ಬೆಳ್ತಂಗಡಿ ಹಳೆಕೋಟೆ ಅಕ್ರಮ ‘ಬಂಗ್ಲೆ’ ಕಾಮಗಾರಿ : ‘ನ್ಯೂಸ್ ಕೌಂಟರ್’ ವರದಿ ಬೆನ್ನಲ್ಲೇ ಎಚ್ಚೆತ್ತ ಪಟ್ಟಣ ಪಂಚಾಯತ್ ಆಡಳಿತ

ಬೆಳ್ತಂಗಡಿ : ಇಲ್ಲಿನ ಹಳೆಕೋಟೆಯ ಖಾಸಗಿ ಶಿಕ್ಷಣ ಸಂಸ್ಥೆಯ ಬಳಿ ತಲೆ ಎತ್ತಿರುವ ಮೂರು ಮಾಳಿಗೆಯ ಅಕ್ರಮ ಬಂಗ್ಲೆಯ ಅನಧಿಕೃತ ಕಾಮಗಾರಿಯ ಬಗ್ಗೆ ಬೆಳಕು ಚೆಲ್ಲಿದ ‘News ಕೌಂಟರ್’ ವರದಿಯ ಬೆನ್ನಲ್ಲೇ ಎಚ್ಚೆತ್ತ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತವು ದೂರಿಗೆ ಸ್ಪಂದಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾತ್ ಅಧಿಕಾರಿಗಳ ನಿಯೋಗ ಅಕ್ರಮ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಕಟ್ಟಡದ ಮಾಲಕನಿಗೆ ನೋಟೀಸ್ ಬಿಸಿ ಮುಟ್ಟಿಸಿರುವ ಸಂಗತಿ ತಿಳಿದು ಬಂದಿದೆ.
ಬೆಳ್ತಂಗಡಿಯಲ್ಲಿ ಧ್ಯಾನ ಕೇಂದ್ರವೊಂದನ್ನು ಮುನ್ನಡೆಸುತ್ತಿರುವ ಸಿ.ಹೆಚ್. ಪ್ರಭಾಕರ್ ಎಂಬವರು ಪಕ್ಕದ ಇತರರ ವಸತಿ ಪ್ರದೇಶದ ಖಾಸಗಿ ನಿವೇಶನಗಳನ್ನು ಕಬಳಿಸುವ ಹುನ್ನಾರವೆಂಬಂತೆ ಅತಿಕ್ರಮಿಸಿ ಬೃಹತ್ ಬಂಗ್ಲೆ ನಿರ್ಮಿಸುತ್ತಿದ್ದು ಈ ಮಹಡಿಗಳ ಕಟ್ಟಡಕ್ಕೆ
ಸ್ಥಳೀಯಾಡಳಿತದ ಯಾವುದೇ ಪರವಾನಿಗೆ ಪಡೆಯದೆ ಕಾಮಗಾರಿಯು ಅಕ್ರಮವಾಗಿ ಮುಂದುವರಿದಿತ್ತು. ಆದರೆ ಈ ಅತಿಕ್ರಮಣ ಮತ್ತು ಅಕ್ರಮ ಬಂಗ್ಲೆ ನಿರ್ಮಾಣ ಕಾಮಗಾರಿಯ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಜಾಣ ಕುರುಡುತನದಿಂದ ವರ್ತಿಸಿದಂತಿತ್ತು.
ಬೆಳ್ತಂಗಡಿಯ ಹಳೆಕೋಟೆಯ ಬಳಿ ಸ್ಥಳೀಯರ ಖಾಸಗಿ ಜಾಗಗಳಿಗೆ ತೊಂದರೆಯಾಗುವ ರೀತಿಯಲ್ಲಿ ಅತಿಕ್ರಮಿಸಿ ತಲೆ ಎತ್ತಿರುವ ಅಕ್ರಮ ಬಂಗ್ಲೆ ಚರ್ಚೆಗೆ ಕಾರಣವಾಗಿತ್ತು. ಬಂಗ್ಲೆಯ ಮಾಲಿಕರು ಪಕ್ಕದ ಇತರರ ಜಾಗದ ಸುತ್ತ ನಿಯಮ ಪ್ರಕಾರ ಬೇಕಾದಷ್ಟು ಜಾಗವನ್ನು ಖಾಲಿ ಬಿಡದೆ ಬೇರೆಯವರ ಜಾಗವನ್ನೂ ಅತಿಕ್ರಮಿಸಿ ಮೂರು ಮಾಳಿಗೆಯ ಬಂಗ್ಲೆ ನಿರ್ಮಿಸಲಾಗಿತ್ತು.
ಮೂರು ಮಾಳಿಗೆಯ ಅಕ್ರಮ ಕಟ್ಟಡವು ಪಕ್ಕದ ಖಾಸಗಿ ಜಾಗಗಳನ್ನು ಅತಿಕ್ರಮಿಸಿದ್ದಲ್ಲದೆ ಕಟ್ಟಡದ ನೀರು ಹರಿದು ಹೋಗುವಂತೆ ಅಳವಡಿಸಿರುವ ಪೈಪನ್ನು ಇಳಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ನೊಂದವರು ಪಟ್ಟಣ ಪಂಚಾಯತ್ ಆಡಳಿತಕ್ಕೆ ದೂರು ನೀಡಿ ನ್ಯಾಯ ಕೇಳಿದ್ದರು. ತೊಂದರೆಗೊಳಗಾದವರು ಸೂಕ್ತ ಕ್ರಮಕ್ಕಾಗಿ ದೂರಿನಲ್ಲೀ ಒತ್ತಾಯಿಸಿದ್ದರು.
ಆದರೆ ಕೊಟ್ಟ ದೂರುಗಳಿಗೆ ಪಟ್ಟಣ ಪಂಚಾಯತ್ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಕಾಲಹರಣ ಮಾಡಿದಾಗ ಸಂಶಯಕ್ಕೆಡೆ ಮಾಡಿತ್ತು. ಕಟ್ಟಡ ನಿರ್ಮಿಸುತ್ತಿರುವುದು ಸಿ.ಹೆಚ್. ಪ್ರಭಾಕರ್ ವಿರುದ್ಧ ದ ದೂರಿನ ಬಗ್ಗೆ ಇದೀಗ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ಸಾಯಿ ಮಂದಿರದ ಬಳಿ ಮೂರು ಮಹಡಿಯ ವಾಸ್ತವ್ಯ ಕಟ್ಟಡ ನಿರ್ಮಿಸುತ್ತಿರುವುದು ಹಾಗೂ ಮಳೆ ನೀರು ಪೈಪನ್ನು ನಿವೇಶನದ ಆವರಣದ ಹೊರಭಾಗಕ್ಕೆ ಅಳವಡಿಸಿರುವುದು ಕಂಡು ಬಂದಿದ್ದು ನೋಟೀಸ್ ನೀಡಿದ್ದಾರೆ.
ಕಟ್ಟಡ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ, ಹಾಗೂ ಅಳವಡಿಸಿರುವ ಪೈಪನ್ನು ತೆಗೆಯುವಂತೆಯೂ ಅಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.
ನೋಟೀಸ್ ನಲ್ಲಿ ನೀಡಲಾಗಿರುವ ಸೂಚನೆಗೆ ತಪ್ಪಿದಲ್ಲಿ ಪುರಸಭಾ ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
Post Comment