ಹದಗೆಟ್ಟ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯಲ್ಲಿ ಮಿಶ್ರ ಬೆಳೆ ಭಾಗ್ಯ!

ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ತೆರೆಸಲು ತೆಂಗು, ಬಾಳೆ , ಗೆಡ್ಡೆ ಕೆಸು, ಪಪ್ಪಾಯಿ ನೆಟ್ಟು ಹೀಗೊಂದು ವಿಡಂಬನಾತ್ಮಕ ಪ್ರತಿಭಟನೆ!
ಬೆಳ್ತಂಗಡಿ : ಮನುಷ್ಯರು, ವಾಹನಗಳ ಸಂಚಾರ ಬಿಡಿ ಜಾನುವಾರುಗಳೂ ದಾಟಲು ಹೆದರುವಷ್ಟು ಹದಗೆಟ್ಟಿರುವ
ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಕಲ್ಲೇರಿ ಸಮೀಪ
ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ನಾಗರಿಕರು ಸೋಮವಾರ
ವಿಶಿಷ್ಟ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿಯಿಂದ
ಉಪ್ಪಿನಂಗಡಿವರೆಗೆ ನಡೆದಾಡಲು ಹಿಂಜರಿಯುವಷ್ಟು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜನಪ್ರತಿನಿಧಿಗಳ ಮತ್ತು
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಅಕ್ರೋಶಗೊಂಡ ಸ್ಥಳೀಯ ನಾಗರಿಕರು ಕಲ್ಲೇರಿ – ಕರಾಯ ಮಧ್ಯೆ ಶಿವಗಿರಿ ಎಂಬಲ್ಲಿ ರಸ್ತೆ ಮಧ್ಯೆ ತೆಂಗು, ಬಾಳೆ , ಗೆಡ್ಡೆ ಕೆಸು, ಪಪ್ಪಾಯಿ ನೆಟ್ಟು ಇದೀಗ ವಿಡಂಬನಾತ್ಮಕ ಪ್ರತಿಭಟನೆ ವ್ಯಕ್ತಪಡಿಸಿದ್ದು ಬೆಳ್ತಂಗಡಿಯ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಇಲಾಖಾಧಿಕಾರಿಗಳಾಗಲಿ ಕುಲಗೆಟ್ಟ ರಸ್ತೆಯ ದುರಸ್ತಿ ಅಥವಾ ಅಭಿವೃದ್ಧಿಯ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ಆರೋಪ ವಾಹನ ಸವಾರರಿಂದ ಕೇಳಿ ಬರುತ್ತಿದೆ.

ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಯಾವುದೇ ತಾತ್ಕಾಲಿಕ ಕ್ರಮವನ್ನೂ ಕೈಗೊಳ್ಳದಿರುವುದು ನಾಗರಿಕರ, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು ಹೇಳಿದ್ದು ಹೀಗೆ: ಬುಧವಾರ ಉಜಿರೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ದುಃಸ್ಥಿತಿ ಮತ್ತು ನಾಗರಿಕರು ರಸ್ತೆ ಮಧ್ಯೆ ಬಾಳೆ, ತೆಂಗು, ಕೆಸು, ಪಪ್ಪಾಯಿ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಪತ್ರಕರ್ತರು ಶಾಸಕರನ್ನು ಪ್ರಶ್ನಿಸಿದಾಗ “ಇದು ಕಾಂಗ್ರೆಸ್ ಸರಕಾರದ ಸಾಧನೆ” ಎಂದು ಒಂದು ರೀತಿಯ ರಾಜಕೀಯ ಹೇಳಿಕೆ ನೀಡಿದರು.
ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿಗಾಗಿ ಮನವಿ ಮಾಡಿಕೊಂಡಾಗ ಗೃಹಸಚಿವರು ಅನುದಾನ ಕೊಡುವ ಭರವಸೆ ನೀಡಿದ್ದರು.

ಬೇರೆ ಕಡೆ ಮಂಜೂರಾದ 12 ಕೋಟಿ ಅನುದಾನವನ್ನು ನನ್ನ ವಿವೇಚನೆಯಲ್ಲಿ ಉಪ್ಪಿನಂಗಡಿ ರಸ್ತೆಗೆ ಇಟ್ಟಿದ್ದೇನೆ, ಸರ್ಕಾರ ಆದೇಶ ನೀಡಿದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗುತ್ತದೆ…” ಎಂಬ ಉತ್ತರವನ್ನು ನೀಡಿದ್ದು ಇದರ ಮರ್ಮ ಅರ್ಥವಾಗದವರು ಯಾರು ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ. ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಯ ಕನಸಿನ ಗತಿ ಸದ್ಯ ತೂಗುಯ್ಯಾಲೆಯಂತಾಗಿದೆ..!

















Post Comment