ಕಣಿಯೂರು ಶ್ರೀಧರ ಅನುಮಾನಾಸ್ಪದ ಸಾವು ಪ್ರಕರಣ: ಕೊಲೆ ಶಂಕೆ

ಬೆಳ್ತಂಗಡಿ : ಆಗಸ್ಟ್ ತಿಂಗಳಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆಯಾದ ಶ್ರೀಧರ ( 36) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಶಂಕಿಸಿ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ನೊಂದ ಬಡ ಕುಟುಂಬ ನ್ಯಾಯಕ್ಕಾಗಿ ನಾಲ್ಕು
ತಿಂಗಳಿನಿಂದ ಕಾಯುತ್ತಿದೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕುಂಡಗುರಿ ನಿವಾಸಿ
ಕೊರಗು ಎಂಬವರ ಪುತ್ರ ಶ್ರೀಧರ ಎಂಬವರ ಮೃತದೇಹ ಆಗಸ್ಟ್ 26ರಂದು ಬೆಳಿಗ್ಗೆ ನ್ಯಾಯತರ್ಪು ಗ್ರಾಮದ ಪಲ್ಲಾದೆ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಹಣೆ ಭಾಗದಲ್ಲಿ ಏಟು ಬಿದ್ದ ಗಾಯವಿತ್ತು. ಕೈಕಾಲುಗಳು ಒರಟಾಗಿ ದೇಹದಿಂದ ಮೇಲೆತ್ತಿದ ರೀತಿಯಲ್ಲಿ ಮರಗಟ್ಟಿದ ಸ್ಥಿತಿಯಲ್ಲಿತ್ತು.
ಮೃತನ ಕುಟುಂಬದವರ ನೀಡಿದ ಮಾಹಿತಿಯಂತೆ ಬೆಳ್ತಂಗಡಿ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳ ಮಹಜರು ನಡೆಸಿ ಅಗತ್ಯ ಪ್ರಕ್ರಿಯೆ ನಡೆಸಿದ್ದರು. ಘಟನೆಯ ಬೆನ್ನಲ್ಲೇ ಸಂಶಯಗೊಂಡ ಮೃತನ ಒಡಹುಟ್ಟಿದ ಸಹೋದರ ಶಿವಪ್ರಸಾದ್ ಎಂಬವರು ತನ್ನ ತಮ್ಮ “ಶ್ರೀಧರನ ಸಾವು ಆಕಸ್ಮಿಕವಲ್ಲ; ಇದೊಂದು ವ್ಯವಸ್ಥಿತ ಕೊಲೆಯಾಗಿದೆ” ಎಂಬುದಾಗಿ ಬಲವಾದ ಅನುಮಾನ ವ್ಯಕ್ತಪಡಿಸಿ ದ.ಕ.ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ತನಿಖೆ ಒತ್ತಾಯಿಸಿದ್ದರು.

ಆದರೆ ಮೃತನ ಕುಟುಂಬ ಎಸ್ಪಿಗೆ ದೂರು ನೀಡಿ ನಾಲ್ಕು ತಿಂಗಳುಗಳಾದರೂ ಪೊಲೀಸರು ಪ್ರಕರಣದ ತನಿಖೆಗೆ ಸಂಬಂಧಿಸಿ ಯಾವ ಕ್ರಮಕೈಗೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ಇದುವರೆಗೂ ಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಲೆ ಭಾಗದ ಗಾಯವನ್ನು ಉಲ್ಲೇಖಿಸಲಾಗಿಲ್ಲ. ಶ್ರೀಧರನ ಅನುಮಾನಾಸ್ಪದ ಸಾವಿನ ಬಗ್ಗೆ ಕೊಲೆ ಶಂಕಿಸಿ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿರುವ ದೂರಿನಲ್ಲಿ ಸಂಶಯಕ್ಕೆ ಪುಷ್ಠಿ ನೀಡಬಲ್ಲ ಕೆಲವು ಬಲವಾದ
ಸಂಗತಿಗಳನ್ನು ಉಲ್ಲೇಖಿಸಲಾಗಿದೆ.
ಶ್ರೀಧರನ ಶವ ಪತ್ತೆಯಾದ ಹಿಂದಿನ ದಿನ ಆಗಸ್ಟ್ 25ರಂದು ರಾತ್ರಿ ಸುಮಾರು 11:30 ಸುಮಾರಿಗೆ ಮುತ್ತ ಯಾನೆ ಮುತ್ತರಾಜ್
ಎಂಬಾತ ಶ್ರೀಧರನ ಮನೆಯವರಿಗೆ ಫೋನ್ ಮಾಡಿ ಶ್ರೀಧರ ಮನೆಗೆ ಬಂದಿದ್ದಾನೆಯೇ? ಎಂದು ವಿಚಾರಿಸಿದ್ದಾರೆ.
ಶ್ರೀಧರನ ಅಣ್ಣನಿಗೆ ಮರುದಿನ ಬೆಳಗ್ಗೆ ಮತ್ತೆ ಕರೆಮಾಡಿ ಕರೆದಿದ್ದು ಅಲ್ಲಿಗೆ ಹೋದಾಗ ಶ್ರೀಧರನನ್ನು ಹುಡುಕೋಣ ಎಂದು ಹೇಳಿ ಹುಡುಕುವ ನೆಪದಲ್ಲಿ ಕಾಡು ಪ್ರದೇಶವನ್ನು ದಾಟಿ ಕೆರೆಯ ಬದಿಗೆ ಕರೆದುಕೊಂಡು ಬಂದು ಶ್ರೀಧರನ ಒಂದು ಜೊತೆ ಚಪ್ಪಲನ್ನು ತೋರಿಸಿ ” ನೋಡು ಇಲ್ಲಿ ಅವನ ಚಪ್ಪಲಿಗಳು ಹಾಗೂ ಮೀನು ಹಿಡಿಯಲು ಕಟ್ಟಿರುವ ಗಾಳ ಮತ್ತು ಶ್ರೀಧರನ ಮೃತದೇಹವನ್ನು ತೋರಿಸಿದ್ದಾನೆ, ಹಾಗೂ ಅವನ ಕೆಲವು ವರ್ತನೆಯನ್ನು ಗಮನಿಸಿದಾಗ ಈತನೇ ಶ್ರೀಧರನನ್ನು ಕೊಂದು ಆಕಸ್ಮಿಕ ಘಟನೆ ಎಂದು ಬಿಂಬಿಸಲಾಗಿದೆ ಎಂಬ ಅನುಮಾನ ಹುಟ್ಟಿದೆ.
ಮಾತ್ರವಲ್ಲದೆ “ಶ್ರೀಧರನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲು ಪೋಲೀಸ್ ದೂರು ನೀಡಬೇಕೆಂದು ನಾನು ಹೇಳಿದಾಗ ಶ್ರೀಧರನ ಒಂದು ಜೊತೆ ಬಟ್ಟೆಯನ್ನು ಕೊಟ್ಟು ಶ್ರೀಧರನು ಗಾಳ ಹಾಕಲು ರಾತ್ರಿ ಮನೆಯಿಂದ ತೆರಳಿರುತ್ತಾನೆ ಎಂದು ಪೋಲಿಸರಿಗೆ ಹೇಳಬೇಕು, ಬೇರೆ ಯಾವ ವಿಷಯವನ್ನು ಹೇಳಬಾರದು ಎಂದು ತಾಕೀತು ಮಾಡಿದ್ದಾನೆ. 25/08/2025 ರ ಮಧ್ಯರಾತ್ರಿ ವೇಳೆಗೆ ಮುತ್ತ ಯಾನೆ ಮುತ್ತರಾಜ್ ಮನೆಯಲ್ಲಿ ಜೋರಾದ ಗಲಾಟೆ ನಡೆದ ಬಗ್ಗೆ ಸ್ಥಳೀಯ ಮಹಿಳೆಯೊಬ್ಬರು ಕೇಳಿಸಿಕೊಂಡಿದ್ದು ಗಲಾಟೆಯಲ್ಲಿ ಮೃತ ಶ್ರೀಧರನ ದನಿ ಕೇಳಿರುತ್ತಾರೆ.” ಈ ಕಾರಣದಿಂದ ಶ್ರೀಧರನ ಮರಣ ಆಕಸ್ಮಿಕವಾಗಿ ನಡೆದಿಲ್ಲ, ಅದೊಂದು ಕೊಲೆಯಾಗಿದೆ, ಕೃತ್ಯದಲ್ಲಿ ಮುತ್ತುರಾಜ್ ಮಾತ್ರವಲ್ಲದೆ ಇತರ ಐದು ಮಂದಿ ಭಾಗಿಯಾಗಿದ್ದಾರೆ
ಎಂದು ದೂರಿನಲ್ಲಿ ಬಲವಾಗಿ ಸಂಶಯ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಲಾಗಿದೆ.















Post Comment