ಮಾಜಿ ಶಾಸಕ, ಜನಪ್ರಿಯ ರಾಜಕಾರಣಿ ಕೆ.ವಸಂತ ಬಂಗೇರ ಆಸ್ಪತ್ರೆಯಲ್ಲಿ ನಿಧನ: ಬೆಳ್ತಂಗಡಿ ರಾಜಕೀಯದಲ್ಲಿ ಮುಗಿದು ಹೋದ ‘ವಸಂತ’ ಕಾಲ.!
ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ತಾಲೂಕಿನ ಹಿರಿಯ ರಾಜಕಾರಣಿ, ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಕೆ. ವಸಂತ ಬಂಗೇರ (79ವ) ಅವರು ಅನಾರೋಗ್ಯದಿಂದ ಬಳಲಿ ಬುಧವಾರ ಮೇ 8ರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪ್ರತಿಷ್ಠಿತ ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಬಂಗೇರ ಅವರು15 ಜನವರಿ 1946ರಂದು ಜನಿಸಿದ್ದರು. ಕೆ. ವಸಂತ ಬಂಗೇರ ಅವರು ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್. ಎಸ್. ಎಲ್. ಸಿ. ಮತ್ತು ಮುಲ್ಕಿ ಹಾಗೂ ಉಜಿರೆಯ ಎಸ್. ಡಿ.ಎಂ. ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದು 1962 ರಲ್ಲಿ ಪಿ.ಯು.ಸಿ ವ್ಯಾಸಂಗ ಮುಗಿಸಿದ್ದರು. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1983ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ 5 ಭಾರಿ ಶಾಸಕರಾಗಿ ಆಯ್ಕೆಯಾಗಿ ಜನಪ್ರಿಯ ರಾಜಕಾರಣಿಯಾಗಿ ಬೆಳ್ತಂಗಡಿ ರಾಜಕೀಯ ವಲಯದಲ್ಲಿ ತಮ್ಮದೇ ವಿಶಿಷ್ಠ ರಾಜಕೀಯ ಮುದ್ರೆ ಒತ್ತಿದವರು. ಅವರು ಪತ್ನಿ, ಮಕ್ಕಳು , ಕುಟುಂಬ ಹಾಗೂ ಅಪಾರ ಬಂಧು, ಅಭಿಮಾನಿಗಳನ್ನು ಅಗಲಿದರು.
Post Comment