ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ; ತುಂಬಿ ಹರಿಯುತ್ತಿರುವ ನದಿಗಳು ಪ್ರವಾಹ ಭೀತಿಯಲ್ಲಿ ಜನತೆ


ಬೆಳ್ತಂಗಡಿ : ನಿರೀಕ್ಷೆಯಂತೆ ತಾಲೂಕಿನಾದ್ಯಂತ ಶನಿವಾರ ಬೆಳಗ್ಗಿನಿಂದಲೇ ಭಾರೀ ಮಳೆ ಮುಂದುವರಿದಿದ್ದು ಧರ್ಮಸ್ಥಳದಲ್ಲಿ ನೇತ್ರಾವತಿಯೂ ಸೇರಿದಂತೆ ತಾಲೂಕಿನಲ್ಲಿ ಹರಿಯುವ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ, ಇನ್ನೊಂದೆಡೆ ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿಯೂ ಕಾಡುತ್ತಿದೆ.
ಕೆಲವೆಡೆ ಭಾರೀ ಗಾಳಿ ಮಳೆಯೂ ಬೀಸುತ್ತಿರುವ ಕಾರಣ
ಬೃಹತ್ ಮರಗಳಿರುವ ಅರಣ್ಯದಂಚಿನ ಪ್ರದೇಶದ ನಿವಾಸಿಗಳಲ್ಲಿ ಮರಗಳ ಬಗ್ಗೆಯೂ ಆತಂಕವೂ ಇದೆ. ಬೆಳ್ತಂಗಡಿ- ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ಸ್ಥಳೀಯ ನದಿ ನೀರಿನ ನೆರೆಯ ಪರಿಣಾಮ ರಸ್ತೆಗೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಗೇರುಕಟ್ಟೆ ಬಳಿ ರಸ್ತೆಗೆ ಹಾಕಿದ ಮಣ್ಣು ಕೆಸರಾಗಿ ನೀರು ಬಂದು ಕಂಬಳ ಗದ್ದೆಯಂತಾಗಿದೆ.

ಸವಣಾಲು ಕೋಡಿಮುಗೇರು ಎಂಬಲ್ಲಿ ಕಿಂಡಿ ಅಣೆಕಟ್ಟಿನ ಮೇಲೆ ನೀರು ತುಂಬಿ ಹರಿಯುತ್ತಿದೆ, ನೆರಿಯಾ ಸಿಯೋನ್ ಆಶ್ರಮ ತಡೆಗೋಡೆ ಕುಸಿದು ನಷ್ಟ ಉಂಟಾಗಿದೆ.
ನೆರೆ ಭೀತಿಯನ್ನು ಎದುರಿಸಲು, ತಾಲೂಕು ಆಡಳಿತವೂ ಸನ್ನದ್ಧವಾಗಿರಬೇಕಾಗಿದೆ. ತಾಲೂಕಿನ ಕೆಲವೆಡೆ ಮುಖ್ಯ ರಸ್ತೆ ಪ್ರದೇಶದ ಹಳ್ಳ ಕೊಳ್ಳ, ಚರಂಡಿಗಳು ತುಂಬಿ ಹರಿಯುತ್ತಿದ್ದು ನಾವೂರು ಪೇಟೆಯಲ್ಲಿ ಕೋಳಿ ಅಂಗಡಿ ಮತ್ತಿತರ ಅಂಗಡಿಗಳಿಗೆ ನೀರು ನುಗ್ಗಿದರೆ ಮುಂಡಾಜೆ ಸುತ್ತಮುತ್ತ ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು ಕೃಷಿಕರು ಕೃಷಿ ಹಾನಿ, ಭೀತಿಯಲ್ಲಿದ್ದಾರೆ.
ಲಾಯಿಲಾ ಗ್ರಾಮದ ಮುಂಡೇಲು ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿಯ ಮೂರು ಬಡ ಕುಟುಂಬಗಳ ಮನೆಯ ಕಿಟಕಿ ಮಟ್ಟದವರೆಗೆ ನದಿ ನೀರು ನುಗ್ಗಿ ಬಂದಿದ್ದು ಪ್ರವಾಹ ಭೀತಿಯಲ್ಲಿದ್ದ ಮೂರು ಕುಟುಂಗಳನ್ನು ತಾಲೂಕು ಆಡಳಿತ ತಾತ್ಕಾಲಿಕವಾಗಿ ಬೇರೆ ಮನೆಗಳಿಗೆ ಸ್ಥಳಾಂತರಿಸಿದೆ. ಎನ್ ಡಿ ಆರ್ ಎಫ್ ತಂಡವೂ ತಾಲೂಕಿಗೆ ಆಗಮಿಸಿದ್ದು ನೆರೆ ಭೀತಿಯಲ್ಲಿರುವ ಜನರಿಗೆ ತುರ್ತಾಗಿ ಸ್ಪಂದಿಸಲು ಸಿದ್ಧವಿದೆ. ಇನ್ನೊಂದೆಡೆ ಶಾಸಕರ ಶ್ರಮಿಕ ತಂಡವೂ ತುರ್ತು ಸಹಾಯಕ್ಕೆ ಮೊಬೈಲ್ ಸಂಖ್ಯೆಗಳನ್ನು ಪ್ರಕಟಿಸಿ ಸಿದ್ಧವಾಗಿದೆ.
ಮಳೆಹಾನಿ ನಿರ್ವಹಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದಲ್ಲಿ ಭಾರತ್ ಜೋಡೋ ಟಾಸ್ಕ್ ಫೋರ್ಸ್ ರಚನೆಗೊಂಡಿದೆ.















Post Comment