ಶಿಬಾಜೆ : ಜಲಾವೃತ ರಸ್ತೆಗೆ ಸ್ಟೇ ವೈರ್ ನಿಂದ ವಿದ್ಯುತ್ ಪ್ರವಹಿಸಿ ಯುವತಿ ಮೃತಪಟ್ಟ ಪ್ರಕರಣ;
ಮೃತ ಯುವತಿಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರಕ್ಕೆ ಶಾಸಕ ಹರೀಶ್ ಪೂಂಜ ಸರಕಾರಕ್ಕೆ ಒತ್ತಾಯ
ಬೆಳ್ತಂಗಡಿ : ಶಿಬಾಜೆ ಗ್ರಾಮದಲ್ಲಿ ಗುರುವಾರ ವಿದ್ಯುತ್ ಅವಘಡದಿಂದ ಯುವತಿ ಬಲಿಯಾದ ಘಟನೆಗೆ ಸಂಬಂಧಿಸಿ ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯೇ ಯುವತಿಯ ಸಾವಿಗೆ ಕಾರಣವಾಗಿದೆ ಎಂಬ ಬಲವಾದ ಆರೋಪ ಗ್ರಾಮಸ್ಥರಿಂದ ಕೇಳಿ ಬಂದ ಬೆನ್ನಲ್ಲೇ ಮೆಸ್ಕಾಂ ಇಲಾಖೆ ಮೃತ ಯುವತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನೊಂದೆಡೆ ಅವಘಡದ ಬಗ್ಗೆ ಕೂಡಲೇ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಮೃತ ಯುವತಿಯ ಕುಟುಂಬಕ್ಕೆ ಕೂಡಲೇ ಗರಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದರು. ಹಾಗೂ ಅವಘಡದ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮಧ್ಯೆ ಘಟನೆಯ ಬೆನ್ನಲ್ಲೇ ಮೆಸ್ಕಾಂ ಇಲಾಖೆ ಇದೀಗ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ಇದೇ ವೇಳೆ ಹೆಚ್ಚಿನ ಪರಿಹಾರದ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಸೂಚಿಸಿದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಮೆಸ್ಕಾಂ ಎ.ಇ.ಇ. ಅವರನ್ನು ಮೃತ ಯುವತಿಯ ಕುಟುಂಬದ ಪರವಾಗಿ ಸ್ಥಳೀಯರು ಧ್ವನಿ ಎತ್ತಿದ್ದು ಇಲಾಖೆಯೇ ಯುವತಿಯ ಸಾವಿಗೆ ಕಾರಣ ಎಂಬಿತ್ಯಾದಿ ಆರೋಪಗಳು ಕೇಳಿ ಬಂದವು. ಮೆಸ್ಕಾಂ ಆಧಿಕಾರಿಯನ್ನು ಪ್ರಶ್ನೆಗಳ ಸುರಿಮಳೆಯಿಂದ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
Post Comment