ಮೌಢ್ಯದ ವಿರುದ್ಧ ವೈಚಾರಿಕ ಚಳುವಳಿಯ ಅಗತ್ಯವಿದೆ : ಶಿಬಿ ಧರ್ಮಸ್ಥಳ

ಬೆಳ್ತಂಗಡಿ : ಅನ್ಯಾಯ, ದೌರ್ಜನ್ಯ, ಮೂಢನಂಬಿಕೆ ವಿರುದ್ಧ ವೈಚಾರಿಕ ಚಳವಳಿ ಅಗತ್ಯವಿದ್ದು ಮಾನವ ಬಂಧುತ್ವ ವೇದಿಕೆ ಮೂಲಕ ವೈಚಾರಿಕ , ವೈಜ್ಞಾನಿಕ ಚಳವಳಿಯನ್ನು ಕಟ್ಟುವ ಅಗತ್ಯವಿದೆ ಎಂದು ಹಿರಿಯ ಸಾಮಾಜಿಕ ಚಿಂತಕ , ಪತ್ರಕರ್ತ ಶಿಬಿ ಧರ್ಮಸ್ಥಳ ಹೇಳಿದರು. ಅವರು ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲನ ಸಮಿತಿ ವತಿಯಿಂದ ನಡೆದ ಗ್ರಾಮ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ , ದಲಿತ , ಕಾರ್ಮಿಕ ಚಳವಳಿಗಳು ಶತಮಾನಗಳಿಂದ ಗಟ್ಟಿಯಾಗಿದೆ. ಜೊತೆಗೆ ವೈಚಾರಿಕ , ವೈಜ್ಞಾನಿಕ ಚಳವಳಿಯ ಅಗತ್ಯವೂ ಇದೆ. ಮೂಢನಂಬಿಕೆ ವಿರುದ್ಧ ಜನರನ್ನು ಜಾಗೃತಿಗೊಳಿಸಲು ಇಂಥ ಚಳವಳಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರನ್ನು ವೈಚಾರಿಕವಾಗಿ ಗಟ್ಟಿಗೊಳಿಸಲು ಅಧ್ಯಯನ ಶಿಬಿರಗಳನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಮಾತನಾಡುತ್ತಾ ದೇಶವು ಇಂದು ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ಅಡಿಪಾಯ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ ಮಾಧ್ಯಮ ರಂಗವನ್ನೂ ಉಳ್ಳವರು ಖರೀದಿಸುತ್ತಿದ್ದಾರೆ. ಜನರು ಇದರ ವಿರುದ್ಧ ಸಂಘಟಿತ ಹೋರಾಟ ನಡೆಸದಂತೆ ಧರ್ಮ , ದೇವರ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ. ಒಟ್ಟಿನಲ್ಲಿ ಬಂಧುತ್ವವನ್ನು ಒಡೆಯುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು.

ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಪ್ರಜಾಪ್ರಭುತ್ವ ಮತ್ತು ಬಂಧುತ್ವವನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದಲೇ ಜನಜಾಗೃತಿಗಾಗಿ ಮಾನವ ಬಂಧುತ್ವ ವೇದಿಕೆಯನ್ನು ಬೆಳೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅರುವ ಮಾತನಾಡಿ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಗಳಲ್ಲಿ ಮಾನವ ಬಂಧುತ್ವ ವೇದಿಕೆಯ ಘಟಕಗಳನ್ನು ಸ್ಥಾಪಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿಸುತ್ತೇವೆ.
ಧರ್ಮವನ್ನು ಮೀರಿ ಮನುಷ್ಯನನ್ನು ಪ್ರೀತಿಸುವ ಸಮಾಜದ ನಿರ್ಮಾಣಕ್ಕಾಗಿ ಕಂಕಣಬದ್ಧರಾಗಿ ದುಡಿಯೋಣ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಬರಮಣ್ಣ , ದಲಿತ ನಾಯಕ , ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್ , ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ , ಮಾನವ ಬಂಧುತ್ವ ವೇದಿಕೆ ದ.ಕ. ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ , ಪಡ್ಡಂದಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ , ಬಳೆಂಜ ಯುವ ಉದ್ಯಮಿ ಪ್ರದೀಪ್ ಕೋಟ್ಯಾನ್ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು , ಮಾನವ ಬಂಧುತ್ವ ವೇದಿಕೆಯ ಗ್ರಾಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು. ಶೇಖರ್ ಎಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.















Post Comment