ಅಜ್ಜಿ ತಿಥಿ ; ಆಮೆ ಗಸಿ

ಅಜ್ಜಿ ತಿಥಿ ; ಆಮೆ ಗಸಿ

Share

ಉತ್ತರ ಕ್ರಿಯೆಗಾಗಿ
ಆಮೆಗಳ ಮಾರಣಹೋಮ :ನಾಲ್ವರ ಬಂಧನ

ಆಮೆಗಳು ಸಮೇತ ನಾಲ್ಕು ಮಂದಿಯನ್ನು ಬೇಟೆಯಾಡಿದ ಪೊಲೀಸರು

ಬೆಳ್ತಂಗಡಿ : ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಅಜ್ಜಿಯ ತಿಥಿ ಕಾರ್ಯಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ಸಂಬಂಧಿಕರು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿಯ ಆಧಾರದಲ್ಲಿ‌ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ನಗರದ ಸೋಮಾವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14 ರಂದು ಸಂಜೆ 3:30ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್. ಎಂ. ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ನಾಲ್ಕು ಸುಟ್ಟ ಆಮೆಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯವರು ಫೆ‌.14 ರಂದು ಸಂಜೆ ಬೆಳ್ತಂಗಡಿ ಪೊಲೀಸರಿಂದ ಮಹಜರು ಮಾಡಿ ನಾಲ್ಕು ಸುಟ್ಟಿರುವ ಆಮೆಗಳು ಮತ್ತು ನಾಲ್ಕು ಮಂದಿ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಅಂಚೆ, ಪೆರ್ಡಲ್ ಗ್ರಾಮದ ನಿರ್ಜಲ್ ನಿವಾಸಿ ಮಣಿಕಂಠ(42), ಮಂಗಳೂರು ನಗರದ ಮುಲ್ಕಿ ತಾಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ(54), ಮೂಡಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ವಿಘ್ನೇಶ್(32), ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್(35) ಎಂಬವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ಕು ಮಂದಿ ಆರೋಪಿಗಳಾದ ಮಣಿಕಂಠ, ರಾಜೇಂದ್ರ, ವಿಘ್ನೇಶ್, ಪ್ರಶಾಂತ್ ಇವರು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಂಟಿನಿ ನಿವಾಸಿ ಸಂಬಂಧಿ ಅಜ್ಜಿಯಾದ ದೇವಮ್ಮ ಎಂಬವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಫೆ.13ರಂದು ಆಗಮಿಸಿದ್ದರು. ಅಜ್ಜಿಯ ಪ್ರೀತಿಯ ಆಮೆ ಪದಾರ್ಥ ಮಾಡಿಕೊಂಡು ಬಂದು ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ತಯಾರಿ ಮಾಡಲು ಫೆ.14 ರಂದು ಬೆಳ್ತಂಗಡಿಯ ಸೋಮಾವತಿ ನದಿಗೆ ಹೋಗಿ ಬೇಟೆಯಾಡಿ ಮಾರಣ ಹೋಮಗೈದಿದ್ದು ನಾಲ್ಕು ಆಮೆಗಳ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೇಟೆಯಾಡಿದ ವ್ಯಕ್ತಿಗಳನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ಫೆ.14 ರಂದು ರಾತ್ರಿ ಬಿಡುಗಡೆ ಮಾಡಿಸಿದ್ದಾರೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ಇನ್ಸ್‌ಪೆಕ್ಟರ್ ಬಿ.ಜಿ.ಸುಬ್ಬಾಪುರ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ಸಿಬ್ಬಂದಿ ಎಎಸ್ಐ ಕುಶಾಲಪ್ಪ, ಹೆಡ್ ಕಾನ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಡಿ.ಆರ್.ಎಫ್.ಒ ಕಿರಣ್ ಪಾಟೀಲ್, ಸಂದೀಪ್, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ದಿವಕರ್ ಹಾಗೂ ವಾಹನ ಚಾಲಕ ಕುಶಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Post Comment

ಟ್ರೆಂಡಿಂಗ್‌

error: Content is protected !!