ಸತ್ಯ, ಧರ್ಮ, ನ್ಯಾಯಕ್ಕಾಗಿ ಸೌಜನ್ಯಪರ ‘ನೋಟಾ’ ! ಹೋರಾಟಗಾರರಿಂದ ರಾಜಕಾರಣಿಗಳು ಕಲಿಯಲಿದ್ದಾರೆಯೇ ಚಾರಿತ್ರಿಕ ಪಾಠ?
ಬೆಳ್ತಂಗಡಿ : ಈ ಭಾರಿಯ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ಸೌಜನ್ಯ ಪರ ಹೋರಾಟಗಾರರ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ. ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನ್ಯಾಯಕ್ಕಾಗಿ 12 ವರ್ಷಗಳಿಂದ ಹೋರಾಡುತ್ತಾ ಬಂದಿದ್ದರೂ ಈ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಂದ, ಸರಕಾರಗಳಿಂದ ಸ್ಪಂದನೆ ಸಿಗದ ಕಾರಣ ಮನನೊಂದ ಜನಸಾಮಾನ್ಯರಾದ ನಾವು ರಾಜ್ಯದಾದ್ಯಂತ ನೋಟಾ ಆಭಿಯಾನವನ್ನು ಕೈಗೊಂಡಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಘೋಷಿಸಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣದ ಮರುತನಿಖೆ ಕುರಿತು ಕರ್ನಾಟಕ ಮಾನ್ಯ ಉಚ್ಛ ನ್ಯಾಯಾಲಯವು ಈಗ ದೇಶದ ಉನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ ಗೆ ತುರ್ತು ನೋಟೀಸ್ ಜಾರಿ ಮಾಡಿ ಸಿ.ಬಿ.ಐ.ಯ ಅಭಿಪ್ರಾಯ ಕೇಳಿದೆ. ಸಿ.ಬಿ.ಐ ತನಿಖಾ ಸಂಸ್ಥೆಯು ಕೇಂದ್ರ ಗೃಹ ಇಲಾಖೆ ಮತ್ತು ನೇರವಾಗಿ ದೇಶದ ಪ್ರಧಾನಿ ಕಛೇರಿಯ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ, ಹೀಗಾಗಿ ಕರಾವಳಿ ಜಿಲ್ಲೆಗಳ ಬಿ.ಜೆ.ಪಿ ಹಿಂದೂ ನಾಯಕರುಗಳು ಮೋದೀಜಿ ಮನವೊಲಿಸಿ ಏಪ್ರಿಲ್ 14ರ 2024 ನೇ ಆದಿತ್ಯವಾರದಂದು ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿ.ಬಿ.ಐ ಸಂಸ್ಥೆಯಿಂದ ಪ್ರಕರಣದ ಮರುತನಿಖೆಯ ಅಭಿಪ್ರಾಯವನ್ನು ತಿಳಿಸಲು ಲಿಖಿತ ಆದೇಶ ಮಾಡಲು ಪತ್ರಿಕೆಯ ಮುಖಾಂತರ ಕೋರಿದ್ದರೂ ಕೂಡ ತೀರ್ಮಾನ ಕೈಗೊಳ್ಳದೇ ಇರುವುದು ಅತ್ಯಂತ ಖೇದಕರವಾಗಿದೆ ಎಂದರು.
ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆಗೂ ಮೊದಲು ನಡೆದ ಆನೆ ಮಾವುತ ನಾರಾಯಣ, ಯಮುನಾ (ಅಣ್ಣ, ತಂಗಿ ) ಜೋಡಿ ಕೊಲೆ, ವೇದವಲ್ಲಿ, ಪದ್ಮಲತಾ ಕೊಲೆಗಳು ಹಾಗೂ ದಾಖಲಾಗದ ಅನೇಕ ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ- ಕೊಲೆ ಪ್ರಕರಣಗಳ ವಿಶೇಷ ತನಿಖೆಗಾಗಿ ಪ್ರದಾನಿ ಮೋದಿಜಿ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಿ.ಬಿ.ಐ ಗೆ ಲಿಖಿತ ಆದೇಶ ನೀಡಲು ಕರಾವಳಿಯ ಪ್ರಖರ ಹಿಂದೂ ಬಿ.ಜೆ.ಪಿ ನಾಯಕರುಗಳು ಒತ್ತಾಯಿಸದಿರಲು ಕಾರಣವೇನು? ಎಂದು ಪ್ರಶ್ನಿಸಿದ ಮಹೇಶ್ ಶೆಟ್ಟಿ ಆರ್.ಬಿ.ಐ ನಿಯಮ, ಬ್ಯಾಂಕಿಂಗ್ ವ್ಯವಸ್ಥೆ ಲೇವಾದೇವಿ ಕಾನೂನನ್ನು ಗಾಳಿಗೆ ತೂರಿ ಪವಿತ್ರ ಹಿಂದೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲದ ಹೆಸರು ದುರ್ಬಳಕೆ ಮಾಡಿಕೊಂಡ ಸಾವಿರಾರು ಕೋಟಿ ರೂಪಾಯಿಯ ರಾಜ್ಯಾದ್ಯಂತ ಅಕ್ರಮ ಬಡ್ಡಿ ದಂಧೆ ನಡೆಸುತ್ತಿದ್ದು ಪ್ರತೀ ವಾರ ಸಂಘದ ಆಮಾಯಕ ಸದಸ್ಯರ ಮನೆಗೆ ನುಗ್ಗಿ ಚಿತ್ರಹಿಂಸೆ ಕೊಡುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಬಡ್ಡಿ ದಂಧೆಯ ಅಕ್ರಮಗಳನ್ನು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯವು ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರದ ಪ್ರಧಾನ ಮಂತ್ರಿ ಲಿಖಿತವಾಗಿ ಒಪ್ಪಿಸಬೇಕು ಎಂದು ಮನವಿ ನೀಡಿದ್ದರೂ ಕೂಡ ಉಭಯ ಜಿಲ್ಲೆಗಳ ಕಾಂಗ್ರೆಸ್ ಮತ್ತು ಬಿ.ಜೆ.ಪಿ ನಾಯಕರುಗಳು ಈ ಬಗ್ಗೆ ಮೌನವಹಿಸಲು ಕಾರಣವೇನು ಎಂದರು.
ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣವೂ ಸೇರಿದಂತೆ ನಮ್ಮ ಪ್ರಮುಖ ಬೇಡಿಕೆ ಮತ್ತು ನಾವು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ನೇರಾವಾಗಿ ಕಾರಣೀಕರ್ತರಾದ, ಜನರ ಸಮಸ್ಯೆಗೆ ಸ್ಪಂದಿಸದ ಬಿ.ಜೆ.ಪಿ ರಾಜ್ಯಸಭಾ ಸದಸ್ಯರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಪಡೆಯಬೇಕು ಮತ್ತು ರಾಜೀನಾಮೆಯನ್ನು ಕೇಳುವಂತೆ ಕಾಂಗ್ರೆಸ್ ನಾಯಕರುಗಳು ಒತ್ತಾಯಿಸಬೇಕು ಎಂಬ ಮನವಿ ನೀಡಿದ್ದರೂ ಈ ಬಗ್ಗೆ ಸ್ಪಂದಿಸಿಲ್ಲ ; ಇದಕ್ಕೆಲ್ಲ ಕಾರಣವೇನು? ಎಂದು ಪ್ರಶ್ನಿಸಿದರು.
ಇದುವರೆಗೂ ಹೋರಾಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸಿ ಸೌಜನ್ಯ ಕುಟುಂಬದವರ, ಹೋರಾಟಗಾರರ ಭಾವನೆಗಳ ಮೇಲೆ ಚೆಲ್ಲಾಟವಾಡುತ್ತಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳಿಂದ ಮನನೊಂದಿರುವ ಮತದಾರರಾದ ನಾವು ರಾಜ್ಯದಾದ್ಯಂತ ನೋಟಾ ಆಭಿಯಾನವನ್ನು ಕೈಗೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಧರ್ಮದ ಹಿತಕ್ಕಾಗಿ, ಹೆಣ್ಣು ಮಕ್ಕಳ ಉಳಿವಿಗಾಗಿ, ನ್ಯಾಯ ಪೀಠ, ಧರ್ಮಪೀಠದ ಉಳಿವಿಗಾಗಿ ರಾಜ್ಯಾದಾದ್ಯಂತ ಸೌಜನ್ಯಪರ ಹೋರಾಟಗಾರರು, ಪ್ರಜ್ಞಾವಂತ ಮತದಾರರು ಮಹತ್ವದ ಅವಕಾಶವಾಗಿರುವ ನೋಟಾಕ್ಕೆ ಮತ ನೀಡುವುದರ ಮೂಲಕ ಕೈಜೋಡಿಸಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರತಿಪಾದಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ಅನಿಲ್ ಅಂತರ ಮುಂತಾದವರು ಧ್ವನಿಗೂಡಿಸಿದರು.
Post Comment