ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ರಂಗಸ್ಥಳದಿಂದಲೇ ಪಾತ್ರ ಮರೆತು ತರಾಟೆ: ಉಜಿರೆ ಅಶೋಕ್ ಭಟ್ಟರಿಂದ ಮತ್ತೊಂದು ಎಡವಟ್ಟು

ಬೆಳ್ತಂಗಡಿ : ಯಕ್ಷಗಾನ ಪ್ರಸಂಗದ ಪಾತ್ರದಲ್ಲಿ ಅಥವಾ ಭಾಷಣದಲ್ಲಿ ಏನಾದರೊಂದು ಎಡವಟ್ಟುಗಳ ಮೂಲಕ ಆಗಾಗ ಚರ್ಚೆಗೆ ಗ್ರಾಸವಾಗುತ್ತಾ ಸುದ್ದಿಯಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಅವರು ಯಕ್ಷಗಾನ ಪ್ರದರ್ಶನದ ಮಧ್ಯೆ ಭಾಗವತಿಕೆಯಿಂದ ಮನರಂಜನೆಗೊಂಡು ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಅಧಿಕ ಪ್ರಸಂಗವೊಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡಿ ವ್ಯಾಪಕ ಟೀಕೆಗೂ ಚರ್ಚೆಗೂ ಕಾರಣವಾಗಿದೆ.
ಕುಂದಾಪುರ ತಾಲೂಕಿನ ಹೆನ್ನಾಬೈಲ್ ನಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರಸಂಗ ಪ್ರದರ್ಶನದ ವೇಳೆ ಹಿರಿಯ ಕಲಾವಿದ ಅಶೋಕ್ ಭಟ್ ಉಜಿರೆ ಯಕ್ಷಗಾನ ಪ್ರಸಂಗದಲ್ಲೊಂದು ಅಧಿಕ ಪ್ರಸಂಗ ಮೆರೆದಿದ್ದು ಯಕ್ಷಪ್ರೇಮಿ ಪ್ರೇಕ್ಷಕ ವಲಯದಲ್ಲಿ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ.
ಕಲಾವಿದ ಮಾತನಾಡಿದ ಉದ್ದೇಶ ಸರಿಯೇ ಇದ್ದಿರಬಹುದು, ಆದರೆ ರಂಗಸ್ಥಳದಲ್ಲಿ ಪಾತ್ರಧಾರಿಯಾಗಿ ನೇರವಾಗಿ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ಬಳಸಿದ ಪದ ಪ್ರಯೋಗ ಮತ್ತು ವರ್ತಿಸಿದ ರೀತಿ ಸನ್ನಿವೇಶ ಎಷ್ಟು ಸಮಂಜಸ ಎನ್ನುವುದೇ ಇದೀಗ ಚಾಲ್ತಿಯಲ್ಲಿರುವ ಚರ್ಚೆ.
ಧರ್ಮಸ್ಥಳ ಮೇಳದ ಪೌರಾಣಿಕ ಪ್ರಸಂಗದಲ್ಲಿ ಶ್ರೀ ಕೃಷ್ಣನ ಪಾತ್ರಧಾರಿಯಾಗಿ ರಂಗಸ್ಥಳ ಪ್ರವೇಶಿಸಿದ್ದ ಅಶೋಕ್ ಭಟ್ ಹಾಡಿಗೆ ನಾಟ್ಯ ಮಾಡುತ್ತಿದ್ದ ವೇಳೆ ಕೆಲವು ಪ್ರೇಕ್ಷಕರು ಭಾಗವತರ ಹಾಡಿನ ಮೋಡಿಗೆ ಶಿಳ್ಳೆಗಳನ್ನು ಹಾಕಿದ್ದನ್ನು ನೆಪವಾಗಿಟ್ಟುಕೊಂಡು ತಾಳ್ಮೆಗೆಟ್ಟು
ಭಾಗವತಿಕೆ ಮುಗಿದು ಸರದಿ ಬಂದಾಗ ತಮ್ಮ ಪಾತ್ರದ ಅರ್ಥಗಾರಿಕೆ ಆರಂಭಿಸಬೇಕಾಗಿದ್ದ ಸಮಯದಲ್ಲಿ ಪಾತ್ರ ಪ್ರಜ್ಞೆ ಮರೆತು ನೇರವಾಗಿ ಶಿಳ್ಳೆ ಹೊಡೆದವರನ್ನು ಉದ್ದೇಶಿಸಿ ಅಭಾಸದ ಮಾತುಗಳನ್ನಾಡಿ ನಿಂದಿಸಿದ ಪ್ರಸಂಗ ನಡೆದಿದೆ.
“ನೀವು ಶಿಳ್ಳೆಯನ್ನು ನಿಲ್ಲಿಸದಿದ್ರೆ ನಾನು ಹೋಗ್ತೇನೆ, ಸಭ್ಯ ಸಭೆಯನ್ನು ಬಯಸುತ್ತೇನೆ ನಾನು…” ಎಂತದದು ಶಿಳ್ಳೆ, ಏನದು ಶಿಳ್ಳೆ ಏನು ಅಂತ ತಿಳ್ಕೊಂಡಿದ್ದಿರಿ ನೀವು? ಆಟ ಆಡಿಸುವವರು ಯಾರು? ಇದು ಡೊಂಬರಾಟ ಅಲ್ಲ, ಇದು ಯಕ್ಷಗಾನವೋ ಕಂಬಳದ ಕೋಳಿಕಟ್ಟವೋ? ಶಿಳ್ಳೆ ಹೊಡೆದವ ಯಾರು? ನಾವು ಕೆಲಸ ಇಲ್ಲದಕ್ಕೆ ವೇಷ ಹಾಕಿ ಕುಣಿಯುವುದಲ್ಲ, ನಿಮಗೆ ಧಾರ್ಮಿಕ ಭಾಷಣ ಬೇಕಾ… ಯಕ್ಷಗಾನ ಬೇಕಾ ಅರ್ಥ ಮಾಡಿ! ದುಡ್ಡು ಕೊಡುವವರು ಯಾರು? ಯಾರದು ಶಿಳ್ಳೆ ಹೊಡೆದವ? ಆಗದಿದ್ರೆ ಹೋಗು ಬನ್ಸ್ ತಿಂದು…” ಎಂಬಿತ್ಯಾದಿಯಾಗಿ ನಿಯಂತ್ರಣ ತಪ್ಪಿದ ನಾಲಿಗೆ ಚಾಚಿ ತರಾಟೆಗೆ ತೆಗೆದುಕೊಂಡು ಪ್ರೇಕ್ಷಕರಿಗೆ ರಸಭಂಗವುಂಟು ಮಾಡಿದ ಘಟನೆ ನಡೆದಿದೆ.
ಒಂದು ವೇಳೆ ಅರ್ಥಧಾರಿಯಾಗಿ ತಮ್ಮ ಪಾತ್ರ ನಿರ್ವಹಿಸುವ ವೇಳೆ ಪ್ರೇಕ್ಷಕರಿಂದ ಏನಾದರು ಕಿರಿಕಿರಿ ಉಂಟಾಗಿದ್ದರೆ ಭಾಗವತರ ಅನುಮತಿ ಪಡೆದು ಸಂಜ್ಞೆ ಮೂಲಕ ತಿಳಿಸಿ ವಾಪಾಸು ಚೌಕಿಗೆ ಹೋಗಿ ಮುಖ್ಯ ಪರದೆ ಹಾಕಿಸಿ ಸಂಘಟಕರ ಮೂಲಕ ಧ್ವನಿವರ್ಧಕದಲ್ಲಿ ಪ್ರೇಕ್ಷಕ ವರ್ಗಕ್ಕೆ ಸೂಚನೆ ಕೊಡುವ ಅವಕಾಶವಿತ್ತು. ಹಿರಿಯ ಕಲಾವಿದ ಅಶೋಕ್ ಭಟ್ ಉಜಿರೆ ಶಿಳ್ಳೆ ಹೊಡೆದರೆಂಬ ಕಾರಣಕ್ಕಾಗಿ ರಂಗಸ್ಥಳ ಸಂಪ್ರದಾಯ ಮತ್ತು ಪಾತ್ರದ ಗಂಭೀರತೆ ಮರೆತು ನೇರವಾಗಿ ತರಾಟೆಗೆ ತೆಗೆದುಕೊಂಡು ಕಲಾರಸಿಕರಲ್ಲಿ ಮುಜುಗರವನ್ನು ಉಂಟು ಮಾಡುವ ಬದಲು ಅರ್ಥಧಾರಿಯಾಗಿಯೇ ಇಂಥ ಸಂದರ್ಭವನ್ನು ನಿಭಾಯಿಸಿ ಜಾಣ್ಮೆ ಮೆರೆಯಬಹುದಿತ್ತು ಎಂಬ ಅಭಿಪ್ರಾಯಗಳು ಯಕ್ಷ ಪ್ರೇಮಿಗಳಿಂದ ಕೇಳಿ ಬರುತ್ತಿದೆ.
ರಂಗಸ್ಥಳದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲನೇನಲ್ಲ;
ಯಕ್ಷಗಾನ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡ ಪ್ರಸಿದ್ಧ ಕಲಾವಿದರೂ ಕೆಲವು ಸಂದರ್ಭಗಳಲ್ಲಿ ಅಶೋಕ್ ಭಟ್ಟರಂತೆ ಇದೇ ರೀತಿ ಪ್ರೇಕ್ಷಕರನ್ನು ನಿಂದಿಸಿದ, ಅವಮಾನಿಸಿದ ಮತ್ತು ತರಾಟೆಗೆ ತೆಗೆದುಕೊಂಡ ಉದಾಹರಣೆಗಳೂ ಇವೆ ಎಂಬ ಸಮರ್ಥನೆಯ ಮಾತುಗಳು ಒಂದೆಡೆಯಾದರೆ ಪ್ರೇಕ್ಷಕರು ಶಿಸ್ತು ತಪ್ಪಿದಲ್ಲಿ ಅವರನ್ನು ತಿದ್ದಲು ವೇಷಧಾರಿಯಾಗಿ ರಂಗಸ್ಥಳದಿಂದಲೇ ಏಕಾಏಕಿ ಪಾತ್ರ ಪ್ರಜ್ಞೆ ಮರೆತು ಗದರಿಸುವುದು ಯಕ್ಷಗಾನ ಸಂಪ್ರದಾಯಕ್ಕೆ ರಂಗಸ್ಥಳ ಶಿಸ್ತಿಗೆ ಶೋಭೆ ತರುವುದೇ? ಎಂಬ ಪ್ರಶ್ನೆಗಳೂ ವ್ಯಾಪಕವಾಗಿ ಪ್ರೇಕ್ಷಕ ವರ್ಗದಿಂದ ಕೇಳಿ ಬರುತ್ತಿದೆ.
ಅಂದೊಮ್ಮೆ ಮಹಾ ಸೀರೆತಜ್ಞನಂತೆ ಮಹಿಳೆಯರ ಸೆರಗಿನ ಬಗ್ಗೆ
ಅವಹೇಳನಕಾರಿಯಾಗಿ ನಾಲಿಗೆ ಚಾಚಿ ಟೀಕೆಗೆ ಒಳಗಾಗಿದ್ದ ಅಶೋಕ
ಭಟ್ಟರು ಇದೀಗ ಯಕ್ಷಗಾನದಲ್ಲಿ ಭಾಗವತರ ಹಾಡಿಗೆ ಶಿಳ್ಳೆ ಹೊಡೆದ ಪ್ರೇಕ್ಷಕರ ವಿರುದ್ಧ ಗದರಿಸಿರುವ ಪ್ರಸಂಗ ಇದೀಗ ಚರ್ಚೆಗೆ ಗ್ರಾಸವಾಗಿದೆ.













Post Comment