ಲಾಯಿಲಾ ಗ್ರಾಮಸಭೆಯಲ್ಲಿ ಅಕ್ರಮಗಳದ್ದೇ ಚಕಮಕಿ!
ನಿವೇಶನ, ಕಳಪೆ ಕಾಮಗಾರಿ ಗೊಂದಲ: ಸಮಗ್ರ ತನಿಖೆಗೆ ಒತ್ತಾಯ

ಬೆಳ್ತಂಗಡಿ : ಪಡ್ಲಾಡಿ–ನಿನ್ನಿಕಲ್ಲು ಪ್ರದೇಶದ ನೇತಾಜಿ ಬಡಾವಣೆಯ ನಿವೇಶನ ಹಂಚಿಕೆ, ಖಾಲಿ ನಿವೇಶನಗಳಿಗೆ ಬ್ಯಾಂಕ್ ಸಾಲ ನೀಡಿರುವುದು, ನಿವೇಶನಗಳ ಅನಧಿಕೃತ ಮಾರಾಟ ಹಾಗೂ ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವ ಆರೋಪ, ಸರ್ಕಾರಿ ಜಮೀನು ಅತಿಕ್ರಮಣ, ಪುತ್ರಬೈಲು ಗ್ರಂಥಾಲಯ ಮತ್ತು ಎನ್‌ಆರ್‌ಎಲ್‌ಎಂ ಕಟ್ಟಡಗಳ ಕಳಪೆ ಕಾಮಗಾರಿ, ಅನಧಿಕೃತ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಗಂಭೀರ ವಿಚಾರಗಳು ಲಾಯಿಲ ಗ್ರಾಮಸಭೆಯಲ್ಲಿ ಈ ಭಾರಿಯ ತೀವ್ರ ಚರ್ಚೆಗೂ ಪರಸ್ಪರ ಆರೋಪ- ಪ್ರತ್ಯಾರೋಪಗಳಿಗೂ ಕಾರಣವಾಯಿತು.
ಲಾಯಲಾ ಗ್ರಾ.ಪಂ. ಗ್ರಾಮಸಭೆಯಲ್ಲಿ ಗ್ರಾ.ಪಂ. ಆಡಳಿತದ ವಿರುದ್ಧದ ವಿವಿಧ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತನಿಖೆ ಹಾಗೂ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಆಗಸ್ಟ್ 29ರಂದು ಲಾಯಿಲ ಗ್ರಾ.ಪಂ ಸಭಾಂಗಣದಲ್ಲಿ ಪಂಚಾಯತ್ ಆಡಳಿತಾಧಿಕಾರಿ ರಾಜೇಂದ್ರ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ನಡೆಯಿತು.
ಅತಿಕ್ರಮಿತ ನಿವೇಶನ ವಾಪಸ್ ಪಡೆದು ನಿವೇಶನರಹಿತರಿಗೆ ಹಂಚಿಕೆಗೆ ಆಗ್ರಹ:
2012ರಲ್ಲಿ ನೇತಾಜಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾದ ನಿವೇಶನಗಳಲ್ಲಿ ಇದುವರೆಗೆ ಮನೆ ನಿರ್ಮಾಣ ಮಾಡದಿರುವ ಖಾಲಿ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆದು ಅರ್ಹ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಮಾಜಿ ಗ್ರಾ.ಪಂ. ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಆಗ್ರಹಿಸಿದ್ದು ಇದಕ್ಕೆ ಮಾಜಿ ತಾ.ಪಂ. ಸದಸ್ಯ ಸುಧಾಕರ ಬಿ.ಎಲ್., ಮಾಜಿ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಗಣೇಶ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಸಭೆಯಲ್ಲಿದ್ದ ನಿವೇಶನ ರಹಿತರು, ಕಳೆದ 10ರಿಂದ 15 ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೂ ತಮಗೆ ನಿವೇಶನ ದೊರೆತಿಲ್ಲ. ಬಡಾವಣೆಯಲ್ಲಿರುವ ಖಾಲಿ ನಿವೇಶನಗಳನ್ನು ಅರ್ಹ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
02.45 ಸೆಂಟ್ಸ್ ಜಾಗಕ್ಕೆ ಲಕ್ಷಾಂತರ ಸಾಲ ಹೇಗೆ?:
ಗ್ರಾಮಸಭೆಯಲ್ಲಿ ಗ್ರಾಮಸ್ಥ ಶೇಖರ್ ಎಲ್. ಮಾತನಾಡಿ, ಇಲ್ಲಿನ 02.45 ಸೆಂಟ್ಸ್ ಜಮೀನಿನ ಹೆಸರಿನಲ್ಲಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಲಕ್ಷಾಂತರ ರೂಪಾಯಿ ಸಾಲ ನೀಡಿವೆ ಎಂಬ ಆರೋಪಿಸಿದರು.
ಬಡ ರೈತರು ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಸಾಲ ನೀಡಲು ಹಿಂದೇಟು ಹಾಕುವ ಬ್ಯಾಂಕುಗಳು,
ಈ ನಿವೇಶನಗಳ ಆಧಾರದಲ್ಲಿ ಮಾತ್ರ ಲಕ್ಷಾಂತರ ರೂಪಾಯಿ ಸಾಲ ನೀಡಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಿವೇಶನಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗಿದೆ ಹಾಗೂ ಕೆಲವರು ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ ಎಂಬ ಆರೋಪಗಳಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಸುಧಾಕರ ಎಲ್. ಮಾತನಾಡಿ, ಕೆಲವರು ಈಗಾಗಲೇ ಸ್ವಂತ ಜಮೀನು ಹೊಂದಿದ್ದರೂ 94ಸಿ ಸೇರಿದಂತೆ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿಕೊಂಡು ಮನೆ ಹಾಗೂ ತೋಟ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಲೈಬ್ರೆರಿ ಕಳಪೆ ಕಾಮಗಾರಿ ಮರೆಮಾಚಲು ಶೀಟ್..?!
ತಾ.ಪಂ. ಅನುದಾನದಲ್ಲಿ ನಿರ್ಮಾಣಗೊಂಡ ಪುತ್ರಬೈಲು ಗ್ರಂಥಾಲಯ ಕಟ್ಟಡದ ಮೇಲ್ಭಾಗಕ್ಕೆ ಶೀಟ್ ಅಳವಡಿಸಿರುವ ವಿಚಾರವೂ ಚರ್ಚೆಗೆ ಬಂತು. ಕಟ್ಟಡಕ್ಕೆ ಶೀಟ್ ಅಳವಡಿಸಿರುವುದಕ್ಕೆ ಕಾರಣವೇನು ಎಂದು ಶ್ರೀನಿವಾಸ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಓ ತಾರಾನಾಥ ನಾಯ್ಕ್, ಕಟ್ಟಡದಲ್ಲಿ ಸೋರಿಕೆ ಉಂಟಾಗಿದ್ದರಿಂದ ಸೋರಿಕೆ ತಡೆಗಟ್ಟಲು ಶೀಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಮಧ್ಯೆ ಪ್ರವೇಶಿಸಿದ ಶೇಖರ್ ಕಟ್ಟಡವನ್ನು ಗ್ರಾ.ಪಂ. ಹಸ್ತಾಂತರಿಸುವ ಸಂದರ್ಭದಲ್ಲೇ ಸೋರಿಕೆಯಾಗಿತ್ತು. ಕಟ್ಟಡದ ಕಳಪೆ ಕಾಮಗಾರಿಯನ್ನು ಮರೆಮಾಚಲು ಶೀಟ್ ಅಳವಡಿಸಲಾಗಿದೆ ಎಂದು ಆರೋಪಿಸಿದರು. ಕಟ್ಟಡ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನೋಡೆಲ್ ಅಧಿಕಾರಿ ಹಾಗೂ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜನಾರ್ದನ ಮಾತನಾಡಿ, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮಾತನಾಡಿ, ಎನ್‌ಆರ್‌ಎಲ್‌ಎಂ ಕಟ್ಟಡದ ಕಾಮಗಾರಿಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ಕಟ್ಟಡಗಳ ವಿರುದ್ಧ ದೂರು ಕೊಟ್ಟ ಬೆನ್ನಲ್ಲೇ ದೂರಿನ ಪ್ರತಿಗಳನ್ನು ಕಟ್ಟಡ ಮಾಲಕರಿಗೆ ರವಾನಿಸುವ ಭ್ರಷ್ಟ ಸಿಬ್ಬಂದಿಗಳ ಹಾವಳಿ…!!
ಲಾಯಿಲ ಅಭ್ಯಾಸ್ ಪಿಯು ಕಾಲೇಜಿನ ಅನಧಿಕೃತ ಕಟ್ಟಡಗಳ ಕುರಿತು ಗ್ರಾಮ ಪಂಚಾಯತ್‌ಗೆ ನೀಡಲಾದ ದೂರಿನ ಪ್ರತಿಯನ್ನು ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನಿಸಲಾಗುತ್ತಿದ್ದು, ಬಳಿಕ ಅವರಿಂದ ದೂರವಾಣಿ ಕರೆಗಳು ಬರುತ್ತಿವೆ ,
ಈ ಪ್ರಕರಣದ ಹಿಂದೆ ಹಿಂದಿನ ಪಿಡಿಓ ಶ್ರೀನಿವಾಸ್ ಅವರ ಕೈವಾಡವಿದೆ ಎಂದು ಪ್ರತೀಕ್ ಕೋಟ್ಯಾನ್ ಆರೋಪಿಸಿದರು.
ಶೇಖರ್ ಲಾಯಿಲ ಮಾತನಾಡಿ, ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ನೀಡುವ ದೂರುಗಳ ಪ್ರತಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನೆಯಾಗುತ್ತಿವೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮ ಪಂಚಾಯತ್‌ಗೆ ಸಾರ್ವಜನಿಕರು ಸಲ್ಲಿಸುವ ದೂರುಗಳ ಪ್ರತಿಗಳನ್ನು ಸಿಬ್ಬಂದಿ ಇತರರಿಗೆ ರವಾನಿಸುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರಕಾರಿ ಜಮೀನಿನಲ್ಲಿ ಪಂಚಾಯತ್ ಸಿಬ್ಬಂದಿಯಿಂದಲೇ ಅಕ್ರಮ ಮನೆ ನಿರ್ಮಾಣ..!
ನೇತಾಜಿ ಬಡಾವಣೆಯ ಸಮೀಪ ಸರ್ಕಾರಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸುರೇಶ್ ಬೈರ ಮಾತನಾಡಿ, ಪಂಚಾಯತ್ ಸಿಬ್ಬಂದಿ ಸೂರಪ್ಪ ಅವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸುತ್ತಿದ್ದು, ಅವರಿಗೆ ಪಂಚಾಯತ್ ಅನುಮತಿ ನೀಡಬೇಕು ಎಂದು ಹೇಳಿದರು. ಇದಕ್ಕೆ ಪಿಡಿಓ ತಾರಾನಾಥ ನಾಯ್ಕ್ ಪ್ರತಿಕ್ರಿಯಿಸಿ, ಸರ್ಕಾರಿ ಜಮೀನಿನಲ್ಲಿ ನಿರ್ಮಿಸುವ ಯಾವುದೇ ಕಟ್ಟಡಕ್ಕೆ ಪಂಚಾಯತ್ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮಾಡಳಿತಾಧಿಕಾರಿ ರನಿತಾ ಮಾತನಾಡಿ, ಪಂಚಾಯತ್ ಸಿಬ್ಬಂದಿ ಸೂರಪ್ಪ ಅವರು ಸರ್ಕಾರಿ ಜಮೀನಿನಲ್ಲಿ ಹಿಂದೆ ಕಟ್ಟಡ ನಿರ್ಮಿಸಿರುವ ಬಗ್ಗೆ ಮಾಹಿತಿ ಇದೆ. ಇದೀಗ ಅದನ್ನು ರಾಜು ಮೇಸ್ತ್ರಿ ಎಂಬವರು ತಮ್ಮ ಮಗಳಿಗಾಗಿ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು.
ಈ ವೇಳೆ ರಾಜು ಮೇಸ್ತ್ರಿ ಅವರ ಪುತ್ರ ಹಾಗೂ ಮಾಜಿ ಉಪಾಧ್ಯಕ್ಷ ಗಣೇಶ್ ಮಾತನಾಡಿ, ಸೂರಪ್ಪ ಅವರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಕಾಮಗಾರಿಯನ್ನು ತಮ್ಮ ಕುಟುಂಬದವರು ಮಾಡುತ್ತಿದ್ದಾರೆ. ಮನೆ ತಮ್ಮ ಕುಟುಂಬಕ್ಕೆ ಅಲ್ಲ ಎಂದು ಹೇಳಿದರು.
ಇದಕ್ಕೆ ಪ್ರಸಾದ್ ಶೆಟ್ಟಿ ಹಾಗೂ ಪ್ರತೀಕ್ ಕೋಟ್ಯಾನ್ ಆಕ್ಷೇಪ ವ್ಯಕ್ತಪಡಿಸಿ, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದೆವು. ಆಗ ಸೂರಪ್ಪ ಅವರು ತಾವು ಮನೆ ನಿರ್ಮಿಸುತ್ತಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದರು.
ಅಲ್ಲದೆ, ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಮನೆ ತನಗಾಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿರುವ ವಿಡಿಯೋ ತಮ್ಮ
ಬಳಿ ಇದೆ ಎಂದು ಹೇಳಿದರು. ಸಾರ್ವಜನಿಕರ ಒತ್ತಾಯದ ಬಳಿಕ ಮಾತನಾಡಿದ ಸೂರಪ್ಪ, “ನಾನು ನೇತಾಜಿ ಬಡಾವಣೆಯ ಸಮೀಪ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸುತ್ತಿದ್ದೇನೆ. ನನಗೆ ಕಂದಾಯ ಇಲಾಖೆ ಹಾಗೂ ಪಂಚಾಯತ್ ಆಡಳಿತ ವಿನಾಕಾರಣ ತೊಂದರೆ ನೀಡುತ್ತಿದೆ” ಎಂದು ಸಭೆಯಲ್ಲಿ ಹೇಳಿದರು.
ಇದರಿಂದ ಸಭೆಯಲ್ಲಿ ಕೆಲಕಾಲ ಆರೋಪ– ಪ್ರತ್ಯಾರೋಪಗಳು ನಡೆದವು. ಬಳಿಕ ಆಡಳಿತಾಧಿಕಾರಿ ರಾಜೇಂದ್ರ ಕೃಷ್ಣ ಅವರು, ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣದ ಪ್ರಕರಣ ತಹಶೀಲ್ದಾರ್ ಅವರ ಗಮನಕ್ಕೆ ಬಂದಿರುವುದರಿಂದ ಮುಂದಿನ ಕ್ರಮವನ್ನು ತಹಶೀಲ್ದಾರ್ ಅವರೇ ಕೈಗೊಳ್ಳಲಿದ್ದಾರೆ ಎಂದು ತಿಳಿಸಿ ಚರ್ಚೆಗೆ ತೆರೆ ಎಳೆದರು.
ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯೊಬ್ಬರು ಮಾತನಾಡಿ, ಸಾರ್ವಜನಿಕ ದೂರಿನ ಆಧಾರದ ಮೇಲೆ ತನಿಖೆಗೆ ತೆರಳಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ
ಡಾ. ರೇಷ್ಮಾ ಅವರು ಅನುಮತಿ ಇಲ್ಲದೆ ಆಸ್ಪತ್ರೆಯ ಕಾಂಪೌಂಡ್ ಒಳಗೆ ಹೇಗೆ ಬಂದಿರಿ ಎಂದು ಪ್ರಶ್ನಿಸಿ ಹೊರಗೆ ಹೋಗುವಂತೆ ಹೇಳಿದ್ದರು ಎಂದು ಸಭೆಯಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಸ್ಥಳೀಯ ಕಕ್ಕೆನಾ ನಿವಾಸಿ ಮಮತಾ ಮಾತನಾಡಿ, ಸರ್ಕಾರಿ ನಿವೇಶನದ ಕೆಳಭಾಗದಲ್ಲಿ ಜೆಸಿಬಿ ಮೂಲಕ ಕೆಲಸ ನಡೆಸಲಾಗುತ್ತಿದ್ದು ಇದರಿಂದ ತಮ್ಮ ಮನೆ ಬೀಳುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದರು.
ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಮಣ್ಣು ತೆಗೆದಿರುವುದರಿಂದ, ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೂ ಪರಿಹಾರ ಈವರೆಗೂ ದೊರೆತಿಲ್ಲ ಎಂದು ಪ್ರತೀಕ್ ಕೋಟ್ಯಾನ್ ಆರೋಪಿಸಿದರು.

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಆಗ್ರಹ:
ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಕಾನೂನುಬಾಹಿರವಾಗಿ ಅನುಮತಿ ನೀಡುತ್ತಿರುವ ಕುರಿತು ಗ್ರಾಮಸ್ಥರಾದ ಸುರೇಶ್ ಬೈರ, ಪ್ರತೀಕ್ ಕೋಟ್ಯಾನ್ ಹಾಗೂ ಅನ್ಸಾರ್ ಪ್ರಶ್ನಿಸಿದರು. ಪಂಚಾಯತ್ ಮುಂದೆಯೆ ಮೊಹಮದ್ ಸಾದಿಕ್ ಎಂಬವರು ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಎರಡು ಬಾರಿ ನೋಟಿಸ್ ನೀಡಿದ ಬಳಿಕವೂ ಕಾಮಗಾರಿ ಮುಂದುವರಿಯುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ನೋಡೆಲ್ ಅಧಿಕಾರಿ ಪಿಡಿಓ ಅವರಿಗೆ ಸೂಚಿಸಿದರು.
ಆದರ್ಶನಗರದ ರಸ್ತೆ ಹಾಗೂ ಮರ ತೆರವು ವಿಚಾರವೂ ಗ್ರಾಮಸಭೆಯಲ್ಲಿ ಚರ್ಚೆಗೆ ಬಂತು. ಈ ವೇಳೆ ವೈಯಕ್ತಿಕ ಆರೋಪ– ಪ್ರತ್ಯಾರೋಪಗಳು ನಡೆದವು. ಮಧ್ಯಪ್ರವೇಶಿಸಿದ ಆಡಳಿತಾಧಿಕಾರಿ, ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಪ್ರಕರಣ ಇತ್ಯರ್ಥವಾದ ಬಳಿಕ ಗ್ರಾ.ಪಂ. ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಯನ್ನು ಬಗೆಹರಿಸುವ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.
ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ: ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ಗಮನ ಸೆಳೆದರು. ಮಾಜಿ ಸದಸ್ಯ ಮಹೇಶ್ ಮಾತನಾಡಿ, ಮಂಗಳೂರಿನ ಎನ್‌ಜಿಒಗಳ ಸಹಕಾರದೊಂದಿಗೆ ಬೀದಿನಾಯಿಗಳ ಸ್ಥಳಾಂತರ ಸೇರಿದಂತೆ ಸಮಸ್ಯೆ ನಿಯಂತ್ರಿಸುವ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಬೀದಿನಾಯಿಗಳ ಸಂತಾನಶಸ್ತ್ರ ಚಿಕಿತ್ಸೆ ನಡೆಸುವಂತೆ ಪಶುಸಂಗೋಪನಾ ಇಲಾಖೆಗೆ ತಿಳಿಸಲಾಗುವುದು ಎಂದು ಹೇಳಿದರು.
ಆರು ಗಂಟೆ ಸಮಯ ನಡೆದ ಗ್ರಾಮಸಭೆ: ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ನಿವೇಶನ, ಸರ್ಕಾರಿ ಜಮೀನು, ಕಟ್ಟಡ ಕಾಮಗಾರಿ, ಅನಧಿಕೃತ ಕಟ್ಟಡಗಳು, ರಸ್ತೆ, ಗಣಿಗಾರಿಕೆ, ಸಾರ್ವಜನಿಕ ಸುರಕ್ಷತೆ ಹಾಗೂ ಬೀದಿನಾಯಿಗಳ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಗ್ರಾಮಸ್ಥರು ಚರ್ಚೆಯಲ್ಲಿ ಭಾಗಿಯಾದರು.














Post Comment