ಡಿ.ಸಿ.ಮನ್ನಾ ಭೂಮಂಜೂರಾತಿಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ : ದ.ಕ.ದಲಿತ ನಾಯಕರಿಗೆ ಕಂದಾಯ ಸಚಿವರ ಭರವಸೆ
ಬೆಳ್ತಂಗಡಿ : ಕಳೆದ 35 ವರ್ಷಗಳಿಂದಲೂ ದ.ಕ. ಜಿಲ್ಲೆಯ ದಲಿತ ಸಂಘಟನೆಗಳು ನಿರಂತರವಾಗಿ ಆಯಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟರಿಗಾಗಿ ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯ ಹಕ್ಕಿಗಾಗಿ ಹೋರಾಟ, ಧರಣಿಗಳನ್ನು ಬಂದಿವೆ. ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರಕಾರದ ಕಂದಾಯ ಸಚಿವರು ಜಿಲ್ಲೆಯ ದಲಿತ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ದಲಿತರ ಡಿ.ಸಿ. ಮನ್ನಾ ಭೂಮಿಯ ಕೂಗಿಗೆ ನ್ಯಾಯ ಒದಗಿಸುವಲ್ಲಿ ಸ್ಪಂದಿಸಿದ್ದಾರೆ ಎಂದು ದ.ಕ. ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಬಿ.ಕೆ.ವಸಂತ್ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ದ.ಕ. ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ಕಾಂಗ್ರೆಸ್ಪ .ಜಾ. ಘಟಕ ಜಂಟಿಯಾಗಿ ಕರೆದ
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳ ಮತ್ತು ಸರಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಡಿ.ಸಿ.ಮನ್ನಾ ಭೂಮಿ ಮಂಜೂರಾತಿಯಾಗದ ಕಾರಣ 2017ನೇ ಇಸವಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ದಲಿತಪರ ಸಂಘಟನೆಗಳು ಅಭಿಪ್ರಾಯ ಭೇದಗಳನ್ನು ಮರೆತು ಜೊತೆಯಾಗಿ ಹೋರಾಟ ರೂಪಿಸುವ ಪ್ರಮುಖ ಉದ್ದೇಶದಿಂದ ‘ದಲಿತ ಸಂಘಟನೆಗಳ ಸಮನ್ವಯ ಸಮಿತಿ’ ರಚಿಸಿಕೊಂಡು ದ.ಕ. ಜಿಲ್ಲಾ ಕೇಂದ್ರದಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಬೃಹತ್ ಭೂಹೋರಾಟ ಆಯೋಜಿದ್ದೆವು,
ಈ ಹಿನ್ನಲೆಯಲ್ಲಿ ದಲಿತ ಸಮುದಾಯದ ಡಿಸಿ ಮನ್ನಾ ಭೂಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು 2023ನೇ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಡಿಸಿ ಮನ್ನಾ ಭೂಮಿ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಹೇಳಿಕೊಂಡಿತ್ತು. ಆದರೆ
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದರೂ ಡಿಸಿ ಮನ್ನಾ ಜಮೀನಿನ ಸಮಸ್ಯೆಯನ್ನು ಇತ್ಯರ್ಥ ಪಡಿಸದೆ
ಇದ್ದಾಗ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ಮತ್ತು ಕಾಂಗ್ರೆಸ್ ಪ.ಜಾತಿ ಘಟಕದ ಪದಾಧಿಕಾರಿಗಳು ಸರಕಾರದ ಸಚಿವರಲ್ಲಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅತೀ ಶೀಘ್ರವಾಗಿ ಡಿಸಿ ಮನ್ನಾ ಜಮೀನು ಹಂಚಿಕೆ ಬಗ್ಗೆ ಕೂಡಲೇ ಗಮನಹರಿಸುವಂತೆ ಒತ್ತಡ ಹಾಕಲಾಗಿತ್ತು
ಎಂದರು.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿ.ಸಿ. ಮನ್ನಾ ಭೂಮಿಯ ಬಗ್ಗೆ ನಿರ್ಣಯ ಕೈಗೆತ್ತಿಗೊಳ್ಳಲಾಗುವುದೆಂಬ ಭರವಸೆ ನೀಡಲಾಗಿತ್ತು,
ಆದರೆ ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲೂ ಡಿ.ಸಿ. ಮನ್ನಾ ಭೂಮಿ ಹಂಚಿಕೆ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ಈ ಬಗ್ಗೆ ದಲಿತ ಮುಖಂಡರ ನಿಯೋಗ ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ,
ಮಾತ್ರವಲ್ಲದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಲ್ಲಿ “ನಮ್ಮ ಡಿಸಿ ಮನ್ನಾ ಜಮೀನು ಸಮಸ್ಯೆ ಇತ್ಯರ್ಥವಾಗದೆ ವಿಳಂಬವಾಗುತ್ತಿರುವ ಬಗ್ಗೆ ಮನವರಿಕೆ ಮಾಡಿದ್ದು ಈ ಎಲ್ಲಾ ನಾಯಕರು ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರಾದ ಡಿ. ಕೆ. ಶಿವಕುಮಾರ್ ಅವರಿಗೆ ಡಿ.ಸಿ.ಮನ್ನಾ ಜಮೀನಿನ ವಿಚಾರವನ್ನು ಇತ್ಯರ್ಥ ಪಡಿಸುವಂತೆ ವಿನಂತಿಸಿಕೊಂಡಿದ್ದರು,
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ದಲಿತ ಸಮುದಾಯದ ಮುಖಂಡರ ಸಮಕ್ಷಮ ಚರ್ಚಿಸಿ ಶೀಘ್ರವಾಗಿ ಪರಿಹಾರ ಮಾಡುವಂತೆ ಕಂದಾಯ ಸಚಿವರೂ ಉಪಮುಖ್ಯಮಂತ್ರಿಗಳೂ ಆಗಿರುವ ಡಾ| ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದರು ಎಂದು ಬಿ.ಕೆ.ವಸಂತ್ ವಿವರಿಸಿದರು.
ಇದರ ಬೆನ್ನಲ್ಲೇ ಅಕ್ಟೋಬರ್ 1-2026ರಂದು ದ.ಕ. ಜಿಲ್ಲೆಯ ಪರಿಶಿಷ್ಟ ಜಾತಿಯ ಮುಖಂಡರನ್ನು ವಿಧಾನಸೌಧದ ಕಛೇರಿಗೆ ಕರೆದು ಡಿಸಿ ಮನ್ನಾ ಜಮೀನಿನ ವಿವರಗಳನ್ನು ಪಡೆದು ನಮ್ಮ ಜೊತೆಗೆ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಮಹತ್ವದ ಸಭೆ ನಡೆಸಿ ಚರ್ಚಿಸಿದರು ಎಂದು ತಿಳಿಸಿದರು.
ಈ ಸಂದರ್ಭ ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಕೆಲವೊಂದು ಕಾನೂನು ತೊಡಕುಗಳು ಇರುವುದನ್ನು ಮನಗಂಡ ಸಚಿವರು ಕಾನೂನು ತೊಡಕುಗಳನ್ನು ಬಗೆಹರಿಸಿಕೊಂಡು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಜಮೀನು ಮಂಜೂರಾತಿಗೆ ಸಚಿವ ಸಂಪುಟದ ಅನುಮೋದನೆ ಪಡೆದು ಭೂಮಂಜೂರಾತಿಗೆ ಆದೇಶ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಬಿ.ಕೆ.ವಸಂತ್ ತಿಳಿಸಿದರು.
ಅಲ್ಲದೇ ಮಂಗಳೂರಿಗೆ ತಾನೇ ಖುದ್ದಾಗಿ ಬಂದು ಭೂರಹಿತ ದಲಿತರಿಗೆ ಭೂಮಂಜೂರಾತಿಯ ಹಕ್ಕುಪತ್ರವನ್ನು ವಿತರಣೆ ಮಾಡುತ್ತೇನೆ ಎಂದು ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ಎಕ್ರೆ ಡಿ.ಸಿ.ಮನ್ನಾ ಭೂಮಿ ಇದೆ ಎಂಬ ಅಂಕಿ ಅಂಶ ಮಾಹಿತಿಗಳು ನಮ್ಮಲ್ಲಿದೆ, ಆದರೆ ಕಂದಾಯ ಇಲಾಖಾದಿಕಾರಿಗಳು ಬೆರಳೆಣಿಕೆಯಷ್ಟು ಎಕ್ರೆ ಭೂಮಿ ಇದೆ ಎಂದೂ ಮಾಹಿತಿ , ದಾಖಲೆಗಳನ್ನು ಕೊಡುತ್ತಿದ್ದಾರೆ, ಕೆಲವು ಗ್ರಾಮಗಳಲ್ಲಿ ಗ್ರಾಮಕರಣಿಕರು ಅಥವಾ ಮೇಲಾಧಿಕಾರಿಗಳು ಡಿ.ಸಿ. ಮನ್ನಾ ಭೂಮಿ ಲಭ್ಯವಿಲ್ಲ ಎಂಬ ಮಾಹಿತಿಯುಳ್ಳ
ಅಂಕಿ ಅಂಶಗಳನ್ನು ಕೊಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಮಟ್ಟದ ಅಧಿಕಾರಿಗಳು
ಮರುಪರಿಶೀಲನೆ ನಡೆಸಿ ಲಭ್ಯ ಡಿ.ಸಿ.ಮನ್ನಾ ಭೂಮಿಯ ಸರಿಯಾದ ಅಂಕಿ ಅಂಶ, ಮಾಹಿತಿಗಳನ್ನು ಸಂಗ್ರಹಿಸಿ ಕಂದಾಯ ಇಲಾಖಾ ಉನ್ನತ ಮಟ್ಟದ ಅಧಿಕಾರಿಗಳ ಸಚಿವಾಲಯಕ್ಕೆ ತಲುಪಿಸಬೇಕೆಂದು ಬಿ.ಕೆ. ವಸಂತ್ ಮನವಿ ಮಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಜಿಲ್ಲಾ ಕಾಂಗ್ರೆಸ್‌ನ ಪ.ಜಾತಿ ಘಟಕದ ಸಭೆ ಕರೆದು
ಡಿಸಿ ಮನ್ನಾ ಜಮೀನಿನ ತಾಂತ್ರಿಕ ಸಮಸ್ಯೆ ಇರುವುದರಿಂದ ಮಂಗಳೂರು ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಇತ್ಯರ್ಥ ಆಗಿಲ್ಲ. ಕಂದಾಯ ಸಚಿವರಲ್ಲಿ ಮುಖ್ಯಮಂತ್ರಿಯವರಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಮುಂದಿನ ಸಚಿವ ಸಂಪುಟದಲ್ಲಿ ಡಿಸಿ ಮನ್ನಾ ಭೂಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಂದಾಯ ಸಚಿವರು ಡಿಸಿ ಮನ್ನಾ ಹಂಚಿಕೆ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಆದೇಶ ನೀಡುವುದಾಗಿ ಭರವಸೆ ನೀಡಲು ಮೂಲ ಕಾರಣಕರ್ತರಾದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ, ಮೆಸ್ಕಾಂ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಹಾಗೂ ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ, ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಮುಂತಾದ ನಾಯಕರಿಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಗ್ರಾಮೀಣ ಕಾಂಗ್ರೆಸ್ ಎಸ್ಸಿ ಘಟಕದ ಪರವಾಗಿ ಬಿ.ಕೆ.ವಸಂತ್ ಪತ್ರಿಕಾ ಗೋಷ್ಠಿಯಲ್ಲಿ
ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ದಲಿತ ಮುಖಂಡರ ಒತ್ತಾಯಗಳು:
80ರ ದಶಕದಿಂದಲೂ ದಲಿತರ ಭೂಹೋರಾಟಗಳು ನಡೆಯತ್ತಾ ಬಂದಿವೆ: ಚೆನ್ನಕೇಶವ, ಸಂಚಾಲಕರು, ದ.ಸಂ. ಸಮನ್ವಯ ಸಮಿತಿ ದ.ಕ.
ಬಂಗಾರಪ್ಪರವರ ಸರಕಾರದ ಅವಧಿಯಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ “ಹೆಂಡ ಬೇಡ, ಭೂಮಿ ಬೇಕು”ಎಂಬ ಘೋಷಣೆಯೊಂದಿಗೆ ಭೂಹೋರಾಟಗಳು ಆರಂಭಗೊಂಡಿತ್ತು.: ಎಸ್. ಬೇಬಿ ಸುವರ್ಣ. ತಾಲೂಕು ಕೆ.ಡಿ.ಪಿ.ಸದಸ್ಯರು.
ದಲಿತೇತರರು ಅತಿಕ್ರಮಿಸಿ ಕೃಷಿ ಮಾಡದೆ ಖಾಲಿ ಬಿಟ್ಟಿರುವ ಡಿ.ಸಿ.ಮನ್ನಾ ಭೂಮಿಯನ್ನು ಪರಿಶೀಲನೆ ನಡೆಸಿ ಕಂದಾಯ ಇಲಾಖೆ ಸ್ವಾಧೀನಪಡಿಸಿಕೊಂಡು ದಲಿತರಿಗೆ ಹಂಚಿಕೆ ಮಾಡಲಿ:
ವೆಂಕಣ್ಣ ಕೊಯ್ಯೂರು. ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು.
ಡಿ.ಸಿ.ಮನ್ನಾ ಭೂಮಿಯಲ್ಲಿ ಕೆ.ಸಿ.ಡಿ.ಸಿ ಮತ್ತು ಅರಣ್ಯ ಇಲಾಖೆ ನೆಡುತೋಪುಗಳನ್ನು ಮಾಡಿದೆ. ಸಂಬಂಧಪಟ್ಟ ಇಲಾಖೆಗಳು ದಲಿತರ ಭೂಮಿ ಕಬಳಿಸುವ ಬದಲು ಪರ್ಯಾಯ ಭೂಮಿ ಒದಗಿಸಬೇಕು ಸರಕಾರಕ್ಕೆ ಇದು ನಮ್ಮ ಒತ್ತಾಯ. ಕೆ.ನೇಮಿರಾಜ್ ಕಿಲ್ಲೂರು. ಅಧ್ಯಕ್ಷರು, ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಪ.ಜಾ. ಘಟಕ ಬೆಳ್ತಂಗಡಿ.
57 ಮತ್ತು 53 ರಲ್ಲಿ ಅರ್ಜಿ ನೀಡಿ ಸ್ವಾಧೀನದಲ್ಲಿದ್ದು ಕೃಷಿ ಮಾಡದೆ ಖಾಲಿ ಇರುವ ಡಿ.ಸಿ.ಮನ್ನಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಂಚಬೇಕೆಂದು ನಾವು ಒತ್ತಾಯಿಸುತ್ತೇವೆ.: ಶ್ರೀಧರ ಕಳೆಂಜ. ನಾಮನಿರ್ದೇಶನ ಸದಸ್ಯರು, ಅಕ್ರಮ ಸಕ್ರಮ
ಇದುವರೆಗೂ ಹಂಚಲಾಗಿರುವ ಡಿ.ಸಿ.ಮನ್ನಾ ಭೂಮಿಯನ್ನು ದಲಿತರಿಗೆ ಹಂಚಲಾಗಿದೆಯೋ ಇತರರಿಗೆ ಹಂಚಲಾಗಿದೆಯೋ ಎಂಬುದನ್ನು ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಸ್ಪಷ್ಟಪಡಿಸಿಕೊಳ್ಳಬೇಕು: ಎಸ್. ಪ್ರಭಾಕರ ಶಾಂತಿಕೋಡಿ.
ಜಿಲ್ಲಾ ಕಾರ್ಯದರ್ಶಿಕಾಂಗ್ರೆಸ್ ಪ.ಜಾ. ಘಟಕ
ಪತ್ರಿಕಾ ಗೋಷ್ಠಿಯಲ್ಲಿ ಸಮನ್ವಯ ಸಮಿತಿ ಸದಸ್ಯ ರಮೇಶ್ ಆರ್, ಕಾಂಗ್ರೆಸ್ ಪ.ಜಾ. ಘಟಕ ಸದಸ್ಯ ಮಾಧವ ಶಿಶಿಲ, ಕಾಂಗ್ರೆಸ್ ಜಿಲ್ಲಾ ಪ.ಜಾ. ಘಟಕ
ಮಾಧ್ಯಮ ವಕ್ತಾರ ಜಗನ್ನಾಥ ಲಾಯಿಲಾ, ಪ.ಜಾ. ಘಟಕ ಸದಸ್ಯ ನಾರಾಯಣ ಪುದುವೆಟ್ಟು ಉಪಸ್ಥಿತರಿದ್ದರು.














Post Comment