“ಅಂಬೇಡ್ಕರ್ ಭವನದ ಆನುದಾನವನ್ನು ಕಾಂಗ್ರೆಸ್ ತಡೆದಿರುವ ಬಗ್ಗೆ ಆರೋಪ ಸಾಬೀತುಪಡಿಸಿದಲ್ಲಿ ಕಾಂಗ್ರೆಸ್ ಬಿಟ್ಟು ನಿಮ್ಮ ಜೊತೆ ಬರುತ್ತೇನೆ.”
ಶಾಸಕ ಹರೀಶ್ ಪೂಂಜರಿಗೆ ಶೇಖರ್ ಕುಕ್ಕೇಡಿ ಸವಾಲು
ಬೆಳ್ತಂಗಡಿ : ತಾಲೂಕು ಕೇಂದ್ರದ ಪ್ರಸ್ತಾವಿತ ಅಂಬೇಡ್ಕರ್ ಭವನಕ್ಕಾಗಲಿ, ತಾಲೂಕು ಕ್ರೀಡಾಂಗಣಕ್ಕಾಗಲಿ ಅಥವಾ ಆರಸಿನಮಕ್ಕಿ ಶಾಲಾ ಕಟ್ಟಡಕ್ಕಾಗಲಿ ಇದುವರೆಗೆ ಹಿಂದಿನ ಸರಕಾರ ಯಾವುದೇ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ, ಹಣವೇ ಬಿಡುಗಡೆಯಾಗದಿರುವ ಕಾಮಗಾರಿಯ ಅನುದಾನವನ್ನು ಕಾಂಗ್ರೆಸ್ ಮುಖಂಡರು ತಡೆ ಹಿಡಿದಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಜನರನ್ನು ರಂಜಿಸಲು ಸುಳ್ಳು ಆರೋಪಗನ್ನು ಮಾಡುತ್ತಿದ್ದಾರೆ. ನಮ್ಮ ರಾಜ್ಯ ನಾಯಕರಾದ ರಕ್ಷಿತ್ ಶಿವರಾಮ್ ಆಗಲಿ, ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಆಗಲಿ, ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಾಗಲಿ ಅಥವಾ ಮಾಜಿ ಸಚಿವ ಕೆ.ಗಂಗಾಧರ ಗೌಡರಾಗಲಿ ಅನುದಾನವನ್ನು ತಡೆದಿರುವ ಬಗ್ಗೆ ಅಥವಾ ಸರಕಾರದಿಂದ ಹಣ ಬಿಡುಗಡೆಯಾಗಿರುವ ಬಗ್ಗೆ ಯಾವುದೇ ದಾಖಲೆ ಇದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಾಜಿ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಶಾಸಕ ಹರೀಶ್ ಪೂಂಜ ಅವರಿಗೆ ಸವಾಲೆಸೆದಿದ್ದಾರೆ.
ಅವರು ಏ:11ರ ಗುರುವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾದ ಪತ್ರಿಕಾ ಗೋಷ್ಟಿಯಲಿ ಮಾತನಾಡುತ್ತಾ ಒಂದು ವೇಳೆ ನಮ್ಮ ಸರಕಾರ ಅನುದಾನ ತಡೆ ಹಿಡಿದಿದ್ದೆ ಆದಲ್ಲಿ ನೀವು ಆ ಬಗ್ಗೆ ಅಧಿವೇಶನದಲ್ಲಿ ಯಾಕೆ ಮಾತನಾಡಲಿಲ್ಲ? ಒಂದು ವೇಳೆ ನಮ್ಮ ಪಕ್ಷ ತಡೆ ಹಿಡಿದಿದ್ದಲ್ಲಿ ನೀವು ಅಂಬೇಡ್ಕರ್ ಭವನದ ಅನುದಾನ ತಡೆದಿರುವುದು ಸಾಬೀತು ಮಾಡಿದ್ರೆ ನಾನು ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ನೀಡಿ ನಿಮ್ಮ ಜೊತೆ ಬರುತ್ತೇನೆ ಎಂದು ಸವಾಲು ಹಾಕಿದರು.
ಕಾಂಗ್ರೇಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳಿಂದ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸೇರಿದ ಜನರನ್ನು ಕಂಡು ಸಭೆಗೆ ಉದ್ದೇಶ ಪೂರ್ವಕವಾಗಿ ಗೈರು ಹಾಜರಾದ ಶಾಸಕ ಹರೀಶ್ ಪೂಂಜ ಅವರು ಭ್ರಮನಿರಸನದಿಂದ ತಾವು ಅನುದಾನ ಮಂಜೂರುಗೊಳಿಸದೆ, ಶಿಲಾನ್ಯಾಸ ಮಾಡಿ ಕೆಲಸ ಮಾಡದೆ ಇದ್ದ ಕಾರಣಕ್ಕೆ ಜನ ಅಲ್ಲಲ್ಲಿ ಪ್ರಶ್ನಿಸುತ್ತಿದ್ದಾರೆ. ಇದರಿಂದ ವಿಚಲಿತರಾದ ಹರೀಶ್ ಪೂಂಜ ಇತ್ತೀಚೆಗೆ ನಡೆದ ಬಿಜೆಪಿಯ ಸಭೆಯಲ್ಲಿ ಸೇರಿದ ಜನರನ್ನು ರಂಜಿಸುವ ಸಲುವಾಗಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ರಕ್ಷಿತ್ ಶಿವರಾಂ ಮತ್ತು ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದರು. ಶಾಸಕ ಹರೀಶ್ ಪೂಂಜ “ರಕ್ಷಿತ್ ಶಿವರಾಮ್ ಆಮದು ನಾಯಕ ಎಂದು ಹೇಳುತ್ತಾರೆ, ಆದರೆ ಶೋಭಾ ಕರಂದ್ಲಾಜಿ ಈಗ ಬೆಂಗಳೂರಿನಲ್ಲಿ ಚುನಾವಣೆಗೆ ನಿಂತಿದ್ದಾರೆ. ಡಿ..ಸದಾನಂದ ಗೌಡರು ದ.ಕ. ಜಿಲ್ಲೆಯವರನ್ನು ಮರೆತೇ ಬಿಟ್ಟಿದ್ದಾರೆ. ನೀವು ಕೂಡ ಬೆಂಗಳೂರಿನಿಂದ ಬೆಳ್ತಂಗಡಿಗೆ ಆಮದಾಗಿ ಬಂದು ಬೆಳ್ತಂಗಡಿಯ ಮೂಲ ಬಿ.ಜಿ.ಪಿಗರನ್ನು ಮೂಲೆಗುಂದು ಮಾಡಿ ಟಿಕೆಟ್ ಗಿಟ್ಟಿಸಿ ಶಾಸಕರಾದವರು ಆಮದು ನಾಯಕನೆಂದು ಹೇಳಲು ನಿಮಗೆ ಯಾವ ನೈತಿಕತೆ ಇದೆ ಎಂದು ಶೇಖರ್ ಕುಕ್ಕೇಡಿ ಪ್ರಶ್ನಿಸಿದ್ದಾರೆ.
ತಾಲೂಕಿನಾದ್ಯಂತ ನಿಮ್ಮ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ನೀವು ಏನೇನು ರಾಜಕೀಯ ಮಾಡಿದ್ದೀರಿ, ಏನೇನು ಅವ್ಯವಹಾರ ಮಾಡಿದ್ದೀರಿ. ಯಾರಿಗೆಲ್ಲ ಬೇಮೆಂಟ್ ಬಾಕಿ ಇರಿಸಿದ್ದೀರಿ, ಯಾರನ್ನೆಲ್ಲ ಯಾಮಾರಿಸಿದ್ದೀರಿ ಎಂದು ಮುಂದೆ ದಾಖಲೆ ಸಮೇತ ಸಾಬೀತು ಮಾಡುತ್ತೇವೆ ಎಂದ ಶೇಖರ್ ಕುಕ್ಕೇಡಿ ನಮ್ಮ ನಾಯಕ ವಸಂತ ಬಂಗೇರರು ಪ್ರಮಾಣಕ್ಕೆ ಕರೆದಾಗ ಪಲಾಯನ ಮಾಡಿದೆ ನೀವು ಈಗ ಸಿಕ್ಕ ಸಿಕ್ಕವರನ್ನು ಪ್ರಮಾಣಕ್ಕೆ ಕರೆಯುತ್ತಿದ್ದೀರಿ. ಮೊದಲು ನೀವು ಬಂಗೇರರು ಕರೆದ ಪ್ರಮಾಣದ ಸವಾಲಿಗೆ ಉತ್ತರಿಸಿ. ನೀವು ಕಳೆದ ವರ್ಷ ಯಾವುದೇ ದೇವಸ್ಥಾನಗಳಿಗೆ ರಕ್ಷಿತ್ ಶಿವರಾಮ್ ಅವರನ್ನು ಅತಿಥಿಯನ್ನಾಗಿ ಕರೆಯಬಾರದು ಎಂದವರು ಈಗ ಹೇಗೆ ದೇವಸ್ಥಾನಕ್ಕೆ ಪ್ರಮಾಣಕ್ಕೆ ಕರೆಯುತ್ತೀರಿ? ಎಂದು ಪ್ರಶ್ನಿಸಿದರು.
ನಮ್ಮ ಸರಕಾರ ಬಂದ ನಂತರ ಬೆಳ್ತಂಗಡಿಯ ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಅನುದಾನದ ವಿವರ : ವೇಣೂರು ಮಹಾಮಸ್ತಾಕಾಧಿವೇಕೆ 4 ಕೋಟಿ. ಇದಕ್ಕೆ ಪೂಜ್ಯ ಸ್ವಾಮೀಜಿಯವರೇ ತುಂಬಿದ ಸಭೆಯಲ್ಲಿ ಹೇಳಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ್ದಾರೆ). ಸುಕ್ಕೇರಿ ಬಸದಿಗೆ ರೂಪಾಯಿ ಐವತ್ತು ಲಕ್ಷ., ನಾರಾವಿ ಬಸದಿಗೆ ರೂಪಾಯಿ ಐವತ್ತು ಲಕ್ಷ. ವೇಣೂರು ದೇವಸ್ಥಾನಕ್ಕೆ ರೂಪಾಯಿ ಐವತ್ತು ಲಕ್ಷ. ಪೆರಾಡಿ ಕೋಟಿ ಚೆನ್ನಯ ಗರಡಿಗೆ ರೂಪಾಯಿ ಐದು ಲಕ್ಷ, ಕುರ್ಲೊಟ್ಟು ಸತ್ಯಸಾರಮನಿ ದೈವಸ್ಥಾನಕ್ಕೆ ರೂಪಾಯಿ ಹತ್ತು ಲಕ್ಷ. ಕಳೆಂಜ ಕದ್ರಿ ಮಂಜುನಾಥೇಶ್ವರ ಭಜನಾ ಮಂದಿರಕ್ಕೆ ರೂಪಾಯಿ ಮೂರು ಲಕ್ಷ, ಹೀಗೆ ಪತ್ರಿಕಾ ಗೋಷ್ಠಿಯಲ್ಲಿ ಪಟ್ಟಿ ನೀಡಿದ ಕಾಂಗ್ರೆಸ್ ಮುಖಂಡರು 40% ಕಮಿಷನ್ ಪಡೆದ ಬಗ್ಗೆ ನಿವೃತ ಹೈಕೋರ್ಟ್ ನ್ಯಾಯಾಧೀಶರಾದ ನಾಗ ಮೋಹನದಾಸ್ ರವರ ನೇತೃತ್ವದ ಸಮಿತಿಯಲ್ಲಿ ವಿಚಾರಣೆ ನಡೆಯುತ್ತಿದೆ. ನೀವು ಮಾಡಿದ ಭ್ರಷ್ಟಾಚಾರದ ದಾಖಲೆಗಳನ್ನು ಸಮಿತಿಗೆ ನಾವು ಕೊಡುತ್ತೇವೆ ನೀವೂ ಕಟಕಟೆಯಲ್ಲಿ ನಿಲ್ಲುವ ದಿನ ದೂರವಿಲ್ಲ ಎಂದು ಎಚ್ಚರಿಕೆ ಕೊಟ್ಟರು.
40% ಕಮಿಷನ್ ಗೋಸ್ಕರ ಟೆಂಡರ್ ಆಗುವ ಮೊದಲೇ ಉದ್ಘಾಟನೆಗೊಳಿಸಿದ ಬೆಳ್ತಂಗಡಿಯ ಪ್ರವಾಸಿ ಮಂದಿರವನ್ನು ನಿಮಗೆ ಇದುವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿಲ್ಲ ಯಾಕೆ? ಅಂಬೇಡ್ಕರ್ ಭವನಕ್ಕೆ ಮಂಜೂರಾದ ಹಣವನ್ನು ನಮ್ಮ ಪಕ್ಷ ತಡೆ ಹಿಡಿದಿದೆ ಎಂದು ಆರೋಪಿಸುತ್ತಿದ್ದಿರಿ ಆದರೆ ನಾವು ಚುನಾವಣಾ ಪೂರ್ವದಲ್ಲಿ ಅಂಬೇಡ್ಕರ್ ಭವನ ಮಾಡುತ್ತೇವೆ ಎಂದು ಎಲ್ಲಿಯೂ ಮತಯಾಚನೆ ಮಾಡಿಲ್ಲ. ನೀವು ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮನೆ, ಮನೆಗೆ ಹಂಚಿದ ನಿಮ್ಮ ಪ್ರಣಾಳಿಕೆಯಲ್ಲಿ ಅಂಬೆಡ್ಕರ್ ಭವನ ನಿರ್ಮಾಣ ಕೂಡ ಆಗಿದೆ ಎಂದು ಸುಳ್ಳು ಮಾಹಿತಿ ನೀಡಿ ಜನರನ್ನು ವಂಚಿಸಿದ್ದೀರಿ.
ಇಂದಿನವರೆಗೆ ಬೆಳ್ತಂಗಡಿಯಲ್ಲಿ ನೀವು ದೇಶದಲ್ಲಿಯೇ ಮಾದರಿ ಎಂದು ಹೇಳುತ್ತಿರುವ ಅಂಬೇಡ್ಕರ್ ಭವನಕ್ಕೆ ಪಹಣಿಯೇ ಆಗಿಲ್ಲ. ಆದರೆ ನೀವು ಆಗಿದೆ ಎಂದು ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ. ಶಾಸಕರಾಗಿ ನಿಮಗೆ ಇದು ಶೋಭೆ ತರುವ ವಿಚಾರ ಅಲ್ಲ. ಈಗಾಗಲೇ ಸರಕಾರದಿಂದ 8 ಕೋಟಿ ಪ್ರಸ್ತಾವನೆ ಆಗಿ ಸಮಾಜ ಕಲ್ಯಾಣ ಇಲಾಖೆಗೆ ಬಂದಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ನೀಲ ನಕಾಶೆ ತಯಾರಿಸಿ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮೊನ್ನೆ ನಮ್ಮ ಸರಕಾರ ಬಂದ ಬಳಿಕ ಅನುದಾನ ಬಿಡುಗಡೆಗೆ ಪತ್ರ ಬರೆಯಲಾಗಿದೆ. ಆದರೆ ನೀವು ನಿಮ್ಮ ಸರಕಾರದ ಅವಧಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರು 8 ಕೋಟಿ ಅನುದಾನ ಬಿಡುಗಡೆ ಮಾಡಿರುವುದನ್ನು ಈಗಿನ ನಮ್ಮ ಸರಕಾರ ತಡೆ ಹಿಡಿದಿದೆ ಎಂದು ಹೇಳುವ ಮೂಲಕ ದಲಿತ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಾಯಕರಾದ ನಾಗೇಶ್ ಕುಮಾರ್ ಕೆ.ಎಂ. ಸತೀಶ್ ಕಾಶಿಪಟ್ಟ ಪ್ರಮುಖರಾದ ಧರಣೇಂದ್ರ ಕುಮಾರ್, ಸೇಮಿರಾಜ್ ಕಿಲ್ಲೂರು, ವಂದನಾ ಭಂಡಾರಿ, ಶ್ರೀಧರ ಕಳೆಂಜ, ಅರವಿಂದ ಜೈನ್ ಉಪಸ್ಥಿತರಿದ್ದರು
Post Comment