ಬಿಜೆಪಿ- ಕಾಂಗ್ರೆಸ್ ಸರಕಾರಗಳ ದುರಾಡಳಿತದಿಂದ ಜನರು ನಿರಾಶರಾಗಿದ್ದಾರೆ : ಗೋಪಾಲ್ ಮುತ್ತೂರು
ಬೆಳ್ತಂಗಡಿ : ಬಿಜೆಪಿಯ ಆಳ್ವಿಕೆಯಲ್ಲಿ ದೇಶದ ಬಹುಜನರು ಆತಂಕದಲ್ಲಿದ್ದು ಬಿಜೆಪಿಯ ಸರಕಾರ ರಚಿಸಿದಾಗಲೆಲ್ಲ ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ,.2000 ಇಸವಿಯಲ್ಲೂ ಸಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ ಬಿಜೆಪಿ ಪಕ್ಷದ ವಿರುದ್ಧ ಬಿ.ಎಸ್.ಪಿ ನಡೆಸಿದ್ದ ದೇಶವ್ಯಾಪಿ ಹೋರಾಟದ ಪರಿಣಾಮ ಅಂದಿನ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಬಿಜೆಪಿ ನಾಯಕರ ಸಂವಿಧಾನ ವಿರೋಧಿ, ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣದ ವಿರುದ್ಧ ಬಿ.ಎಸ್.ಪಿ.ಯು ಹೋರಾಡುತ್ತಾ ಬಂದಿದೆ ಎಂದು ಬಿ.ಎಸ್.ಪಿ. ದ.ಕ. ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಹೇಳಿದರು.
ಅವರು ಮಾ 30ರಂದು ಬೆಳ್ತಂಗಡಿ ಸುವರ್ಮ ಆರ್ಕೇಡ್ ನ ಸಪ್ತವರ್ಣ ಮಿನಿ ಹಾಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಗೋಪಾಲ್ ಮುತ್ತೂರು ,ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರ ಮೀಸಲಾತಿ ತೆಗೆಯುವ ಕೆಲಸ ಮಾಡುತ್ತಿದ್ದು ಬಹುಮುಖ್ಯವಾಗಿ ಪ.ಜಾತಿ, ಪ.ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ನೌಕರರ ಸಂಖ್ಯೆ ಕಡಿತ ಗೊಳಿಸುತ್ತಿದ್ದಾರೆ. ಕೇಂದ್ರ ಸರಕಾರಿ ಹುದ್ದೆಗಳಲ್ಲಿ 2.38ಲಕ್ಷ ಇದ್ದ ಓಬಿಸಿಗಳು ಈಗ 1.84 ಲಕ್ಷಕ್ಕೆ ಇಳಿದಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಮೀಸಲಾತಿ ರದ್ದುಗೊಳಿಸಲಾಗುತ್ತಿದೆ.
ಪ್ರತೀ ವರ್ಷ 2ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು 2014ರಲ್ಲಿ ನೀಡಲಾಗಿತ್ತು. ಆದರೆ ಇಲ್ಲಿಯ ತನಕ 20 ಕೋಟಿ ಉದ್ಯೋಗಗಳು ಸಿಗಬೇಕಾಗಿತ್ತು. ಆದರೆ ಹಾಲಿ ಇದ್ದ ಲಕ್ಷಾಂತರ ಕಂಪನಿಗಳನ್ನು ಮುಚ್ಚಿ 4.5ಕೋಟಿ ಉದ್ಯೋಗಗಳನ್ನು ಕಡಿತಗೊಳಿಸಿ ಕಾರ್ಮಿಕರನ್ನು ಬೀದಿಪಾಲು ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಬಿಜೆಪಿಯು ಆಶ್ವಾಸನೆ ನೀಡಿ ಇಲ್ಲಿಯ ತನಕ ಯಾರ ಖಾತೆಗೂ ಒಂದು ಪೈಸೆಯು ಬಂದಿಲ್ಲ.ಅಕ್ರಮ ಹಣ ಹೊರತರಬೇಕೆಂದು ರೂ. 500/- ರೂ.1000/- ನೋಟುಗಳನ್ನು ಬಂದ್ ಮಾಡಿರುವುದಾಗಿ ಹೇಳಲಾಗಿತ್ತು.ಆದರೆ ಯಾವುದೇ ಕಳ್ಳ ಹಣವೂ ಹೊರಬರದೆ ಬಡವರು ಮಾತ್ರ ಕೂಡಿಟ್ಟ ಹಣವನ್ನು ಕಳೆದುಕೊಂಡು ನಿರ್ಗತಿಕರಾದರು. ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಂತು ನರಕ ಯಾತನೆಪಟ್ಟರು ಎಂದ ಅವರು ಕೇಂದ್ರ ಸರಕಾರ ಜಾರಿ ಮಾಡಿದ್ದ ಮೂರು ಕೃಷಿ ವಿರೋಧಿ ಕಾಯಿದೆಗಳ ವಿರುದ್ಧ ಒಂದು ವರ್ಷ ಕಾಲ ಪ್ರತಿಭಟನೆ ನಡೆಸಿದ ನೂರಾರು ರೈತರು ಪ್ರಾಣ ಬಿಟ್ಟರು, ವಾಣಿಜ್ಯ ಬೆಳೆಗಳಾದ ಚಹಾ, ಕಾಫಿ ಒಳಗೊಂಡು ಎಲ್ಲಾ ಅಗತ್ಯವಸ್ತುಗಳ ಮೇಲೆ ಜಿ.ಎಸ್.ಟಿ. ಹಾಕಿ ಬೆಲೆಗಳನ್ನು ಏರಿಸಿದರು. ಇದರಿಂದ ಸಣ್ಣ ಮಟ್ಟ ವ್ಯಾಪಾರಿಗಳು ಪ್ರಾಣ ಕಳೆದುಕೊಂಡರು. ಪ್ರತೀ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು 2014ರಲ್ಲಿ ನೀಡಲಾಗಿತ್ತು ಆದರೆ ಕಂಪನಿಗಳನ್ನು ಮುಚ್ಚಿ ಇದುವರೆಗೆ 4.5ಕೋಟಿ ಉದ್ಯೋಗಿಗಳನ್ನು ಮನೆಗಳಿಗೆ ಕಳಿಸಲಾಗಿದೆ. ಬಿಜೆಪಿಗರ ಈ ದುರಾಡಳಿತವನ್ನು ಖಂಡಿಸಿದವರ ವಿರುದ್ಧ ನಿರ್ದೇಶನಾಲಯಗಳು ದಾಳಿ ಮಾಡಿರುವುದು, ಕೋಮುವಾದಿ ಅಧಿಕಾರಿಗಳಿಗೆ ಭತ್ಯೆ ನೀಡಲಾಯಿತು ಆದಾಯ ತೆರಿಗೆ ಇಲಾಖೆ ನಿಷ್ಠಾವಂತರನ್ನು ಸಸ್ಪೆಂಡ್, ಕಡ್ಡಾಯ ನಿವೃತ್ತಿ ಅಥವಾ ಜೈಲಿಗೆ ಅಟ್ಟಲಾಯಿತು. ಬಿಜೆಪಿ ನೀತಿಗಳ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರು, ಬರಹಗಾರರು, ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಯಿತು ಎಂದು ಅವರು ಪ್ರತಿಪಾದಿಸಿದರು.
ರಾಜ್ಯದಲ್ಲಿ ನೆರೆ ಬಂದಾಗ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿಯೂ ಪ್ರಧಾನಿ ಸೇರಿದಂತೆ ಯಾವ ನಾಯಕರೂ ಬರಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಬರುತ್ತಿದ್ದಾರೆ. ಬಿಜೆಪಿ ಜನರನ್ನು ಮರುಳು ಮಾಡುತ್ತಿದೆ.ಇದನ್ನೆಲ್ಲ ಕಂಡು ಕಾಂಗ್ರೆಸ್ ನಾಯಕರು ದೇಶವು ಸರ್ವಾಧಿಕಾರಿಗಳ ಕೈಗಳಿಗೆ ಹೋಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಿ ಎಂದು ಭಾಷಣ ಬಿಗಿಯುತ್ತಿದ್ದಾರೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೇ ಸಂವಿಧಾನಕ್ಕೆ ಅತೀ ಹೆಚ್ಚಿನ ತಿದ್ದುಪಡಿಗಳನ್ನು ಕಾಂಗ್ರೆಸ್ ಸರಕಾರ ತಂದಿದೆ. ಇದು ಇವರುಗಳ ಸಂವಿಧಾನ ಪ್ರೇಮವನ್ನು ತೋರಿಸುತ್ತದೆ. ಖಾಸಗೀಕರಣಕ್ಕೆ ಮೊದಲಿಗೆ ಚಾಲನೆ ನೀಡಿದವರು ಇದೇ ಕಾಂಗ್ರೆಸ್, ಇಂದಿಗೂ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಕ್ರಮೇಣ ರದ್ದು ಮಾಡುತ್ತಿದೆ. ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) / ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ ಎರಡು ಆಯೋಗಗಳ ವರದಿಯನ್ನು ತಿಪ್ಪಗೆಸೆದ ಅಪಕೀರ್ತಿಯು ಕಾಂಗ್ರೆಸ್‌ಗೆ ಸಲ್ಲಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್.ಸಿ./ಎಸ್.ಟಿ/ಮುಸ್ಲಿಂ ಓಟುಗಳನ್ನು ಪಡೆದು ಕರ್ನಾಟಕದಲ್ಲಿ ಸರಕಾರ. ರಚಿಸಿದ ಕಾಂಗ್ರೆಸ್ ಮಾಡಿದ್ದೇನು? ಎಸ್.ಸಿ., ಎಸ್.ಟಿ ಮೇಲೆ ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಶಿಕ್ಷೆಯ ಪ್ರಮಾಣ ಕೇವಲ 4% ಮಾತ್ರ ಇದೆ.ಕಾಂಗ್ರೆಸ್ ಸರಕಾರಕ್ಕೆ ದಲಿತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಇದು ತೋರಿಸುತ್ತದೆ ಎಂದು ಗೋಪಾಲ್ ಟೀಕಿಸಿದರು.
ಪರಿಶಿಷ್ಟರ ಅಭಿವೃದ್ಧಿಗಾಗಿ ಎಸ್.ಸಿ.ಎಸ್.ಪಿ/ಎಸ್ಟಿಪಿ ಯೋಜನೆ ಅಡಿಯಲ್ಲಿ 2023- 24ರಲ್ಲಿ ಬಜೆಟ್‌ನಲ್ಲಿ ನೀಡಿದ್ದ ರೂ. 39.000/- ಕೋಟಿ ರೂಪಾಯಿಗಳಲ್ಲಿ ರೂ. 11,000/- ಕೋಟಿ ರೂಪಾಯಿಗಳನ್ನು ಇತರ ಗ್ಯಾರಂಟಿ ಖರ್ಚುಗಳಿಗೆ ವರ್ಗಾಯಿಸಲಾಗಿದೆ. ಇಲ್ಲಿಯ ಕನ್ನಕ್ಕೆ ಸುಮಾರು ಮತ್ತು ಒಂದು ಲಕ್ಷಷ ಕೋಟಿ ಹಣವನ್ನು ವರ್ಗಾಯಿಸಿ ದುರ್ಬಳಕೆ ಮಾಡಲಾಗಿದೆ. ಕಾಂಗ್ರೆಸ್ ಪರಿಶಿಷ್ಟರಿಗೆ ಮೋಸ ಮಾಡುತ್ತಿದೆ. ಕಳೆದ 10 ತಿಂಗಳಲ್ಲಿ ಕರ್ನಾಟಕದಲ್ಲಿ 649 ರೈತರು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜ್ಯದಲ್ಲಿ 25ಲಕ್ಷ ಎಕರೆ ತುಂಡು ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸುವ ಆಶ್ವಾಸನೆ ನೀಡಲಾಗಿತ್ತು. ಆದರೆ ಕಳೆದ 40 ವರ್ಷಗಳಲ್ಲಿ ಇದರ ಲಾಭವನ್ನು ಭೂಮಾಲಿಕರು ಹಾಗೂ ಭೂಮಾಫಿಯದವರು ಪಡೆದುಕೊಂಡು, ನಿಜವಾದ ಫಲಾನುಭವಿಗಳ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 10 ಲಕ್ಷ ಮನೆಗಳಿಗೆ 94ಸಿ ಮತ್ತು 94ಸಿಸಿ ಅನ್ವಯ ಹಕ್ಕು ಪತ್ರ ನೀಡಲಿಲ್ಲ. ಎಸ್.ಸಿ./ಎಸ್.ಟಿ/ಓಬಿಸಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಗಳಿಲ್ಲ. ಸಂವಿಧಾನ ರಕ್ಷಣೆ ಮಾಡುವುದಾಗಿ ಇತ್ತೀಚೆಗೆ ಜಾಥಾ ಸಮಾವೇಶಗಳನ್ನು ನಡೆಸಿ ಎಸ್ಸಿ/ಎಸ್‌ಟಿಗಳಿಗೆ ಮೀಸಲಾದ ಹಣವನ್ನು ಖಾಲಿ ಮಾಡುತ್ತಿರುವ ಕಾಂಗ್ರೆಸ್ ಸರಕಾರ, ಸಂವಿಧಾನವು ಕೇವಲ ಎಸ್.ಎಸ್. ಟಿಗೆ ಸಂಬಂಧಪಟ್ಟಿದ್ದು ಎಂಬ ತಪ್ಪು ಸಂದೇಶ ನೀಡುತ್ತಿರುವುದು ಒಪ್ಪುವಂಥದ್ದಲ್ಲ.
ಸಂವಿಧಾನ ಜಾರಿ ಎಂದರೆ ಕೇವಲ ಗ್ಯಾರಂಟಿಗಳನ್ನು ನೀಡುವುದಲ್ಲ.ಇಂತಹ ಗ್ಯಾರಂಟಿಗಳು ಕಾಂಗ್ರೆಸ್ ಸರಕಾರದ ತಾತ್ಕಾಲಿಕ ಪರಿಹಾರಗಳಷ್ಟೆ ಈ ದೇಶದ ಸಂಪತ್ತಿನಲ್ಲಿ ಪ.ಜಾತಿ/ಪ.ಪಂಗಡಗಳಿಗೆ ದೊರೆಯಬೇಕಾದ ನ್ಯಾಯಯುತವಾದ ಪಾಲಿನಲ್ಲಿ ಕೇವಲ ಶೇ. 2ರಷ್ಟು ಮಾತ್ರ ಗ್ಯಾರಂಟಿಗಳಿಗೆ ಖರ್ಚಾಗುತ್ತಿದೆ.
ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಿಗಬೇಕಾದರೆ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳು ಯಥಾವತ್ತಾಗಿ ಜಾರಿಯಾಗಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿ ಕಾಂತಪ್ಪ ಅಲಂಗಾರ್ ದ.ಕ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಈ ಪ್ರಯುಕ್ತ ತುಳುನಾಡಿನ ಮತದಾರರು ಬಿ.ಎಸ್.ಪಿ.ಯ ಆನೆ ಚಿಹ್ನೆಗೆ ಮತ ನೀಡಿ ಬಿ.ಎಸ್.ಪಿ.ಯನ್ನು ಬೆಂಬಲಿಸಬೇಕು ಎಂದು ಗೋಪಾಲ್ ಮುತ್ತೂರು
ಕರೆ ನೀಡಿದರು. ಆಭ್ಯರ್ಥಿ ಕಾಂತಪ್ಪ ಆಲಂಗಾರ್ ಮಾತನಾಡಿ ತಮ್ಮ 4 ದಶಕಗಳ ಸಾಮಾಜಿಕ ಸಂಘಟನೆಗಳ ಸೇವೆ, ಬಹುಜನ ಸಮಾಜ ಚಳುವಳಿಯ ಅನುಭವಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು.ಬಿ.ಎಸ್.ಪಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್. ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗರ್ಡಾಡಿ ವಂದಿಸಿದರು.
Post Comment