ನಾಳ : ದಲಿತ ಕುಟುಂಬಗಳ ದಾರಿಗೆ ವಿನಾಕಾರಣ ಅಡ್ಡಿ : ವಿವಾದದ ಹೊಗೆ ನೋಡುತ್ತಿರುವ ಕಳಿಯ ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ!

ಬೆಳ್ತಂಗಡಿ : ಹಲವು ವರ್ಷಗಳಿಂದ ಇದ್ದ ಖಾಯಂ ಕಾಲು ದಾರಿಯೊಂದಕ್ಕೆ ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ನೀಡದೆ ಪರ್ಯಾಯ ದಾರಿ ಕಲ್ಪಿಸದೆ ವಿನಾಕಾರಣ ಅಡ್ಡಿಪಡಿಸುತ್ತಾ
ಬಡ ಕುಟುಂಬಗಳಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿರುವ ವಿವಾದವೊಂದು ಕಳಿಯ ಗ್ರಾ.ಪಂ. ವ್ಯಾಪ್ತಿಯ ನಾಳ ಎಂಬಲ್ಲಿ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ನಾಳ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿಜಯ ಎಂಬ ಮಹಿಳೆ ಹಾಗೂ ನಾಳ ಕಲೆಂಜುಕ್ಕು ಎಂಬಲ್ಲಿನ ನಿವಾಸಿ ಚಂದ್ರಶೇಖರ್ ಎಂಬ ಎರಡು ದಲಿತ ಕುಟುಂಬಗಳು ಮತ್ತು
ಸ್ಥಳೀಯ ನಿವಾಸಿಗಳು ಅಂಗನವಾಡಿ ಸಮೀಪದ ದಾರಿಯೊಂದನ್ನು ಸುಮಾರು 45 ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ.
ಇದೇ ಕಾಲ್ದಾರಿಗೆ ಅಂಗನವಾಡಿ ಸಮೀಪ ಎಂಬ ನೆಪದಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಕಾನೂನು ಬಾಹಿರವಾಗಿ ಅಡ್ಡಿಪಡಿಸುತ್ತಿದ್ದು ಸ್ಥಳೀಯ ಗ್ರಾ. ಪಂ. ಆಡಳಿತವು ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸಿ ಸಾಮಾಜಿಕ ನ್ಯಾಯ ಕೊಡುವ ಬದಲು ಎರಡು ವರ್ಷಗಳಿಂದ ನಿರ್ಲಕ್ಷ್ಯವಹಿಸಿ ವಿವಾದದ ಹೊಗೆ ನೋಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಮಧ್ಯೆ ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿಗೆ ದೂರು ನೀಡಲಾಗಿದ್ದು ಪಂಚಾಯತ್ ನೋಟೀಸ್ ನೀಡಲಾಗಿದ್ದರೂ ಇದುವರೆಗೂ ದಾರಿ ತೆರವಾಗಿಲ್ಲ ಎಂದು ತಿಳಿದು ಬಂದಿದೆ.
ದಾರಿಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ನೊಂದ ಬಡ ಕುಟುಂಬಗಳು ಪುತ್ತೂರು ಸಹಾಯಕ ಕಮಿಷನರು ಹಾಗೂ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯವರಿಗೆ ದೂರು ನೀಡಿದ್ದು ತಹಶೀಲ್ದಾರ್ ಆದೇಶದಂತೆ ತಾಲೂಕು ಸರ್ವೇಯರ್ ಸರ್ವೇ ನಡೆಸಿ ವರದಿ ಒಪ್ಪಿಸಿದ್ದಾರೆ. ಸರ್ವೇ ವರದಿಯ ಆಧಾರದಲ್ಲಿ ತಹಶೀಲ್ದಾರ್‌ರವರು ದಾರಿಗೆ ಅಡ್ಡಿಪಡಿಪಡಿಸದೆ ದಾರಿಯನ್ನು ಊರ್ಜಿತದಲ್ಲಿಡಲು ಕ್ರಮ ಕೈಗೊಳ್ಳುವಂತೆ ಸಿಡಿಪಿಒ ಗೆ ಲಿಖಿತ ಸೂಚನೆ ನೀಡಿದ್ದಾರೆ. ಇಂದಿಗೂ ಸ್ಥಳೀಯ ನಿವಾಸಿಗಳು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ಇಲ್ಲಿನ ನಿವಾಸಿಗಳು ಸಣ್ಣ ರೈತರಾಗಿದ್ದು ಕೃಷಿ, ಹೈನುಗಾರಿಕೆ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ದೂರುದಾರರ ಪಟ್ಟಾ ಸ್ಥಳದ ಕುಮ್ಮಿ ಜಮೀನಿನ ಮೂಲಕ ದಾರಿ ಇದೆ. ದೇವಸ್ಥಾನ, ಶಾಲಾ ಕಾಲೇಜು, ಅಂಚೆ ಕಛೇರಿ, ಅಂಗನವಾಡಿ, ಅಂಗಡಿ ಮತ್ತಿತರ ನಿತ್ಯ ಉದ್ದೇಶಗಳಿಗೆ ಇದೇ ಕಾಲುದಾರಿಯನ್ನು ಅವಲಂಬಿಸಿದ್ದಾರೆ. ಅಂಗನವಾಡಿ ಬಳಿಯಿಂದ ಹಾದು ಹೋಗುವ ಕಾಲು ದಾರಿಗೆ ದುರುದ್ದೇಶದಿಂದ ಅಡ್ಡಿಪಡಿಸುತ್ತಿದ್ದು ಸಾಮಾಜಿಕ ನ್ಯಾಯಕ್ಕೆ ಭಂಗಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅಂಗನವಾಡಿ ಮತ್ತು ಉಪ ಆರೋಗ್ಯ ಕೇಂದ್ರ ಮಂಜೂರುಗೊಂಡ ಆದೇಶದಲ್ಲಿ ದಾರಿ ಹಕ್ಕನ್ನು ಊರ್ಜಿತದಲ್ಲಿಡುವಂತೆಯೂ ದಾರಿಗೆ ಅಡ್ಡಿಪಡಿಸದಂತೆಯೂ ಉಲ್ಲೇಖವಿದ್ದು ಇದನ್ನು ಉಲ್ಲಂಘಿಸಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸುತ್ತಿರುವುದು ಸಂಬಂಧಪಟ್ಟ ಇಲಾಖಾಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಾರಿಯನ್ನು ಬಂದ್ ಮಾಡಿರುವ ಅಕ್ರಮ ಕಲ್ಲು ಕಂಬದ ತಂತಿ ಬೇಲಿಯನ್ನು ತೆರವುಗೊಳಿಸುವಂತೆ
ಪುತ್ತೂರು ಎ ಸಿ ಹಾಗೂ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದರು.
ಸ್ಥಳೀಯರ ದೂರಿಗೆ ಸಂಬಂಧಿಸಿ ತಹಶೀಲ್ದಾರ್ ರವರ ಆದೇಶದಂತೆ
ಸರ್ವೇ ನಡೆಸಿದ ತಾಲೂಕು ಸರ್ವೇಯರ್ ವರದಿ (ದಿ:21/01/2025) ಆಧಾರದಲ್ಲಿ ಬೆಳ್ತಂಗಡಿ ತಹಸೀಲ್ದಾರ್ ರವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿ.ಡಿ.ಪಿ.ಒ.)ಗೆ ನೀಡಿರುವ ಸೂಚನಾ ಪತ್ರದ ಮುಖ್ಯಾಂಶ:
” ಕಾದಿರಿಸಿದ ಆದೇಶದ ಷರ್ತದಂತೆ ಈಗಾಗಲೇ ಊರ್ಜಿತ ಇರುವ ಸಂಪರ್ಕ ರಸ್ತೆಯನ್ನು ಆತಂಕಿಸತಕ್ಕದ್ದಲ್ಲ , ಎಂದಿದ್ದರೂ ಕಾಲು ದಾರಿಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರಿಂದ ವರದಿ ಪಡೆಯಲಾಗಿ ಅಂಗನವಾಡಿಗೆ ಕಾದಿರಿಸಿದ ಜಮೀನಿನ ಪಕ್ಕದಲ್ಲಿ ದೂರುದಾರರು ಸೇರಿದಂತೆ 6 ಮನೆಗಳಿಗೆ ಸಂಪರ್ಕ ದಾರಿಯನ್ನು ತುಂಬಾ ಹಿಂದಿನಿಂದಲೂ ಬಳಸುತ್ತಿದ್ದು ಪ್ರಸ್ತುತ ಕಾದಿರಿಸಿದ ಜಮೀನಿನಲ್ಲಿದ್ದ ಕಾಲುದಾರಿಯನ್ನು ಶರ್ತ ಉಲ್ಲಂಘಿಸಿ ತಂತಿ ಬೇಲಿ ನಿರ್ಮಾಣ ಮಾಡಿ ಕಾಲು ದಾರಿ ಮುಚ್ಚಿರುವುದಾಗಿದೆ.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವಹಿಸಿರುವುದಿಲ್ಲ. ಆದುದರಿಂದ ಕೂಡಲೇ ಮುಚ್ಚಿರುವ ಕಾಲುದಾರಿಗೆ ನಿರ್ಮಿಸಿರುವ ತಂತಿಬೇಲಿ ತೆರವು ಮಾಡಲು ಕ್ರಮ ಕೈಗೊಳ್ಳುವುದು. ಕೈಗೊಂಡ ಕ್ರಮದ ಬಗ್ಗೆ ಜಿಪಿಎಸ್ ಛಾಯಾಚಿತ್ರದೊಂದಿಗೆ ಈ ಕಛೇರಿಗೆ ಕೂಡಲೇ ವರದಿ ಸಲ್ಲಿಸಲು ಸೂಚಿಸಿದೆ.”

ಕಂದಾಯ ಇಲಾಖೆ ಸೂಕ್ತ ಸರ್ವೆ ನಡೆಸಿ ಸ್ಪಷ್ಟ ಸೂಚನೆ ನೀಡಿದ್ದರೂ
ಅಂಗನವಾಡಿ ಕಾರ್ಯಕರ್ತೆ ಸ್ಥಳೀಯ ಕೆಲವು ಚಲಾವಣೆಯಲ್ಲಿಲ್ಲದ ಮರಿ ಪುಡಾರಿಗಳ ಗುಂಪು ಕಟ್ಟಿಕೊಂಡು ಬಡ ಕುಟುಂಬಗಳ ದಾರಿಗೆ ಅಡ್ಡಿಪಡಿಸುತ್ತಾ ಒಣ ಹಟ ಸಾಧಿಸುತ್ತಿದ್ದಾರೆ. ಇನ್ನೊಂದೆಡೆ ಸಿಡಿಪಿಒ ಜವಾಬ್ದಾರಿಯುತ ಅಧಿಕಾರಿಯಾಗಿ ತಹಸೀಲ್ದಾರ್ ರವರ ಸೂಚನೆಗೂ ಬೆಲೆ ಕೊಡದೆ, ದಾರಿ ವಿವಾದವನ್ನು ಬಗೆಹರಿಸುವ ಬದಲು ಅಂಗನವಾಡಿ ಕಾರ್ಯಕರ್ತೆ ಜೊತೆ ಸೇರಿಕೊಂಡು ಸ್ಥಳೀಯ ರಾಜಕೀಯಕ್ಕೆ ತುಪ್ಪ ಸುರಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
















Post Comment