ಬೈಪಾಡಿ ಸ್ಫೋಟ ಪ್ರಕರಣ; ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಭೇಟಿ- ಪರಿಶೀಲನೆ

ಬೆಳ್ತಂಗಡಿ : ಅಂಗಳಕ್ಕೆ ನಾಯಿ ತಂದು ಹಾಕಿದ ಚೆಂಡಿನಂಥ ವಸ್ತುವನ್ನು ಸ್ಫೋಟಕವೆಂದು ಗೊತ್ತಿಲ್ಲದೆ ಬಾಲ್ ಎಂದು ಭ್ರಮಿಸಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಭಯಂಕರ ಸದ್ದಿನಲ್ಲಿ ಸ್ಫೋಟಗೊಂಡು ಬಾಲಕ ಗಾಯಗೊಂಡ ಘಟನೆ ಸಂಭವಿಸಿದ ಮನೆಗೆ ಗುರುವಾರ ಸಂಜೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು
ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಬಾಂಬ್ ಸ್ಕ್ಯಾಡ್ ಹಾಗೂ ಡಾಗ್ ಸ್ಕ್ಯಾಡ್ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಮತ್ತು ಮನೆಯೊಳಗೆ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತ ಮನೆಯಂಗಳದಲ್ಲಿ ಬುಧವಾರ ಸಂಜೆ ಸಂಭವಿಸಿದ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದು ದೊಡ್ಡ ಅನಾಹುತವೊಂದು ತಪ್ಪಿ ಹೋಗಿತ್ತು.
ಚೆಂಡಿನಂಥ ವಸ್ತುವೊಂದನ್ನು ಮನೆಯ ನಾಯಿ ಎಲ್ಲಿಂದಲೋ ಕಚ್ಚಿಕೊಂಡು ಬಂದು ಅಂಗಳದ ಬದಿಯಲ್ಲಿ ಹಾಕಿದ್ದು ಇದು ಏನೆಂದು ತಿಳಿಯದ ಮುಗ್ಧ ಮಕ್ಕಳು ಬಾಲ್ ಎಂದು ಕ್ರಿಕೆಟ್ ಆಡುತ್ತಿದ್ದಾಗ
ಆ ವಸ್ತು ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿತ್ತು.
ಅಂಗಳದಲ್ಲಿ ಮಕ್ಖಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದರು. ಏನೂ ಅರಿಯದ ಮುಗ್ಧ ಮಕ್ಕಳ ಪೈಕಿ ಒಬ್ಬ ಬೌಲಿಂಗ್ ಮಾಡಿದ್ದು ಇನ್ನೊಬ್ಬ ಬ್ಯಾಟಿಂಗ್ ಮಾಡಿದ ಸಂದರ್ಭ ಗೋಡೆಗೆ ಡಿಕ್ಕಿಯಾಗಿ ಸ್ಫೋಟಗೊಂಡಿದ್ದು ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುರುವಾರ ಸಂಜೆ ಶಂಕಿತ ಬಾಂಬ್ ಸ್ಫೋಟಗೊಂಡ ಮನೆಗೆ
ಧರ್ಮಸ್ಥಳ ಎಸ್ ಐ ಸಮರ್ಥ್ ಗಾಣಿಗೇರ್,
ಸೋಕೋ ವಿಭಾಗದ ಸುಮಂತ್, ಆಶಿಫ್ ಅವರುಗಳನ್ನೊಳಗೊಂಡ ಪೊಲೀಸರ ತಂಡ ಸಂಜೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರು. ಇದೀಗ ಬಾಂಬ್ ಸ್ಜ್ಯಾಡ್ ಮತ್ತು ಶ್ವಾನ ದಳ ಘಟನಾ ಸ್ಥಳಕ್ಕಾಗಮಿಸಿ ಮನೆಯಲ್ಲಿ ಮತ್ತು ಅಂಗಳದ ಸುತ್ತಮುತ್ತ ಪರಿಶೀಲನೆ ನಡೆಸಿ ಸ್ಫೋಟಕದ ಅವಶೇಷ ಮಾದರಿಗಳಿಗೆ ಸಂಬಂಧಿಸಿ ಅಗತ್ಯ ಇಲಾಖಾ ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಧರ್ಮಸ್ಥಳ ಪೊಲೀಸರು ಜೊತೆಗಿದ್ದರು.














Post Comment