ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆಗೂ ಮುನ್ನ ವೈಜ್ಞಾನಿಕ ಅಧ್ಯಯನ ಅಗತ್ಯ : ಶೇಖರ್ ಎಲ್

Dakshina Kannada
Chikkamagalooru
ಬೆಳ್ತಂಗಡಿ : ದ.ಕ. ಮತ್ತು ಚಿಕ್ಕಮಗಳೂರು ಜಿಲೆಗಳ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ಗುಡ್ಡ ಕುಸಿತ , ಕಾಡುಪ್ರಾಣಿಗಳ ಉಪಟಳದಂತಹ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದ್ದು ಘಾಟ್ ಅಭಿವೃದ್ಧಿ ಮೊದಲು ರಾಜ್ಯ ಸರ್ಕಾರ ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಾಮಾಜಿಕ ಹೊರಾಟಗಾರ ಶೇಖರ್ ಲಾಯಿಲಾ ಅಭಿಪ್ರಾಯ ಪಟ್ಟಿದ್ದಾರೆ.
ಘಾಟ್ ಪ್ರದೇಶದ ಅಭಿವೃದ್ಧಿ ಜೊತೆಗೆ ಮುಂದಾಗುವ ಅಪಾಯಕಾರಿ ದುರಂತಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ. ಕೇರಳದ ಪಶ್ಚಿಮಘಟ್ಟಗಳ ಸಾಲಿನಲ್ಲಿ ವಯನಾಡ್ ದುರಂತ ನಮ್ಮ ಕಣ್ಣ ಮುಂದಿರುವಾಗ ಘಾಟ್ ಪ್ರದೇಶದ ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಗುಡ್ಡಗಳ ತೆರವು , ಕಲ್ಲುಗಳ ತೆರವು , ಸಾವಿರಾರು ಮರಗಳ ತೆರವು , ದೈತ್ಯ ಯಂತ್ರೋಪಕರಣಗಳ ಬಳಕೆಯಿಂದ ಮಣ್ಣಿನ ಸವಕಳಿ ಉಂಟಾಗುವ ಸಾಧ್ಯತೆ ಇದೆ ಇದರಿಂದಾಗಿ ಮಳೆಗಾಲದಲ್ಲಿ ಗುಡ್ಡ ಕುಸಿತಗೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಪ್ರಭೇದಗಳ ಗಿಡ ಮರಗಳು ನಾಶವಾಗುವ ಸಾಧ್ಯತೆಯಿದೆ. ಈಗಾಗಲೇ ಹವಾಮಾನ ವೈಪರೀತ್ಯಗಳಿಂದ ಈ ವರ್ಷ ಮಳೆ ಕೊರತೆ ಉಂಟಾಗಿ ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು
ಪರಿಗಣಿಸಲ್ಪಟ್ಟಿದೆ. ಜೊತೆಗೆ ಈ ಘಾಟ್ ಪ್ರದೇಶದಲ್ಲಿ ವಿವಿಧ ಪ್ರಭೇದಗಳ ಕಾಡುಪ್ರಾಣಿಗಳು ವಾಸಿಸುತ್ತಿದ್ದು ಅವುಗಳ ವಾಸಸ್ಥಾನಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ಹೆಸರಿನಲ್ಲಿ ಪೆರಿಯಶಾಂತಿ ,
ಶಿರಾಡಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡ ನಂತರ ಆನೆ ಪಥ ಬದಲಾವಣೆಗೊಂಡು ಕೊಕ್ಕಡ , ಶಿಬಾಜೆ ಭಾಗದಲ್ಲಿ ಕಾಡಾನೆ ದಾಳಿಗಳು ನಡೆದು ಪ್ರಾಣಹಾನಿಗೊಂಡಿದೆ ಎಂದಿರುವ ಶೇಖರ್ ಲಾಯಿಲ ಇದೀಗ ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಅಭಿವೃದ್ಧಿ ಹೆಸರಿನಲ್ಲಿ ಆನೆ ಪಥ ಬದಲಾವಣೆಗೊಂಡು ಆನೆ ದಾಳಿಗಳು ಹೆಚ್ಚಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಪ್ರದೇಶದ ಅಭಿವೃದ್ಧಿ ಅಗತ್ಯವಾದರೂ ವೈಜ್ಞಾನಿಕ ಅಧ್ಯಯನ ಅಗತ್ಯವಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಯೋಚನೆ ಮಾಡಬೇಕು ಎಂದು ಶೇಖರ್ ಎಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















Post Comment