ಬೈಪಾಡಿ ಸಮೀಪ ರಸ್ತೆ , ಅರಣ್ಯ ಬದಿಯಲ್ಲಿ ಸತ್ತ ಹೆಬ್ಬಾವು ಪತ್ತೆ!
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ ಸಮೀಪ, ದಡಂತಮಲೆಯ ಅರಣ್ಯ ಪ್ರದೇಶದ ಮೂಲಕ ಹೋಗುವ ಉಜಿರೆ ರಸ್ತೆಯ ಬದಿಯಲ್ಲಿ ಹೆಬ್ಬಾವನ್ನು ಹೋಲುವ ದೈತ್ಯ ಹಾವೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿಯಿಂದ ಉಜಿರೆಗೆ ಹೋಗುವ ಬೆಳಾಲು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಂಡ ಸಮೀಪದ ತಿರುವಿನ ರಸ್ತೆ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಾವು ಹೇಗೆ ಮೃತಪಟ್ಟಿದೆ ಎಂಬುದು ತಿಳಿದು ಬಂದಿಲ್ಲ. ಬೈಪಾಡಿಯಿಂದ ಸುಮಾರು 750 ಮೀಟರ್ ದೂರದಲ್ಲಿ ರಸ್ತೆಯ ಬಲ ಬದಿಯಲ್ಲಿ (ಬೈಪಾಡಿ ಮತ್ತು ಕಾಡಂಡ ಬಸ್ ನಿಲ್ದಾಣದ ನಡುವೆ) ಹೆಬ್ಬಾವಿನಂಥ ದೊಡ್ಡ ಹಾವಿನ ಕಳೇಬರ ಪತ್ತೆಯಾಗಿದೆ.
ಈ ಹಾವು ರಾತ್ರಿ ವೇಳೆ ಮೃತಪಟ್ಟಿರುವ ಸಾಧ್ಯತೆ ಇದ್ದು ರಾತ್ರಿ ರಸ್ತೆ ದಾಟುವ ಸಂದರ್ಭ ಹಾವಿನ ಮೇಲೆ ವಾಹನ ಚಲಿಸಿದ ಪರಿಣಾಮ ಜೀವನ್ಮರಣ ಹೋರಾಟದಲ್ಲಿ ಹೊರಳಾಡಿಕೊಂಡು ರಸ್ತೆ ದಾಟಿದ ಹಾವು ಕಾಡಿನೊಳಗೆ ಹೋಗುವ ಪ್ರಯತ್ನದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಅಥವಾ ಯಾವುದೋ ಪ್ರಾಣಿಯನ್ನು ಉರುಳಿಗೆ ಸಿಲುಕಿಸಿಕೊಂಡು ನುಂಗುವ ಪ್ರಯತ್ನದಲ್ಲಿ ಮೃತಪಟ್ಟಿರುವ ಸಾಧ್ಯತೆಯೂ ಇದೆ.
ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ದೊಡ್ಡ ಹಾವು ಮೃತಪಟ್ಟು ಎರಡು ಮೂರು ದಿನಗಳಿಂದ ಈ ಪರಿಸರ ದುರ್ವಾಸನೆ ಬರುತ್ತಿದ್ದರೂ
ಈ ಪ್ರದೇಶದ ಕಾಡಿನಲ್ಲಿ ದಿನನಿತ್ಯ ಗಸ್ತು ತಿರುಗುವ ಸ್ಥಳೀಯ ಅರಣ್ಯ ಸಿಬ್ಬಂದಿಗಳಾಗಲಿ, ಸ್ಥಳೀಯ ಗ್ರಾಮಪಂಚಾಯತ್ ಆಡಳಿತವಾಗಲಿ ಹಾವಿನ ಕಳೇಬರವನ್ನು ದಫನ ಮಾಡಿಲ್ಲ. ಸಾವಿರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಬದಿಯಲ್ಲಿ ಇಷ್ಟು ದೊಡ್ಡ ಹಾವು ಸತ್ತಿದ್ದರೂ ಗಮನಕ್ಕೆ ಅರಣ್ಯ ಸಿಬ್ಬಂದಿಗಳಿಗೆ ಕಾಡಿನೊಳಗೆ ಪ್ರಾಣಿಗಳು ಸತ್ತರೆ ಗಮನಕ್ಕೆ ಬರಬಹುದೇ? ಈ ಹಾವು ಎರಡು ಅಥವಾ ಮೂರು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದ್ದು ಕೊಳೆಯುವ ಹಂತದಲ್ಲಿರುವ ಹಾವಿನ ಕಳೇಬರವನ್ನು ಕಾಡು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗುವ ಮುನ್ನ ವಿಲೇವಾರಿ ಮಾಡಬೇಕಾದವರು ಯಾರು? ಊರವರೇ? ಅರಣ್ಯ ರಕ್ಷಕರೇ? ಸ್ಥಳೀಯ ಗ್ರಾಮಪಂಚಾಯತ್ ಆಡಳಿತವೇ? ಎಂಬ ಪ್ರಶ್ನೆಗಳು ದಾರಿಹೋಕರಿಂದ ಕೇಳಿ ಬರುತ್ತಿದೆ.













Post Comment