ಪಿಲಿಗೂಡು ಅಕ್ರಮ ದನ ಸಾಗಾಟ ಪ್ರಕರಣ : ಪೊಲೀಸರು ರಕ್ಷಿಸಿದ್ದ ದನ ಗೋಶಾಲೆಯಿಂದ ನಾಪತ್ತೆ!

ಬೆಳ್ತಂಗಡಿ : ಪಿಕಪ್ ನಲ್ಲಿ ಅಕ್ರಮ ದನ ಸಾಗಾಟದ ಆರೋಪದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ತಡೆದು ನಿಲ್ಲಿಸಿ ಪೊಲೀಸರ ಮಧ್ಯೆ ಪ್ರವೇಶಿಸಿ ದಾಖಲಿಸಿಕೊಂಡ ಪ್ರಕರಣದಲ್ಲಿ ಪೊಲೀಸರ ಸೂಚನೆಯಂತೆ ಗೋಶಾಲೆಗೆ ಸಾಗಿಸಲಾದ ದನವೊಂದು ಗೋಶಾಲೆಯಿಂದಲೇ ಕಾಣೆಯಾದ ಕುತೂಹಲಕರ ಘಟನೆ ರಾಮಕುಂಜ ಕೊಯಿಲಾದಲ್ಲಿ ಬೆಳಕಿಗೆ ಬಂದಿದೆ.
ಜುಲೈ 5ರಂದು 2025ರಂದು KA 20B 3993ನೇ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ದನವನ್ನು ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡು ಅ.ಕ್ರ.79/2025ರಂತೆ ಕೇಸು ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ವಶಪಡಿಸಿಕೊಂಡ ದನವನ್ನು ಕೊಯಿಲಾ
(ಫಾರ್ಮ್ ) ಗೋಶಾಲೆಗೆ ಸಾಗಿಸಲಾಗಿತ್ತು.
ಈ ಬಗ್ಗೆ ದನದ ಮಾಲೀಕನಾದ ಇಳಂತಿಲ ಗ್ರಾಮದ ತಿಮ್ಮಪ್ಪ ಪೂಜಾರಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಕರಣ ಸಂಖ್ಯೆ ADS MAGCR 30/2025-26ರಂತೆ ನವೆಂಬರ್ 6ನೇ 2025ರಂದು ದನವನ್ನು ಮಾಲೀಕನಿಗೆ ಬಿಟ್ಟುಕೊಡಲು ಆದೇಶ ನೀಡಿದ್ದಾರೆ.
ಆದರೆ ಎಸಿ ಆದೇಶವನ್ನು ಹಿಡಿದುಕೊಂಡು ತಿಮ್ಮಪ್ಪ ಪೂಜಾರಿ ಅವರು ಗೋಶಾಲೆಗೆ ಹೋದರೆ ಅವರ ದನ ಕಾಣೆಯಾಗಿತ್ತು.
ಗೋಶಾಲೆಗೆ ಸಂಬಂಧಪಟ್ಟವರ ಬಳಿ ತಮ್ಮ ದನದ ಬಗ್ಗೆ ವಿಚಾರಿಸಿದಾಗ “ಮೇಯಲು ಬಿಟ್ಟ ದನ ಬರಲಿಲ್ಲ…” ಎಂದು ತಿಳಿಸಿದರು.
ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಉಪ್ಪಿನಂಗಡಿ ಪೊಲೀಸರು ಮತ್ತು ಗೋಶಾಲೆಯ ಸಿಬ್ಬಂದಿ ದನವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ ಎನ್ನಲಾಗಿದೆ.
ದನ ಮಾರಾಟ ಕೃತ್ಯ ಪೊಲೀಸರಿಗೆ ಮಾಹಿತಿ ನೀಡಿಯೇ ನಡೆದಿದೆಯೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗೋಶಾಲಾ ಸಿಬ್ಬಂದಿಯನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ದನದ ಮಾಲೀಕನಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದ್ದಂತೆ ದನದ ಮಾಲಕರಿಗೆ ಗೋಶಾಲಾ ಸಿಬ್ಬಂದಿಯಿಂದ ಮತ್ತು ಪೊಲೀಸರಿಂದ ದೂರವಾಣಿ ಕರೆ ಬರಲಾರಂಭಿಸಿದ್ದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.
















Post Comment