ಉಜಿರೆ ಅಕ್ರಮ ಪ್ರವೇಶಿಸಿ ಮನೆ ಧ್ವಂಸ, ಅಪ್ರಾಪ್ತೆಗೆ ಜೀವಬೆದರಿಕೆ: ಆರೋಪಿ ಶೇಕ್ ರಫೀಕ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರ ಮನೆಯನ್ನು ಒಬ್ಬಂಟಿ ಅಪ್ರಾಪ್ತ ಬಾಲಕಿ ಕಣ್ಣೆದುರೇ ಖಾಸಗಿ ವ್ಯಕ್ತಿಯೊಬ್ಬ ಅಕ್ರಮ ಪ್ರವೇಶಿಸಿ ವಾಸದ ಮನೆಯನ್ನು
ಧ್ವಂಸಗೊಳಿಸಿ ದೌರ್ಜನ್ಯವೆಸಗಿ ಜೀವಬೆದರಿಕೆಯೊಡ್ಡಿದ ಕೃತ್ಯಕ್ಕೆ ಸಂಬಂಧಿಸಿ ಆರೋಪಿ ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬಾತನ ವಿರುದ್ಧ ಬೆಳ್ತಂಗಡಿ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ
ರಾಜೀವಿ ಎಂಬವರು ಮನೆಯಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಿದ್ದರು. ಫೆ 27ನೇ ಶುಕ್ರವಾರ 11.00 ಗಂಟೆಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡ ರಫೀಕ್ ಅಕ್ರಮವಾಗಿ ಪ್ರವೇಶಿಸಿ ಮನೆಯನ್ನು ಧ್ವಂಸಗೊಳಿಸಿ ಒಳಗಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನು ಮತ್ತಿತರ ವಸ್ತುಗಳನ್ನು ಬೀದಿಗೆಸೆದಿದ್ದಾನೆ. ಈ ಕೃತ್ಯದ ಬಗ್ಗೆ ದಂಪತಿಯ ಅಪ್ರಾಪ್ತೆ ಮಗಳು ಕೂಡಲೇ ಸ್ಥಳಕ್ಕೆ ಬಂದು ಎದುರುದಾರರ ಕೃತ್ಯವನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ಮುಂದಾಗಿದ್ದು ಎದುರುದಾರರು “ನೀನು ದೂರು ನೀಡಿದರೆ ನಿನ್ನನ್ನು , ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ಆಪಾದಿಸಲಾಗಿತ್ತು.
ಈ ಬಗ್ಗೆ ಭಯಗೊಂಡ ಬಾಲಕಿ ಜೋರಾಗಿ ಅಳುತ್ತಿದ್ದ ಸಂದರ್ಭದಲ್ಲಿ ನೆರೆ ಮನೆಯ ತ್ಯಾಗರಾಜ್ ಮತ್ತು ಜಯ ಎಂಬವರು ಧಾವಿಸಿ ಕೃತ್ಯವನ್ನು ಪ್ರಶ್ನಿಸಿದಾಗ ಶೇಕ್ ರಫೀಕ್ ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಇಡೀ ಘಟನೆಯ ವಿಡಿಯೋ ಸಹಿತ ಫೋಟೋ ಹೊಂದಿರುವ ಪೆನ್‌ಡ್ರೈವನ್ನು ದೂರಿನ ಜೊತೆಗೆ ಲಗತ್ತಿಸಿ ಪೊಲೀಸ್ ಇಲಾಖೆಗೆ ಸಲ್ಲಿಸಿದ್ದಾರೆ. ಮನೆಯನ್ನು ಧ್ವಂಸಗೊಳಿಸಲಾಗಿದ್ದು ಸುಮಾರು 10 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿತ್ತು.
ಶುಕ್ರವಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದ ಬೆಳ್ತಂಗಡಿ ಪೊಲೀಸರು ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ.















Post Comment