ಬಂದಾರು ಖಾಸಗಿ ಬಸ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆಗೈದು ದರೋಡೆ

ಬಂದಾರಿನಿಂದ ಉಪ್ಪಿನಂಗಡಿ ಹೋಗುವಾಗ ರಾತ್ರಿ ನಡೆದ ಘಟನೆ
ಬೆಳ್ತಂಗಡಿ : ಹಗಲಿನ ಕೊನೆ ಟ್ರಿಪ್ ಕರ್ತವ್ಯ ಮುಗಿಸಿ ರಾತ್ರಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕರೋರ್ವರನ್ನು ದುಷ್ಕರ್ಮಿಗಳು ದಾರಿ ಮಧ್ಯೆ ಅಡ್ಡಗಟ್ಟಿ ಹಲ್ಲೆ ನಡೆಸಿ ಹಣ ದರೋಡೆಗೈದ ಘಟನೆ ಬುಧವಾರ ರಾತ್ರಿ ಮೊಗ್ರು ಗ್ರಾಮದ ಅಲೆಕ್ಕಿ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ನಿವಾಸಿ ಉಪ್ಪಿನಂಗಡಿ – ಬಂದಾರು ಮಧ್ಯೆ ಸಂಚರಿಸುವ ಬಂದಾರಿನ ಖಾಸಗಿ ಬಸ್ ಚಾಲಕ ಮ್ಯಾಕ್ಸಿಮ್ (47) ಎಂಬವರೇ ಕಳೆದ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆ ಮತ್ತು ದರೋಡೆ ದೌರ್ಜನ್ಯಕ್ಕೊಳಗಾದವರು.
ಚಾಲಕ ಮ್ಯಾಕ್ಸಿಮ್ ಅವರು ಎಂದಿನಂತೆ ಕರ್ತವ್ಯ ಮುಗಿಸಿ ತಮ್ಮ ಪ್ಲಾಟಿನಾ ಬೈಕಿನಲ್ಲಿ ಬಂದಾರು -ಕಲ್ಲಮಾಡ- ಮುರ ಇಳಂತಿಲ ಮಾರ್ಗವಾಗಿ ಉಪ್ಪಿನಂಗಡಿ ಕಡೆಗೆ ಹೋಗುವಾಗ ರಾತ್ರಿ ಸುಮಾರು 8.30ರ ಹೊತ್ತಿಗೆ ಪಲ್ಸರ್ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ
ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಅಲೆಕ್ಕಿ ಚಾಲಕನ ಬೈಕಿಗೆ ರಸ್ತೆಯಲ್ಲಿ ಅವರ ಬೈಕ್ ಅಡ್ಡ ನಿಲ್ಲಿಸಿ ಏಕಾಏಕಿ ಹಲ್ಲೆ ನಡೆಸಿ ಸುಮಾರು 4,000/- ರೂಪಾಯಿ ಹಾಗೂ ಡ್ರೈವಿಂಗ್ ಲೈಸೆನ್ಸಿನ ಕ್ಸೆರಾಕ್ಸ್ ಪ್ರತಿಯನ್ನು ದೋಚಿಕೊಂಡು ಹೋಗಿದ್ದಾರೆ.
ಕೃತ್ಯ ಎಸಗಿರುವುದು ರಾತ್ರಿ ವೇಳೆಯಾದ್ದರಿಂದ ಪಲ್ಸರ್ ಬೈಕ್ ನಂಬರಾಗಲಿ , ಹಲ್ಲೆಗೈದು ಹಣ ದೋಚಿದ ವ್ಯಕ್ತಿಗಳು ಪರಿಚಿತರೋ ಅಪರಿಚಿತರೋ ಎಂಬ ಬಗ್ಗೆಯಾಗಲಿ ಗುರುತು ಹಿಡಿಯಲು ಚಾಲಕನಿಂದ ಸಾಧ್ಯವಾಗಲಿಲ್ಲ ಎನ್ನಲಾಗಿದೆ. .ಈ ಬಗ್ಗೆ ದರೋಡೆಗೊಳಗಾದ ಚಾಲಕ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
















Post Comment