ಟ್ರಯಲ್ ನೋಡಲು ಹೋಗಿ ರಿಯಲ್ ಸುಟ್ಟು ಹೋದ ಕಾರು : ಸುಟ್ಟ ಗಾಯಗಳೊಂದಿಗೆ ಇಬ್ಬರು ಅಪಾಯದಿಂದ ಪಾರು!
🔳 News ಕೌಂಟರ್
ಬೆಳ್ತಂಗಡಿ : ರಿಪೇರಿ ಮಾಡಿದ ಓಮ್ನಿ ಕಾರೊಂದನ್ನು ಪಿಟ್ಟರ್ ಒಬ್ಬರು ತನ್ನ ಸಹಾಯಕನ ಜೊತೆ ಚಲಾಯಿಸಿಕೊಂಡು ಟ್ರಯಲ್ ನೋಡಲು ಹೋದ ಸಂದರ್ಭ ಹಿಂದಿನ ಸೀಟಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದು ಸುಟ್ಟು ಹೋದ ಭಯಾನಕ ಘಟನೆ ಸವಣಾಲು ರಸ್ತೆಯ ಕಲ್ಲಗುಡ್ಡೆ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಮಹಮ್ಮದ್ ಹಾಗೂ ಬೆಳ್ತಂಗಡಿ ತಾಲೂಕಿನ ಬಳೆಂಜ ಕಾಪಿನಡ್ಕ ನಿವಾಸಿ ನಿತಿನ್ ಎಂಬವರೇ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಅವಘಡದಲ್ಲಿ ಗಾಯಗೊಂಡವರು.
ಬೆಂಕಿ ಹೊತ್ತಿಕೊಂಡಾಗ ಕಾರು ಚಲಾಯಿಸುತ್ತಿದ್ದ ಮಹಮ್ಮದ್ ಅವರ ದೇಹದ ಬಹುಭಾಗ ಸುಟ್ಟ ಗಾಯಗಳಾಗಿದ್ದು ಕೂಡಲೇ ಕಾರಿನಿಂದ ಹಾರಿ ಪಾರಾಗಿದ್ದಾರೆ.
ಹಿಂದಿನ ಸೀಟಿನಲ್ಲಿದ್ದ ನಿತಿನ್ ಗೂ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯಲ್ಲಿ ಓಮ್ನಿ ಕಾರು ಚಲಾಯಿಸುತ್ತಿದ್ದ ಪಿಟ್ಟರ್ ಮತ್ತು ಸಹಾಯಕ ಗಾಯಗೊಂಡು ಅಪಾಯದಿಂದ ಪಾರಾಗಿ ಬೆಂಕಿ ನಂದಿಸಿದ್ದಾರೆ.
ಸುಟ್ಟು ಹೋದ ಕಾರು ಚರಂಡಿಗೆ ಇಳಿದಿದ್ದು ಅವಘಡಕ್ಕೊಳಗಾದ
ಕಾರು ಮೂಡಿಗೆರೆ ಬಾಳೂರು ಎಸ್ಟೇಟ್ ನ ಗೀತಾ ಎಂಬವರಿಗೆ ಸೇರಿದ್ದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಶಾರ್ಟ್‌ಸರ್ಕ್ಯುಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದ್ದರೂ ಕಾರಿನ ಒಳಗೆ ಬೆಂಕಿ ಹೊತ್ತಿಕೊಳ್ಳಲು ಕಾರನ್ನು ರಿಪೇರಿ ಮಾಡಿ ಟ್ರಯಲ್ ಹೊರಡುವಾಗ ಬಾಟ್ಲಿಯಲ್ಲಿ ಪೆಟ್ರೋಲ್ ಹಿಡಿದುಕೊಂಡು ಕಾರು ಚಲಾಯಿಸಿಕೊಳ್ಳಲಾಯಿತೇ ? ಇದೇ ಕಾರಣಕ್ಕಾಗಿ ಕಾರಿನ ಹಿಂದಿನ ಸೀಟಿನಲ್ಲಿ ಬೆಂಕಿ ಹೊತ್ತಿ ಕೊಂಡಿತೇ ಎಂಬ ಸಂಶಯಗಳು ಇದೀಗ ಸ್ಥಳೀಯರಿಂದ ವ್ಯಕ್ತವಾಗಿದೆ.
ಅವಘಡದಲ್ಲಿ ಮುಖವೂ ಸೇರಿದಂತೆ ದೇಹದ ಇತರ ಭಾಗಗಳಿಗೂ ಗಂಭೀರ ಗಾಯಗಳಾದ ಕಾರಣ ಮಹಮ್ಮದ್ ಅವರಿಗೆ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಬೆಂಕಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಮುಂದಿನ ತನಿಖೆಯಿಂದಷ್ಟೇ ಅವಘಡದ ನಿಖರ ಕಾರಣ ತಿಳಿದು ಬರಬೇಕಾಗಿದೆ.
Post Comment