ಲಾಯಿಲಾ;ತಿರುಗುತ್ತಿದ್ದ ಫ್ಯಾನ್ ಕಂಡೆನ್ಸರ್ ಭಯಂಕರ ಸ್ಫೋಟ: ತಪ್ಪಿದ ಅನಾಹುತ !

ಬೆಳ್ತಂಗಡಿ : ಮನೆಯಲ್ಲಿ ಮಕ್ಕಳು ಮಲಗುವ ಕೋಣೆಯೊಂದರಲ್ಲಿ ತಿರುಗುತ್ತಿದ್ದ ಬಜಾಜ್ ಕಂಪೆನಿಯ ಫ್ಯಾನ್ ಒಂದು
ಭಯಂಕರ ಶಬ್ದದೊಂದಿಗೆ ಸ್ಫೋಟಗೊಂಡು ಮಕ್ಕಳು ಅಪಾಯದಿಂದ ಪಾರಾದ ಆತಂಕಕಾರಿ ಅವಘಡ ಲಾಯಿಲಾ ಗ್ರಾಮದ ಕುಂಟಿನಿ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕುಂಟಿನಿ ನಿವಾಸಿ ಝಕಾರಿಯ ಎಸ್ ಎಲ್ ಬಿ ಎಂಬವರ ಮನೆಯಲ್ಲಿ ಕಳೆದ ರಾತ್ರಿ ತಿರುಗುತ್ತಿದ್ದ ಫ್ಯಾನ್ ದಿಢೀರ್ ಸ್ಫೋಟಗೊಂಡ ಪರಿಣಾಮ ಫ್ಯಾನಿನ ಕಂಡೆನ್ಸರ್ ಸಹಿತ ಮತ್ತು ಅದರೊಳಗೆ ಅಳವಡಿಸಲಾದ ವಿದ್ಯುತ್ ಉಪಕರಣಗಳು ಸಂಪೂರ್ಣ ಒಡೆದು ಹೋಗಿದ್ದು ಇಡೀ ಕೋಣೆಯಲ್ಲಿ ಬಿದ್ದಿದೆ. ಇದೇ ವೇಳೆ ತೆಳುವಾದ ಹೊಗೆ ಸಹಿತ ಕರಂಟಿದ ವಾಸನೆಯೂ ಕೋಣೆಯೊಳಗೆ ತುಂಬಿದೆ.
ಫ್ಯಾನ್ ಕಂಡೆನ್ಸರ್ ಸ್ಫೋಟದ ಸದ್ದು ಒಂದು ರೀತಿಯ ಬಾಂಬ್ ನಂತೆ ಭಯಂಕರವಾಗಿ ಕೇಳಿಸಿದ್ದು ಆ ಸದ್ದಿಗೆ ಮನೆಯವರು ಮತ್ತು ಪಕ್ಕದ ಮನೆಯವರು ಆತಂಕಗೊಂಡಿದ್ದಾರೆ. ಘಟನೆಯಲ್ಲಿ ಸ್ಫೋಟದ ಸಂದರ್ಭ ಪಾದರಸದಂತೆ ಹೊಳೆಯುವ ದ್ರವ ರೂಪದ ರಾಸಾಯನಿಕವೊಂದು ಇಡೀ ಗೋಡೆಯಲ್ಲಿ ಚೆಲ್ಲಿದ್ದು ತಿರುಗುತ್ತಿದ್ದ ಫ್ಯಾನ್ ನ ಕಂಡೆನ್ಸರ್ ಇದ್ದಕ್ಕಿದ್ದಂತೆ ಭಯಂಕರ ಸ್ಫೋಟಗೊಳ್ಳಲು ಕಾರಣವೇನೆಂಬುದನ್ನು ತಿಳಿಯದೆ ಮನೆಯವರು ಆತಂಕದಲ್ಲಿದ್ದಾರೆ.
ಇದೇ ಕೋಣೆಯಲ್ಲಿ ಝಕಾರಿಯ ಅವರ ಮಕ್ಕಳು ಬರೆಯುತ್ತಾ ಓದುತ್ತಾ ಕಂಪ್ಯೂಟರ್ ಕಲಿಯುತ್ತಾ ಇದ್ದರು, ಪತ್ನಿ ಅಡುಗೆ ಕೋಣೆಯಲ್ಲಿದ್ದರು. ಎ.ಸಿ. ಇದ್ದ ಕೋಣೆಯಲ್ಲಿದ್ದ ಝಕಾರಿಯಾ ಅವರು ” ಎ.ಸಿ. ಆನ್ ಇದೆ ಇಲ್ಲಿಗೆ ಬನ್ನಿ” ಎಂದು ಮಕ್ಕಳನ್ನು ಕರೆದಿದ್ದು ಫ್ಯಾನ್ ತಿರುಗುತ್ತಿದ್ದ ಕೋಣೆಯಿಂದ ಆಗಷ್ಟೇ ಅಪ್ಪ ಕರೆದರೆಂದು ಮಕ್ಕಳು ಹೋಗಿದ್ದರು.

ಇದೇ ವೇಳೆಗೆ ತಿರುಗುತ್ತಿದ್ದ ಫ್ಯಾನ್ ನ ಕಂಡೆನ್ಸರ್ ಸ್ಫೋಟಗೊಂಡು ಡೆಡ್ ಆಗಿದ್ದು ಸಂಭಾವ್ಯ ಅನಾಹುತವೊಂದು ತಪ್ಪಿ ಹೋಗಿದ್ದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಝಕಾರಿಯಾ ಅವರು ಉಜಿರೆಯ ಎಲೆಕ್ಟ್ರಾನಿಕ್ಸ್ ನಿಂದ ಒಂದು ವರ್ಷದ ಹಿಂದೆಯಷ್ಟೇ ಫ್ಯಾನ್ ಖರೀದಿಸಿದ್ದು ಎರಡು ವರ್ಷ ವಾರಂಟಿ ಕೂಡ ಇತ್ತು.
ಆದರೆ ಇದೀಗ ಫ್ಯಾನ್ ಕಂಡೆನ್ಸರ್ ಸ್ಫೋಟಗೊಂಡಿದ್ದು
ಫ್ಯಾನ್ ಗೆ ಅಳವಡಿಸಲಾದ ವಿದ್ಯುತ್ ಪರಿಕರಗಳು ಕಳಪೆ ಗುಣಮಟ್ಟದ್ದೇ ಅಥವಾ ಬೇರೇನಾದರೂ ಕಾರಣಕ್ಕೆ ಅವಘಡ ನಡೆಯಿತೇ? ಎಂಬುದನ್ನು ಬಜಾಜ್ ಕಂಪೆನಿಯವರು ಮತ್ತು ಮೆಸ್ಕಾಂ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸ್ಫೋಟಗೊಂಡ ಅವಶೇಷಗಳನ್ನು ಪರೀಕ್ಷೆಗೊಳಪಡಿಸಿ ಸ್ಪಷ್ಟಪಡಿಸಬೇಕಾಗಿದೆ.
ಇಲ್ಲವಾದರೆ ಮುಂದೊಂದು ದಿನ ಇಂಥ ಮತ್ತೊಂದು ಅವಘಡ ಸಂಭವಿಸಿದರೆ ‘ಫ್ಯಾನ್ ಬಾಂಬ್’ ಎಂಬ ವದಂತಿಗೂ ಕಾರಣವಾಗುವ ಅಪಾಯವಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.














Post Comment