ಪುಸ್ತಕ ಪರಿಚಯ:ಶಾಲಾ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಪುಸ್ತಕ ‘ಮಕ್ಕಳಿಗಾಗಿ ಸಂವಿಧಾನ’

ನಮ್ಮ ದೇಶದ ಸಂವಿಧಾನವನ್ನು ವಿಶ್ವವೇ ಕೊಂಡಾಡುತ್ತಿದೆ. ನಮ್ಮ ಸಂವಿಧಾನವನ್ನು ಪ್ರೇಮಿಸುತ್ತಾ ಕೊಂಡಾಡುವ ಹೆಮ್ಮೆಪಡುವ ಬಹುಸಂಖ್ಯಾತ ದೇಶಪ್ರೇಮಿಗಳ ಮಧ್ಯೆ ಅವಕಾಶ ಸಿಕ್ಕಿದಾಗಲೆಲ್ಲಾ `ಸಂವಿಧಾನವೇ ಸರಿ ಇಲ್ಲ, ದೇಶದ ಕಾನೂನು ಸರಿ ಇಲ್ಲ’ ಎಂದೆಲ್ಲಾ ದೇಶದಲ್ಲಿ ಏನೇ ಗಂಡಾಂತರವಾದರೂ ವಿವಾದ ಉಂಟಾದರೂ ಎಲ್ಲದಕ್ಕೂ ಸಂವಿಧಾನವನ್ನೇ ಗುರಾಯಿಸುವ ಕಿಡಿಗೇಡಿ ಪ್ರವೃತ್ತಿಯ ಶಕ್ತಿಗಳು ತಲೆ ಎತ್ತುತ್ತಿರುವುದನ್ನು ಕಾಣುತ್ತಿದ್ದೇವೆ. ಇಂಥ ಆತಂಕಕಾರಿ ಬೆಳವಣಿಗೆಗಳನ್ನು ಕಾಣುವಾಗ ನಮ್ಮ ಸಂವಿಧಾನಕ್ಕೆ ಶತ್ರು ದೇಶಗಳಿಂದ ಯಾವ ಗಂಡಾಂತರವೂ ಇಲ್ಲ : ಆದರೆ ಯಾವ ಆಂತರಿಕ ಕಂಟಕ ಕಾದಿದೆಯೋ ಎನ್ನುವಷ್ಟರ ಮಟ್ಟಿಗೆ ಸಂವಿಧಾನ ವಿರೋಧಿಗಳು ದೇಶದಲ್ಲಾಗುತ್ತಿರುವ ಎಲ್ಲಾ ಅನಾಹುತಗಳಿಗೂ ಸಂವಿಧಾನದ ಬಗ್ಗೆ ಅಸಹನೆ ತೋರುವ, ಟೀಕಿಸುವ, ನಿಂದಿಸುವ ಜನರು ಸಂವಿಧಾನ ಜಾರಿಯಾಗುವ ಜಾಗಗಳಲ್ಲೇ ಹುಟ್ಟಿಕೊಳ್ಳುತ್ತಿದ್ದಾರೆ ಎಂಬ ಕಹಿ ಸತ್ಯಗಳನ್ನು ಮರೆಮಾಚದೆ ಒಪ್ಪಿಕೊಳ್ಳಬೇಕಾಗಿದೆ.
ಇಂಥ ಸಂವಿಧಾನ ವಿರೋಧಿ ಮನಸ್ಥಿತಿಗಳ ಸುತ್ತಮುತ್ತ ಮತ್ತು ಯುವ ಪೀಳಿಗೆಯನ್ನು ದಿಕ್ಕೆಡಿಸುವ ಪ್ರಯತ್ನಗಳ ನಡುವೆ ದೇಶವನ್ನು, ನಮ್ಮನ್ನು ಮುನ್ನಡೆಸಬೇಕಾದ ಸಂವಿಧಾನವನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳಬೇಕಾದ ತುರ್ತು ಇದೆ ಎಂಬುದನ್ನು ಗಂಭೀರವಾಗಿ ಚಿಂತಿಸಿ ಸಂಭಾವ್ಯ ಗಂಡಾಂತರಗಳ ಬಗ್ಗೆ ಆಗಾಗ ಆತಂಕ ವ್ಯಕ್ತಪಡಿಸುತ್ತಿರುವ ಸಂವಿಧಾನ ತಜ್ಞರು ಈ ಕುರಿತು ನಾನಾ ಜಾಗೃತಿ ಕಾರ್ಯಕ್ರಮಗಳನ್ನೂ ಒಂದು ಆಂದೋಳನೋಪಾದಿಯಲ್ಲಿ ಕೈಗೊಂಡಿರುವುದು ಮತ್ತು ಈ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
2018ರರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎಸ್. ನಾಗಮೋಹನದಾಸ್‌ರವರ ‘ಸಂವಿಧಾನ ಓದು’ ಎಂಬ ಕೈಪಿಡಿಯೊಂದು ವಿದ್ಯಾರ್ಥಿ ಯುವಜನರಿಗಾಗಿ ‘ಸಹಯಾನ’ ಪ್ರಕಾಶನದ ಮೂಲಕ ಹೊರಬಂದಿತ್ತು. ರಾಜ್ಯಾದ್ಯಂತ ‘ಸಂವಿಧಾನ ಓದು’ “ವಿದ್ಯಾರ್ಥಿಯೆಡೆ ಸಂವಿಧಾನ ನಡೆ” ಎಂಬ ಮಹತ್ವದ ಅಭಿಯಾನವನ್ನು ನಡೆಸುವ ಆಶಯದೊಂದಿಗೆ ಹೊರ ತರಲಾದ ಈ ಕಿರು ಕೃತಿಯು ಮೊದಲ ಮುದ್ರಣ ಕಂಡ ಒಂದೇ ತಿಂಗಳಲ್ಲಿ ಹತ್ತನೇ ಮುದ್ರಣವನ್ನು ದಾಟಿತ್ತು. ಇದು ಆ ಕೃತಿಯ ಮಹತ್ವ ಮತ್ತು ಸಾರ್ಥಕತೆಯನ್ನು ಸೂಚಿಸುತ್ತದೆ ಎನ್ನಬಹುದು. 2020ರಲ್ಲಿ ‘ಸಂವಿಧಾನ ಓದು’ – ’25 ಪ್ರಶ್ನೆ ಉತ್ತರ” ಎಂಬ ಮತ್ತೊಂದು ಕೈಪಿಡಿಯು ‘ಸಹಯಾನ’ ಪ್ರಕಾಶನದ ಮೂಲಕ ಹೊರ ಬಂತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದಿ ಮತ್ತು ಜಾತ್ಯಾತೀತ ಭಾವನೆಗಳನ್ನು ಜನಸಾಮಾನ್ಯರಲ್ಲಿ ವಿಶೇಷವಾಗಿ ದೇಶದ ಭವಿಷ್ಯವನ್ನು ಕಟ್ಟುವ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಯುವಜನರಿಗೆ ಸರಳವಾಗಿ ಸಂವಿಧಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯ್ದ ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಳೆದೈದು ವರ್ಷಗಳಿಂದ ಸಂವಿಧಾನ ಅಭಿಯಾನ ಆಯೋಜಿಸಲಾಗುತ್ತಿದೆ.

ಇದೀಗ ರಾಜ್ಯ ಸರ್ಕಾರವು ವಿಶ್ವ ಪ್ರಜಾಪ್ರಭುತ್ವ ದಿನದ ಸವಿ ನೆನಪಿನಲ್ಲಿ ಶಾಲಾ ಕಾಲೇಜುಗಳಲ್ಲಿ ಭಾರತೀಯ ಸಂವಿಧಾನದ ಪೀಠಿಕೆ ಪಠನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ವಿಶೇಷವಾಗಿ ವಿದ್ಯಾರ್ಥಿ ಯುವಜನರಲ್ಲಿ ಪ್ರಸ್ತಾವನೆಯ ಮೂಲಕ ಸಂವಿಧಾನದ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ ಹೊತ್ತಿನಲ್ಲಿ ಇದೇ ಆಶಯದೊಂದಿಗೆ ಬಂದ ಪುಸ್ತಕಗಳ ಸಾಲಿನಲ್ಲಿ ದೆಹಲಿ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶರಾದ ಹಾಗೂ ರಾಜ್ಯದ ಪ್ರಥಮ ಮುಖ್ಯ ನ್ಯಾಯಾಧೀಶರೂ ಆದ ಜಸ್ಟೀನ್ ಲೀಲಾ ಸೇಟ್ ಅವರು ಮಕ್ಕಳಿಗಾಗಿ ಬರೆದ ‘ವಿ ದ ಚಿಲ್ಡ್ರನ್ ಆಫ್ ಇಂಡಿಯಾ’ ಎಂಬ ಪುಸ್ತಕದ ಸ್ಫೂರ್ತಿಯಿಂದ ಲೇಖಕಿ ವಾಣಿ ಪೆರಿಯೋಡಿ ಅವರು ‘ಮಕ್ಕಳಿಗಾಗಿ ಸಂವಿಧಾನ’ ಎಂಬ ಮಕ್ಕಳ ಮನಮುಟ್ಟುವ ಪುಸ್ತಕವೊಂದನ್ನು ಮಕ್ಕಳ ಮೇಲಿನ ಕಾಳಜಿಯಿಂದ ಬರೆದು ‘ಲಡಾಯಿ’ ಪ್ರಕಾಶನದ ಮೂಲಕ ಹೊರ ತ೦ದಿದ್ದಾರೆ. ‘ಮಕ್ಕಳಿಗಾಗಿ ಸಂವಿಧಾನ ಕೃತಿಯ ಪರಿವಿಡಿಯೇ ಪರಿಣಾಮವನ್ನು ಹೇಳುವಷ್ಟರ ಮಟ್ಟಿಗೆ ಸೂಕ್ಷ್ಮವಾಗಿ,ಎಚ್ಚರವಾಗಿ, ಅಷ್ಟೇ ಆಪ್ತವಾಗಿ, ಸರಳವಾಗಿ ಸಂವಿಧಾನದ ಮಹತ್ವದ ವಿಷಯಗಳನ್ನು 22 ಭಾಗಗಳಾಗಿ ವಿಂಗಡಿಸಿ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಲಾಗಿದೆ. ‘ಮಕ್ಕಳಿಗಾಗಿ ಸಂವಿಧಾನ’ ಪುಸ್ತಕದಲ್ಲಿ ಲೇಖಕಿ ವಾಣಿ ಪೆರಿಯೋಡಿ ಅವರು ‘ಸಂವಿಧಾನ ಎಂದರೇನು?’ ಎನ್ನುವ ಪ್ರಾಥಮಿಕ ಪ್ರಶ್ನೆಯಿಂದ ಆರಂಭಿಸಿ ಭಾರತದ ಸಂವಿಧಾನದ ಜೀವಾಳವೇ ಆಗಿರುವ ನಮ್ಮ ಲಾಂಛನ, ಭಾರತದ ಪ್ರಜೆಗಳಾದ ನಾವು, ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಹಕ್ಕು, ಕರ್ತವ್ಯ ಮತ್ತು ರಾಜ್ಯ ನಿರ್ದೇಶಕ ತತ್ವಗಳು ಎಂಬಿತ್ಯಾದಿ ಒಟ್ಟು ಸಾಂವಿಧಾನಿಕ ಆಶಯಗಳನ್ನು ಮಕ್ಕಳ ಮನಸ್ಸೆಂಬ ಬಿಳಿ ಹಾಳೆಯಲ್ಲಿ ಪರಿಣಾಮಕಾರಿಯಾಗಿ ಬಿತ್ತಲು ಮಕ್ಕಳ ನಡುವಿನ ಗುಂಪು ಸಂಭಾಷಣೆ ಮಾದರಿಯಲ್ಲಿ, ಪ್ರಶ್ನಿಸುವ ಶೈಲಿಯಲ್ಲಿ ಮಕ್ಕಳಿಗೆ ಸರಳ ಭಾಷೆಯಲ್ಲಿ ಮನದಟ್ಟು ಮಾಡುವ ಪ್ರಯತ್ನವು ಮಕ್ಕಳನ್ನು ಆಪ್ತವಾಗಿ ಸೆಳೆಯುವಲ್ಲಿ ಯಶಸ್ವಿಯಾಗುವಂತಿದೆ. ಗಟ್ಟಿಯಾದ ಮಹಿಳಾಪರ ದನಿಯಾಗಿದ್ದೂ ಸದಾ ಜನಪರ ಚಟುವಟಿಕೆಗಳಲ್ಲಿ ನಾಡಿನಾದ್ಯಂತ ಓಡಾಡುವ ವಾಣಿ ಪೆರಿಯೋಡಿ ಮಕ್ಕಳಿಗಾಗಿ ಮಕ್ಕಳತನವನ್ನು ಇಂದಿಗೂ ಜೋಪಾನವಾಗಿ ಕಟ್ಟಿಕೊಂಡವರಾಗಿ ಮಕ್ಕಳ ವಯೋಸಹಜ ಸೃಜನಶೀಲತೆ, ಕ್ರಿಯಾತ್ಮಕ ಚಟುವಟಿಕೆಗಳ ಸುತ್ತ ನಿರಂತರ ಕಾರ್ಯಾಗಾರ, ಮಾಹಿತಿ, ತರಬೇತಿ, ಕಮ್ಮಟ ಮುಂತಾದ ಕಾರ್ಯಕ್ರಮಗಳ ಸಂಘಟಕಿಯೂ ಹೌದು. ಇದೇ ಕಾರಣಕ್ಕಾಗಿ ಈ ಪುಸ್ತಕ ಮಕ್ಕಳ ಮನಸ್ಸುಗಳನ್ನು ಆಪ್ತವಾಗಿ ಗೆಲ್ಲಬಹುದು. ಪುಸ್ತಕದ ಬೆಲೆ 90/- ರೂ. ಇದ್ದು ಶಾಲಾ-ಕಾಲೇಜುಗಳು ಮತ್ತು ಗ್ರಾಮಪಂಚಾಯತ್ ಗ್ರಂಥಾಲಯಗಳಿಗಾಗಿ ಅಥವಾ ಕೊಡುಗೆಯಾಗಿ ನೀಡಲು ಸಂಘ ಸಂಸ್ಥೆಗಳು, ದಾನಿಗಳು ಹೆಚ್ಚು ಪ್ರತಿಗಳನ್ನು ಕೊಂಡಲ್ಲಿ ರಿಯಾಯಿತಿಯೂ ಇದೆ. ಈ ನಿಟ್ಟಿನಲ್ಲಿ ಇದುವರೆಗೆ ಸುಮಾರು 12,000ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿರುವ ಹೆಗ್ಗಳಿಕೆಗೆ ಕಾರಣವಾಗಿರುವ ವಾಣಿ ಪೆರಿಯೋಡಿ ಅವರ ‘ಮಕ್ಕಳಿಗಾಗಿ ಸಂವಿಧಾನ ಪುಸ್ತಕವು ಶಾಲಾ-ಕಾಲೇಜುಗಳ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಮಹತ್ವದ ಆಶಯದ ಸಣ್ಣ ಕೃತಿಯಾಗಿದೆ. ಸಂಪರ್ಕಕ್ಕಾಗಿ “ಲಡಾಯಿ’ ಪ್ರಕಾಶನದ ದೂರವಾಣಿ ಸಂಖ್ಯೆ 9480286844, ಲೇಖಕರ ದೂರವಾಣಿ ಸಂಖ್ಯೆ: 9448481340.
Post Comment