ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಚುನಾವಣೆ : ಮತದಾರರ ಪಟ್ಟಿಯಿಂದ ಆಕಾಂಕ್ಷಿಗಳ ಹೆಸರುಗಳೇ ಮಾಯ!
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ನಿರ್ದೇಶಕರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ನಡುವೆ ಮತದಾರರ ಪಟ್ಟಿಯಿಂದ ಕೆಲ ಸ್ಪರ್ಧಾಕಾಂಕ್ಷಿ ಸದಸ್ಯರ ಹೆಸರುಗಳೇ ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದು
ಸಂಶಯಕ್ಕೆ ಕಾರಣವಾಗಿದೆ.
ಸರಕಾರಿ ನೌಕರರ ಮತದಾರರ ಪಟ್ಟಿಯಿಂದ ಹೆಸರು ಮಾಯ ಮಾಡಿರುವ ವಾಮ ಕಾರ್ಯದ ಬಗ್ಗೆ ಆಕ್ರೋಶಗೊಂಡ ಸದಸ್ಯರು ರಾಜ್ಯ ಚುನಾವಣಾಧಿಕಾರಿಗಳಿಗೆ ಮಾತ್ರವಲ್ಲ; ಬೆಳ್ತಂಗಡಿ ತಹಶೀಲ್ದಾರರಿಗೂ ಲಿಖಿತ ದೂರು ನೀಡಿ ಅಕ್ರಮ ಸರಿಪಡಿಸಲು ಆಗ್ರಹಿಸಿದ್ದಾರೆ.
ಸರಕಾರದ ಹೊಸ ನಿಯಮದಂತೆ ಸರಕಾರಿ ನೌಕರರೆಲ್ಲರ ಸದಸ್ಯತ್ವ ಶುಲ್ಕ ಅವರವರ ವೇತನದಿಂದಲೇ ಕಡಿತವಾಗಿ ಸಂಘದ ರಾಜ್ಯ ಶಾಖೆಗೆ ಸಂದಾಯವಾಗುವುದರಿಂದ ಈಗ ಎಲ್ಲ ಸರಕಾರಿ ನೌಕರರೂ ಸಂಘದ ಸದಸ್ಯರೇ, ಹೀಗಿದ್ದರೂ ಚುನಾವಣೆಗೆ ಆಗುವಾಗ ಪ್ರತ್ಯೇಕ ಮತದಾರರ ಪಟ್ಟಿ ಯಾಕೆ ಎಂಬುವುದು ಉತ್ತರ ಸಿಗದ ಸಂಶಯಾಸ್ಪದ ಪ್ರಶ್ನೆಯಾಗಿದೆ.
ಅದರಲ್ಲೂ ಈ ಮತದಾರರ ಪಟ್ಟಿಯಿಂದ ಕೆಲ ಸದಸ್ಯರ ಹೆಸರುಗಳೂ ನಿಗೂಢ ನಾಪತ್ತೆಯಾಗಿರುವುದು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಪಟ್ಟಿಯಲ್ಲಿ ದ್ದ ಹೆಸರುಗಳನ್ನು ಮಾಯ ಮಾಡಿದ ಕಾಣದ ಕೈಗಳು ಯಾವುದು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಪ್ರೌಢಶಾಲಾ ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿ ಆರತಿಯವರ ಹೆಸರೂ ಮತದಾರರ ಪಟ್ಟಿಯಿಂದ ಕಣ್ಮರೆಯಾಗಿರುವುದು ಅಚ್ಚರಿ ಮೂಡಿಸಿದೆ. ಇವರಿಬ್ಬರೂ ಸಂಘದ ಹಾಲಿ ನಿರ್ದೇಶಕರಾಗಿದ್ದು, ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಇದೀಗ ಅವರ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿರುವುದು ಅವರಿಬ್ಬರಿಗೂ ನಿರಾಸೆಯಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
Post Comment