ನಾಳೆ ಬೆಳ್ತಂಗಡಿಯಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಹಕ್ಕೊತ್ತಾಯ ಜಾಥಾ-ಸಮಾವೇಶ

ನಾಳೆ ಬೆಳ್ತಂಗಡಿಯಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಹಕ್ಕೊತ್ತಾಯ ಜಾಥಾ-ಸಮಾವೇಶ

Share

ಬೆಳ್ತಂಗಡಿ : ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಆಶ್ರಯದಲ್ಲಿ, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವು ಡಿಸೆಂಬರ್ 23-2025ನೇ ನಾಳೆ
ಬೆಳ್ತಂಗಡಿಯಲ್ಲಿ ನಡೆಯುತ್ತಿದೆ.

ಬೆಳ್ತಂಗಡಿ ಅಯ್ಯಪ್ಪಗುಡಿಯ ಬಳಿಯಿಂದ ಚರ್ಚ್ ಬಳಿಯ ಸಿ.ವಿ.ಸಿ ಹಾಲ್ ತನಕ ‘ನಮ್ಮ ಭೂಮಿ-ನಮ್ಮ ಹಕ್ಕು’ ಘೋಷಣೆಗಳೊಂದಿಗೆ ಜಾಥಾ ಮೂಲಕ ಸಾಗಿ ಚರ್ಚ್ ರಸ್ತೆಯ ಸಿವಿಸಿ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ.

ಭೂಮಿಗೆ ಸಂಬಂಧಿಸಿ 11 ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ
3 ಹಕ್ಕೊತ್ತಾಯಗಳು ಮಂಡನೆಯಾಗಲಿದ್ದು ರಾಜ್ಯ ಸರಕಾರಕ್ಕೆ ತಹಶೀಲ್ದಾರರ ಮುಖಾಂತರ ಸಲ್ಲಿಕೆಯಾಗಲಿದೆ.
ಬಳಿಕ ಸಂಘಟಕರ ನಿಯೋಗವು ಮುಖ್ಯಮಂತ್ರಿ, ಕಂದಾಯ ಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಲಿದೆ.
ಸಾಹಿತಿ ಶ್ರೀ ಲಕ್ಷ್ಮೀಶ ತೋಳಾಡಿ, ವಿಚಾರವಾದಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ| ನರೇಂದ್ರ ನಾಯಕ್,
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಅಂಬೇಡ್ಕರ್ ಸೇವಾ ಸಮಿತಿ, ಕೋಲಾರ ಇದರ ಅಧ್ಯಕ್ಷ ಸಂದೇಶ್ ಕೆ.ಎಂ. ಭೀಮ್ ಆರ್ಮಿಯ, ರಾಜ್ಯಾಧ್ಯಕ್ಷ ರಾಜ ಗೋಪಾಲ್, ಅಂಬೇಡ್ಕರ್ ಸೇನೆಯ, ರಾಜ್ಯಾಧ್ಯಕ್ಷ ಪಿ.ಮೂರ್ತಿ, ಸಾಮಾಜಿಕ ಹೋರಾಟಗಾರ ಟೈಗರ್ ನಾಗ್, ಪ್ರೊ| ಕೃಷ್ಣಪ್ಪ ಸ್ವಾಭಿಮಾನಿ ಬಳಗದ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕ ಆರ್ ರಮೇಶ್, ಶಾಸಕ ಹರೀಶ್ ಪೂಂಜಾ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮತ್ತಿತರರು ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಮಾತನಾಡುವ ನಿರೀಕ್ಷೆ ಇದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿ ಕುಟುಂಬಕ್ಕೆ ಕನಿಷ್ಠ 1.25 ಎಕ್ರೆ ಭೂಮಿ ಕೊಡಬೇಕು, ಮತ್ತು ಭೂ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ, ನೆರವು ನೀಡಬೇಕು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪೈಕಿ ಮೀಸಲಾತಿ ನಿಯಮದಂತೆ 20% ಪ.ಜಾ/ಪ.ಪಂದವರನ್ನು ನೇಮಿಸಬೇಕು, ದಲಿತರ ಶಿಕ್ಷಣಕ್ಕೆ ಹೆಚ್ಚು ಅನುದಾನ ಒದಗಿಸಬೇಕು ಎಂಬುದು ನಮ್ಮ ಪ್ರಮುಖ ಹಕ್ಕೊತ್ತಾಯವಾಗಿದೆ.
ಮಾಹಿತಿ ಹಕ್ಕಿನಲ್ಲಿ ಕೊಕ್ಕಡ, ಬೆಳ್ತಂಗಡಿ, ವೇಣೂರು 3 ಫಿರ್ಕಾದ ಕಂದಾಯ ನಿರೀಕ್ಷಕರು ನೀಡಿದ ಮಾಹಿತಿ ಪ್ರಕಾರ 81 ಗ್ರಾಮಗಳಲ್ಲಿ ಒಟ್ಟು 1.43.191.01 ಎಕ್ರೆ ಸರಕಾರಿ ಭೂಮಿಯಲ್ಲಿ ಕುಮ್ಮಿ. ಡೀಮ್ಸ್ ಪಾರೆಸ್ಟ್, ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಿದ, 94ಸಿ ಮತ್ತು ನಮೂನೆ 57,53, ಕುಮ್ಮಿ, ಸಾಗುವಳಿ ಜಮೀನು ಇತ್ಯಾದಿ ಕಳೆದು ಸುಮಾರು 7 ರಿಂದ 10 ಸಾವಿರ ಎಕ್ರೆ ಭೂಮಿ ಲಭ್ಯವಿರಬಹುದೆಂದು ಅಂದಾಜಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ 81ಗ್ರಾಮಗಳಲ್ಲಿ ಸರಕಾರಿ ಭೂಮಿಗಳ ಸಮಗ್ರ ಸರ್ವೆ ಮಾಡಿ. ಲಭ್ಯ ಸರಕಾರಿ ಭೂಮಿಯನ್ನು ಕರ್ನಾಟಕ ಭೂಮಂಜೂರಾತಿ ನಿಯಮಗಳು 1969ರ ನಿಯಮ 5ಎ ಪ್ರಕಾರ ದಲಿತರಿಗೆ 50% ಹಾಗೂ ನಿವೃತ್ತ ಯೋಧರು ಮತ್ತು ಇತರ ಅರ್ಹ ಭೂರಹಿತರಿಗೆ 50% ಹಂಚಬೇಕು.
ಬೆಳ್ತಂಗಡಿ ತಾಲೂಕಿನ ದಲಿತರು ತುಂಡು ಭೂಮಿಗಳನ್ನು ಹೊಂದಿದ್ದು ಇವರೆಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ನಾಗರಿಕ ಸೇವಾ ಟ್ರಸ್ಟ್ 2004ರಲ್ಲಿ ಮಾಡಿದ ‘ಬೆಳ್ತಂಗಡಿ ತಾಲೂಕಿನ ದಲಿತರ ಸ್ಥಿತಿ-ಗತಿ’ ಅಧ್ಯಯನದಲ್ಲಿ ಇದು ಕಂಡುಬಂದಿದೆ.
ದಲಿತರ ಅಭಿವೃದ್ಧಿಯಾಗಬೇಕಾದರೆ ಕನಿಷ್ಠ ಒಂದು ಎಕ್ರೆ ಭೂಮಿಯನ್ನಾದರೂ ಅವರಿಗೆ ಕೊಡಬೇಕಾಗಿದೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಬೇಕಾಗಿದೆ. ‘ಸರಕಾರಿ ಭೂಮಿ ಲಭ್ಯ ಇಲ್ಲ’ ಎಂದು ಬೆಳ್ತಂಗಡಿ ತಹಶೀಲ್ದಾರರು ಪ್ರತಿವರ್ಷ ಮಾಮೂಲಿ ಪ್ರಕಟಣೆ ಕೊಡುತ್ತಾರೆ! ಆದರೆ ಸಾವಿರಾರು ಎಕ್ರೆ ಭೂಮಿ ಲಭ್ಯವಿದ್ದು, ಸಮಗ್ರ ಸರ್ವೆ ಮಾಡುವಾಗ ಮಾತ್ರ ಎಷ್ಟಿದೆ ಎಂದು ತಿಳಿದು ಬರುತ್ತದೆ. ಧರ್ಮಸ್ಥಳ ಗ್ರಾಮದಲ್ಲಿಯೇ 400ಕ್ಕೂ ಹೆಚ್ಚು ಎಕ್ರೆ ಸರಕಾರಿ ಭೂಮಿ ಇದ್ದು ಭೂಮಾಲಕರಿಂದ ಅತಿಕ್ರಮಣವಾಗಿರುವ ಭೂಮಿ ತೆರವುಗೊಳಿಸಿ ಧರ್ಮಸ್ಥಳ ಮತ್ತು ಸುತ್ತಲಿನ ಗ್ರಾಮಗಳ ದಲಿತರಿಗೆ ಹಂಚಬೇಕು.
ಉಜಿರೆಯ ಕಾಲೇಜು ಮತ್ತು 4 ಹೈಸ್ಕೂಲ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನಿಯಮ ಪ್ರಕಾರ 20% ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ನೇಮಕ ಮಾಡಿಲ್ಲ ತಕ್ಷಣ ನೇಮಕ ಮಾಡುವುದರೊಂದಿಗೆ ಕಾನೂನಿನ ಉಲ್ಲಂಘನೆ ಮಾಡಿರುವುದಕ್ಕೆ, ಅನುದಾನ ದುರುಪಯೋಗ ಆಗಿರುವುದಕ್ಕೆ ಕಾನೂನು ಕ್ರಮ ಕೈಗೊಳಬೇಕೆಂದು ಸಮಾವೇಶ ಆಗ್ರಹಿಸಲಿದೆ.
‘ಭೂರಹಿತ, ಬಡವ’ ಎಂದು ಸುಳ್ಳು ಅರ್ಜಿ ಕೊಟ್ಟು ಪಡೆದ 7.59 ಎಕ್ರೆ ದರ್ಖಾಸ್ತು ಮಂಜೂರಾತಿ ಆದೇಶವನ್ನು ಡಿ.ಸಿಯವರು ರದ್ದುಗೊಳಿಸಿ, ದಲಿತರಿಗೆ ಭೂರಹಿತರಿಗೆ ಹಂಚಬೇಕು. ಉಜಿರೆಯಲ್ಲಿ ಅತಿಕ್ರಮಣವಾಗಿರುವ 44 ಎಕ್ರೆ ಡಿ.ಸಿ ಮನ್ನಾ ಭೂಮಿಗೆ ಪರ್ಯಾಯ ಭೂಮಿ ಕೊಡಬೇಕು. ಬೆಳ್ತಂಗಡಿ ತಾಲೂಕಿನಲ್ಲಿರುವ 473 ಎಕ್ರೆ ಡಿ.ಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಂಚಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳು ಹಕ್ಕೊತ್ತಾಯ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿ ಸಂಚಾಲಕ ಎಂ.ಬಿ. ಕರಿಯ,
ಸಹ ಸಂಚಾಲಕರಾದ ಬಾಬು.ಎ, ನಾರಾಯಣ ಕಿಲಂಗೋಡಿ,
ಸುಕೇಶ್ ಮಾಲಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!