ಸೌಜನ್ಯ ಪ್ರಕರಣ: ಶ್ರೀ ಕ್ಷೇತ್ರ ಧರ್ಮಸ್ಥಳದ ಲೆಟರ್ ಹೆಡ್ ಬಳಸಿ ಮಾಧ್ಯಮ ಹೇಳಿಕೆ; ದೇವಸ್ಥಾನ ಕಚೇರಿ ವ್ಯವಸ್ಥಾಪಕರಿಗೆ ಹೋರಾಟಗಾರ ಜಯಂತ್ ಟಿ ಪತ್ರ

“ಸೌಜನ್ಯ ಪರ ಹೋರಾಟಗಾರರು ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಶ್ರದ್ಧೆ, ಪಾವಿತ್ರ್ಯದ ವಿರುದ್ಧ ಹೋರಾಡಿಲ್ಲ” ಎಂಬ ಸ್ಪಷ್ಟನೆ
ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿನ ಲೆಟರ್ ಹೆಡ್ ಬಳಸಿ, ವ್ಯವಸ್ಥಾಪಕರು ಬಿಡುಗಡೆಗೊಳಿಸಿದ ಮಾಧ್ಯಮ ಪ್ರಕಟಣೆಗಳಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ’ದ ಹೆಸರು ಹಾಗೂ ಅಧಿಕೃತ ಲೆಟರ್‌ಹೆಡ್ ಬಳಕೆ ಮಾಡಿರುವ ಕುರಿತು ಪ್ರಶ್ನಿಸಿ, ಸ್ಪಷ್ಟನೆ ಕೋರಿ ಸೌಜನ್ಯ ಹೋರಾಟಗಾರ ಜಯಂತ್ ಟಿ ಅವರು ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ಸೌಜನ್ಯ ಪರ ಹೋರಾಟಗಾರ ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಅವರ ಪತ್ರದ ಆರಂಭದಲ್ಲಿ “ದಿನಾಂಕ 21-09-2026ರಂದು ‘ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕೃತ ಲೆಟರ್‌ಹೆಡ್ ಬಳಸಿಕೊಂಡು, ವ್ಯವಸ್ಥಾಪಕರಾದ ತಾವುಗಳು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆಯೊಂದನ್ನು ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ, ಸೌಜನ್ಯ ಪರ ಹೋರಾಟಗಾರರು ಹಾಗೂ ನ್ಯಾಯಪರ ನಾಗರಿಕರ ಪರವಾಗಿ ಕೆಲವು ಪ್ರಮುಖ ಅಂಶಗಳನ್ನು ಗೌರವಪೂರ್ವಕವಾಗಿ ಸ್ಪಷ್ಟಪಡಿಸಲು ಬಯಸುತ್ತೇವೆ.” ಎಂದಿದೆ.
“ಶ್ರೀ ಕ್ಷೇತ್ರ ಧರ್ಮಸ್ಥಳವು ಕೋಟ್ಯಾಂತರ ಭಕ್ತರ ಅತ್ಯುನ್ನತ ಧಾರ್ಮಿಕ ಹಾಗೂ ಶ್ರದ್ಧಾ ಕೇಂದ್ರವಾಗಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಅಥವಾ ಕಾನೂನು ಪ್ರಕ್ರಿಯೆಯು ವ್ಯಕ್ತಿಗತ ಹಾಗೂ ಅಪರಾಧ ತನಿಖೆಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಕ್ಷೇತ್ರದ ಧಾರ್ಮಿಕ ಸ್ವರೂಪದಿಂದ ಪ್ರತ್ಯೇಕವಾಗಿರಿಸುವುದು ಸೂಕ್ತ ಎಂಬುದು ನಮ್ಮ ವಿನಮ್ರ ಅಭಿಪ್ರಾಯವಾಗಿದೆ.
ಸೌಜನ್ಯಪರ ಹೋರಾಟಗಾರರು ಅಥವಾ ನ್ಯಾಯಪರ ನಾಗರಿಕರು ಯಾವುದೇ ಸಂದರ್ಭದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಶ್ರದ್ಧೆ ಪರಂಪರೆ, ಭಕ್ತರು ಅಥವಾ ಕ್ಷೇತ್ರದ ಪಾವಿತ್ರ್ಯದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ನಮ್ಮ ಹೋರಾಟದ ಉದ್ದೇಶವು ಸೌಜನ್ಯಳಿಗೆ ನ್ಯಾಯ ದೊರಕಬೇಕು, ಅಲ್ಲಿ ಆಗಿರುವಂತಹ ಅತ್ಯಾಚಾರ, ಕೊಲೆ ಮುಂತಾದ ಪ್ರಕರಣಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ನಿಜವಾದ ಅಪರಾಧಿಗಳು ಕಾನೂನಿನ ಮುಂದೆ ಹೊಣೆಗಾರರಾಗಬೇಕು ಎಂಬುದಷ್ಟೇ.
ಆದುದರಿಂದ ಕಾನೂನು, ತನಿಖಾ ಅಥವಾ ಸಾರ್ವಜನಿಕ ಚರ್ಚೆಯ ವಿಷಯಗಳಲ್ಲಿ “ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕೃತ ಲೆಟರ್‌ಹೆಡ್ ಅಥವಾ ಕ್ಷೇತ್ರದ ಹೆಸರನ್ನು ಬಳಸುವುದರಿಂದ, ಕ್ಷೇತ್ರದ ಧಾರ್ಮಿಕ ಸ್ವರೂಪ ಮತ್ತು
ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಎರಡೂ ಒಂದೇ ವಿಷಯವೆಂಬ ತಪ್ಪು ಗ್ರಹಿಕೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಕ್ಷೇತ್ರದ ಭಕ್ತರಲ್ಲಿ ಉಂಟಾಗುವ ಸಾಧ್ಯತೆ ಇದೆ.

ಶ್ರೀ ಕ್ಷೇತ್ರ ಧರ್ಮಸ್ಥಳವು ಲಕ್ಷಾಂತರ ಭಕ್ತರ ಶ್ರದ್ಧೆ ಮತ್ತು ನಂಬಿಕೆಯ ಕೇಂದ್ರವಾಗಿರುವುದರಿಂದ, ಇಂತಹ ಸೂಕ್ಷ್ಮ ಕಾನೂನು ವಿಚಾರಗಳಲ್ಲಿ ಕ್ಷೇತ್ರದ ಅಧಿಕೃತ ಹೆಸರು ಅಥವಾ ಲೆಟರ್‌ಹೆಡ್ ಬಳಕೆಯಾಗದಿರುವುದು ಕ್ಷೇತ್ರದ ಧಾರ್ಮಿಕ ಘನತೆ ಹಾಗೂ ಭಕ್ತರ ಭಾವನೆಗಳ ದೃಷ್ಟಿಯಿಂದಲೂ ಹೆಚ್ಚು ಸೂಕ್ತ ಮತ್ತು ಒಳಿತು ಎಂದು ನಾವು ಭಾವಿಸುತ್ತೇವೆ. ಈ ನಿಟ್ಟಿನಲ್ಲಿ ತಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೀರೆಂದು ನಂಬಿದ್ದೇವೆ ” ಎಂದಿದೆ.














Post Comment