ಅಲೆರಿ ಮೂಲ ಕ್ಷೇತ್ರಕ್ಕೆ ಅನುದಾನ ನೀಡದೆ ಆದಿದ್ರಾವಿಡ ಸಮುದಾಯಕ್ಕೆ ಕೈಕೊಟ್ಟ ಕಾಂಗ್ರೆಸ್ ಸರಕಾರ : ಲಕ್ಷ್ಮಣ್ ಜಿ.ಎಸ್. ಆರೋಪ

ಬೆಳ್ತಂಗಡಿ : ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ. ಖಾದರ್ ಅವರು ದಲಿತರನ್ನು ಮತ್ತು ಹಿಂದೂಗಳನ್ನು ಬೆನ್ನು ತಟ್ಟಿ ತಟ್ಟಿ ಸ್ಲೋ ಪಾಯ್ಸನ್ ನಂತೆ ಸಾಯಿಸುವ ಜಾಯಮಾನದವರು,
ಕರಡಿ ಮನುಷ್ಯರನ್ನು ನೆಕ್ಕಿ ನೆಕ್ಕಿ ಸಾಯಿಸುವಂತೆ ಖಾದರ್ ದಲಿತರನ್ನು ಹಿಂದೂಗಳನ್ನು ಬೆನ್ನು ತಟ್ಟಿ ತಟ್ಟಿ ಕೊಲ್ಲುವ ಕರಡಿಯಂತೆ ಎಂದು ಆದಿದ್ರಾವಿಡ ಸಮುದಾಯದ ಮುಖಂಡ ಲಕ್ಷ್ಮಣ್ ಜಿ.ಎಸ್. ಟೀಕಿಸಿದ್ದಾರೆ.
ಅವರು ಸೋಮವಾರ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಸೆಪ್ಟೆಂಬರ್ 18ರಂದು ನಡೆದ ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಆದಿದ್ರಾವಿಡ ಸಮುದಾಯದ ಕುಲದೈವಗಳ ಅಲೆರಿ ಮೂಲ ಕ್ಷೇತ್ರದ ಅಭಿವೃದ್ಧಿಗಾಗಿ ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಅನುದಾನ ಘೋಷಿಸದೆ
ಪರಿಶಿಷ್ಟ ಜಾತಿಯ ದೊಡ್ಡ ಜನಸಂಖ್ಯೆಯ ಸಮುದಾಯವನ್ನು ನಿರ್ಲಕ್ಷಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡೆಯನ್ನು ಖಂಡಿಸಿ ಹಾಗೂ ದ.ಕ. ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸಮುದಾಯದ
ಅಲೆರಿ ಮೂಲ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಇತ್ತು,
ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಆದಿ ದ್ರಾವಿಡ ಸಮುದಾಯಕ್ಕೆ ನಿರಾಶೆ ಮೂಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮುಖ್ಯ ಅಜೆಂಡವಾಗಿ ಸೇರಿಸಿಕೊಂಡು ಅಲೆರಿ ಮೂಲ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುವುದಾಗಿ ಭರವಸೆ ಕೊಟ್ಟು
ಮನೆ ಮನೆ ತೆರಳಿ ಸುಳ್ಳು ಆಶ್ವಾಸನೆ ನೀಡಿ ಆದಿದ್ರಾವಿಡ ಸಮಯದಾಯದ ಓಟು ಪಡೆದು ಅಧಿಕಾರಕ್ಕೆ ಬಂದಿರುವ
ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಾದರೂ ಅನುದಾನ ನೀಡದೆ ನಮ್ಮ ಕಾನದ ಕಟದರ ಅಲೆರಿ ಮೂಲ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿರುವುದು ಖಂಡನೀಯ. ಈ ರೀತಿ ಸುಳ್ಳು ಹೇಳಿ ಆಡಳಿತ ನಡೆಸುವ ಬದಲು ಬೀದಿಯಲ್ಲಿ ಭಿಕ್ಷೆ ಬೇಡುವುದು ಸೂಕ್ತವಾಗಿತ್ತು ಎಂದು ಸರ್ಕಾರದ ವಿರುದ್ಧ ಲಕ್ಷ್ಮಣ್ ಜಿ.ಎಸ್.
ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ದಲಿತ ನಾಯಕರಿಗೆ ಆತ್ಮಸಾಕ್ಷಿ, ನೈತಿಕತೆ ಇದ್ರೆ ಕೂಡಲೇ ರಾಜಿನಾಮೆ ಕೊಟ್ಟು ಬಂದು ಬಿಜೆಪಿ ಸೇರಿಕೊಳ್ಳಲು ಇದೇ ಸೂಕ್ತ ಸಮಯ ಎಂದ ಹಾಕಿದ ಲಕ್ಷ್ಮಣ್ ಜಿ.ಎಸ್. ದಲಿತರಿಗೆ ಸೂಕ್ತ ಸ್ಥಾನಮಾನ ಗೌರವ ನೀಡುವ ಪಕ್ಷ ಇದ್ರೆ ಬಿಜೆಪಿ ಮಾತ್ರ ಎಂದರು. ಉಸ್ತುವಾರಿ ಸಚಿವ ಖಾದರ್ ಅವರ ಕಾರ್ಯವೈಖರಿಯನ್ನು ಟೀಕಿಸಿದ ಲಕ್ಷ್ಮಣ್, ಮನುಷ್ಯರನ್ನು ಕರಡಿಯು ನೆಕ್ಕಿ ನೆಕ್ಕಿ ಸಾಯಿಸುವಂತೆ ಯು.ಟಿ. ಖಾದರ್ ದಲಿತರನ್ನು ಹಿಂದೂಗಳನ್ನು ಬೆನ್ನು ತಟ್ಟಿ ತಟ್ಟಿ ಸ್ಲೋಪಾಯ್ಸನ್ ರೀತಿಯಲ್ಲಿ ಕೊಲ್ಲುವ ಜಾಯಮಾನದವರು ಎಂದು ಆರೋಪಿಸಿದರು.
ಮೂರು ವರ್ಷಗಳಿಂದ ಅಲೆರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಗಾಗಿ ಸರಕಾರಕ್ಕೆ ಮನವಿ ಕೊಟ್ಟು ಸಾಕಾಗಿದೆ, ಖಾದರ್ ಅವರೇ ಆದಿದ್ರಾವಿಡ ಸಮುದಾಯ
ಅನುದಾನ ಕೊಟ್ಟರೂ ಕೊಡದಿದ್ದರೂ ಕಾಂಗ್ರೆಸ್ ಗೆ ಓಟು ಹಾಕುತ್ತಾರೆ ಎಂಬ ನಿರ್ಲಕ್ಷ್ಯ ಧೋರಣೆ ನಿಮಗಿದೆ, ಖಾದರ್ ಅವರೇ ಅಧಿಕಾರದಲ್ಲಿ ಶಾಶ್ವತವಾಗಿ ವಿಜೃಂಭಿಸುತ್ತಾ ಇರುತ್ತೇನೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಅದನ್ನು ಬಿಟ್ಟು ಬಿಡಿ, ಕಾದು ನೋಡಿ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.

ಅಲೇರಿ ಕ್ಷೇತ್ರಕ್ಕೆ ಅನುದಾನ ಕೊಡದೆ ಜಿಲ್ಲೆಗೆ ಹೇಗೆ ಕಾಲಿಡುತ್ತೀರಿ ನಾವೂ ನೋಡಿಯೇ ನೋಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಆದಿದ್ರಾವಿಡ ಸಮುದಾಯದ ಮುಖಂಡರಾದ ರಾಘವ ಕಲ್ಮಂಜ, ಕೆ.ಗೋಪಾಲಕೃಷ್ಣ ಕುಕ್ಕಳ, ರಾಮು ಗರ್ಡಾಡಿ, ವಿಶ್ವನಾಥ ಕಳೆಂಜ, ಸಂತೋಷ್ ಮಲೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.















Post Comment