ಧರ್ಮಸ್ಥಳ ಜೀವಂತ ಸತ್ಯಗಳ ದಫನದ ಕಥೆ!

ಬೆಳ್ತಂಗಡಿ : “ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಸಾಮೂಹಿಕವಾಗಿ ದಫನ ಮಾಡಿದ್ದೇನೆ, ಸೂಕ್ತ ಕಾನೂನು ಸುರಕ್ಷತೆ ಮತ್ತು ರಕ್ಷಣೆ ಒದಗಿಸಿದಲ್ಲಿ ಹೂತಿರುವ ಶವಗಳನ್ನು ತೋರಿಸುತ್ತೇನೆ”
ಎಂದು ವಕೀಲರ ಮೂಲಕ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಶುಕ್ರವಾರ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಸೂಕ್ತ ಭದ್ರತೆಯಲ್ಲಿ ವಕೀಲರ ತಂಡ ಕರೆತಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ
ಬೆನ್ನಲ್ಲೇ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಪತ್ರಿಕಾ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಕೀಲರಾದ ಗೌಡ ಮತ್ತು ಸಚಿನ್ ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ “ಸಂಬಂಧಪಟ್ಟ ಅಧಿಕಾರಿಗಳು ಜುಲೈ 10, 2025 ರ ಸಂಜೆ ನಮಗೆ ಸಂದೇಶ ಕಳುಹಿಸಿದ್ದಾರೆ. ವಕೀಲರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿದೆ” ಎಂದು ದೂರುದಾರರ ವಕೀಲರು ತಿಳಿಸಿದ್ದಾರೆ.
ವಕೀಲರ ಹೇಳಿಕೆಯಲ್ಲಿ ಧರ್ಮಸ್ಥಳದಲ್ಲಿ ಮೃತ ದೇಹಗಳ ಸಾಮೂಹಿಕ ದಫನ ಪ್ರಕರಣದ ದೂರುದಾರರಿಗೆ ಸಾಕ್ಷಿ ರಕ್ಷಣಾ ಕಾನೂನಿನಡಿ (2018) ಸೂಕ್ತ ರಕ್ಷಣೆ ನೀಡಲಾಗಿದೆ.
BNS ಸೆಕ್ಷನ್ 183 (ಸಿಆರ್‌ಪಿಸಿಯ ಸೆಕ್ಷನ್ 164) ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಲು ದೂರುದಾರರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ದೂರುದಾರರು ತಾವು ಅನಕ್ಷರಸ್ಥರು ಮತ್ತು ಹಿಂದೆಂದೂ ನ್ಯಾಯಾಲಯಕ್ಕೆ ಹೋಗಿಲ್ಲ ಮತ್ತು ಅವರು ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿರುವಾಗ ವಕೀಲರು ನ್ಯಾಯಾಲಯದಲ್ಲಿ ಅವರೊಂದಿಗೆ ಹಾಜರಿರಬೇಕು ಎಂದು ನಮ್ಮಲ್ಲಿ ಒಬ್ಬರು ಸೂಚಿಸಿದರು.
ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಆದರೆ ದೂರುದಾರರೊಂದಿಗೆ ವಕೀಲರ ಉಪಸ್ಥಿತಿಗೆ ನ್ಯಾಯಾಲಯ ಒಪ್ಪಲಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ, ದೂರುದಾರರ ಹೇಳಿಕೆಗಳ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲಾಗಿದೆ ಎಂದು ದೂರುದಾರರ ಪರ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೋರಿಕೆಯ ಮೇರೆಗೆ ರಕ್ಷಣೆ ಒದಗಿಸಿದಕ್ಕಾಗಿ ತ್ವರಿತವಾಗಿ ಮತ್ತು ಸೂಕ್ತ ಕಾನೂನು ಕ್ರಮಕೈಗೊಂಡಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ, ದಕ್ಷಿಣ ಕನ್ನಡ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ದೂರುದಾರರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ದೂರುದಾರಪರ ವಕೀಲರು
“ದೂರಿನ ಹಿನ್ನೆಲೆಯಲ್ಲಿ ಜುಲೈ 10, 2025ರ ಸಂಜೆ ನಮಗೆ ಸಂದೇಶ ಬಂತು. ಸಾಕ್ಷಿ ರಕ್ಷಣಾ ಕಾನೂನಿನಡಿ (2018) ಸೂಕ್ತ ರಕ್ಷಣೆ ನೀಡಲಾಗಿದೆ.
BNS ಸೆಕ್ಷನ್ 183 (ಸಿಆರ್‌ಪಿಸಿಯ ಸೆಕ್ಷನ್ 164) ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಈ ವ್ಯಕ್ತಿ ಆರೋಪಿಯಲ್ಲ, ಸಾಕ್ಷಿಯಾಗಿ ಕರೆ ತಂದಿದ್ದೇವೆ, ಹೇಳಿಕೆ ದಾಖಲಿಸುವ ಸಂದರ್ಭ ವಕೀಲರನ್ನಾದರೂ ಜೊತೆಗಿರಲು ಅವಕಾಶ ನೀಡುವಂತೆ ವಿನಂತಿಸಿಕೊಂಡಿದ್ದೆವು, ಆದರೆ ಅವಕಾಶ ನೀಡದೆ ಏಕಾಂತದಲ್ಲಿ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ.
ದಾಖಲಿಸಿಕೊಂಡ ಹೇಳಿಕೆ ತನಿಖಾಧಿಕಾರಿಯ ವಶದಲ್ಲಿರುತ್ತದೆ, ಹೇಳಿಕೆಯಲ್ಲಿ ಏನೇನಿದೆ ಎನ್ನುವುದನ್ನು ವಕೀಲರಿಗೆ ಕೊಡುವಂತಿಲ್ಲ” ಎಂದರು. “ಶವಗಳನ್ನು ಯಾವಾಗ ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತದೆ ?” ಎಂಬ ಪ್ರಶ್ನೆಗೆ “ಆದಷ್ಟು ಬೇಗ ಆದ್ರೆ ಒಳ್ಳೆದು, ಸಾಕ್ಷ್ಯ ನಾಶ ಆಗಬಾರದು. ಎಂದು ದೂರುದಾರಪರ ವಕೀಲರು ಪ್ರತಿಕ್ರಿಯಿಸಿದರು.
Post Comment