯಾಯ ಸಿಕ್ಕಿಲ್ಲ, ಇಂದಿನವರೆಗೂ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಲೇ ಬಂದಿದೆ.
ಇಂದು ರಾಜ್ಯಾದ್ಯಂತ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜನಾಗ್ರಹ ಸಭೆಗ ನಡೆಯುತ್ತಿದೆ, ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನ್ಯಾಯ ಸಿಗುವವರೆಗೆ ಕಾನೂನು ಹೋರಾಟದ ಜೊತೆಗೆ ಎಲ್ಲಾ ರೀತಿಯ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆಯನ್ನು ಜನರು ಗಮನಿಸುತ್ತಿದ್ದಾರೆ, ಎಸ್ ಐಟಿ ತನಿಖೆಯ ವರದಿಯು ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಗಲಿದೆ, ಎಸ್ ಐಟಿ ತನಿಖಾ ತಂಡ ತನ್ನ ಘನತೆಗೆ ಧಕ್ಕೆಯಾಗದ ರೀತಿಯಲ್ಲಿ ಜವಾಬ್ದಾರಿಯುತವಾಗಿ ವರದಿಯನ್ನು ಒಪ್ಪಿಸಬೇಕಾಗಿದೆ, ತನಿಖೆಯ ಮೂಲಕ ಜನತೆಯ ವಿಶ್ವಾಸವನ್ನು ಎಸ್.ಐ.ಟಿ ಉಳಿಸಿಕೊಳ್ಳಬೇಕಾಗಿದೆ, ಎಸ್ ಐ ಟಿ ಅಧಿಕಾರಿಗಳು ಜನತೆ ಇಟ್ಟ ವಿಶ್ವಾಸವನ್ನು ಕಳೆದುಕೊಂಡು ಕಳಂಕ ಅಂಟಿಸಿಕೊಳ್ಳದಿರಲಿ ಎಂದು ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಆಗ್ರಹಿಸಿದರು.
ಅವರು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ
ಬೆಳ್ತಂಗಡಿ ಅಂಬೇಡ್ಕರ್ ಭವನಲ್ಲಿ ಗುರುವಾರ ನಡೆದ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ -ಕೊಲೆ ಪ್ರಕರಣ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ ಹಾಗೂ ಧರ್ಮಸ್ಥಳ ‘ದೌರ್ಜನ್ಯಗಳು ಇತಿಹಾಸ ಮತ್ತು ವರ್ತಮಾನ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಎಸ್ ಐ ಟಿ ತನಿಖೆ ಪ್ರಾಮಾಣಿಕವಾಗಿ ನಡೆದರೆ ಮಾತ್ರ ಸತ್ಯ ಹೊರಬರಲಿದೆ ಎಂಬುದು ಎಲ್ಲರ ವಿಶ್ವಾಸವಾಗಿದೆ. ಇಂದು ನಡೆಯುತ್ತಿರುವ ಜನಾಗ್ರಹ ಸಭೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿದೆ ಎಂದು ಪೊಲೀಸರು ಅಡ್ಡಿಪಡಿಸಲು ಮುಂದಾಗಿದ್ದರು ಎಂದು ಅವರು ಆರೋಪಿಸಿದರು.
ಸೌಜನ್ಯ ತಾಯಿ ಕುಸುಮಾವತಿ ಮಾತನಾಡುತ್ತಾ ಅತ್ಯಾಚಾರಿಗಳನ್ನು ಪತ್ತೆ ಹಚ್ಚುವ ಅಧಿಕಾರಿ ಧರ್ಮಸ್ಥಳಕ್ಕೆ ಬೆಳ್ತಂಗಡಿ ತಾಲೂಕಿಗೆ ಬಂದಿಲ್ಲ , ಕಳೆದ 13ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ನ್ಯಾಯ ಮಾತ್ರ ಸಿಗುತ್ತಾ ಇಲ್ಲ. ಇದೀಗ ನ್ಯಾಯ ಕೇಳಿದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಲು ಮುಂದಾಗುತ್ತಿದ್ದಾರೆ. ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ನ್ಯಾಯ ಕೇಳುವುದೇ ತಪ್ಪಾ ಎಂದು ಗದ್ಗದಿತರಾಗಿ ಎಂದು ಪ್ರಶ್ನಿಸಿದರು.
ನ್ಯಾಯಕ್ಕಾಗಿ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾಯವಾದಿ, ಕಾರ್ಮಿಕ ಮುಖಂಡ ಬಿ.ಎಂ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಅತ್ಯಾಚಾರ, ಕೊಲೆ, ದೌರ್ಜನ್ಯ, ಶೋಷಣೆ ಮಾಡುವ ವರ್ಗ, ಇಂಥ ಅತ್ಯಾಚಾರ, ಕೊಲೆ, ಸುಲಿಗೆ, ದೌರ್ಜನ್ಯ, ಶೋಷಣೆಗಳಿಗೊಳಗಾಗುವ ವರ್ಗ, ಇನ್ನೊಂದು ನಮ್ಮನ್ನಾಳುವ ವರ್ಗ , ಈ ವರ್ಗಗಳಲ್ಲಿ ನಾವು ಯಾರ ಪರ ನಿಲ್ಲಬೇಕು ಎಂಬುದೇ ಈ ಜನಾಗ್ರಹ ಸಭೆಯ ಉದ್ದೇಶ ಎಂದರು.

ಈ ಸಂದರ್ಭ ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಹೋರಾಟಗಾರರಾದ ವಿಷ್ಣುಮೂರ್ತಿ ಭಟ್, ಸಿಪಿಐಎಂ ಮುಖಂಡ ಯಾದವ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಮುಖಂಡ ಲಕ್ಷ್ಮಣ ಗೌಡ ವಹಿಸಿದ್ದರು.ಸಮುದಾಯ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್
ಡಿ.ವೈ. ಎಫ್.ಐ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್, ಮಾನವ ಬಂಧುತ್ವ ವೇದಿಕೆಯ ಪ್ರಮುಖ ಚೆನ್ನಕೇಶವ, ಪದ್ಮಲತಾ ಕುಟುಂಬದ ಇಂದ್ರಾವತಿ, ಶಶಿಧರನ್, ಜನವಾದಿ ಮಹಿಳಾ ಸಂಘದ ಕಿರಣ ಪ್ರಭ ಈಶ್ವರಿ ಹಾಗು ಇತರರು ಇದ್ದರು.














Post Comment