ಬಣಕಲ್ ಬಳಿ ಭೀಕರ ಅಪಘಾತ: ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಬಣಕಲ್ : ಮೆಸ್ಕಾಂ ಇಲಾಖಾ ಲಾರಿಗೆ ಓಮ್ಮಿ ಮತ್ತು ಆಲ್ಟೋ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಓಮ್ಮಿ ಮತ್ತು ಆಲ್ಟೋ ಕಾರು ಹಾಗೂ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಯ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರವಾಸಿಗರಾದ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರಿನ ಚೆನ್ನಪಟ್ಟಣದ ನಿವಾಸಿಗಳಾದ ಒಂದೇ ಕುಟುಂಬದ ಹಂಪಯ್ಯ 65, ಪ್ರೇಮ 58, ಮಂಜಯ್ಯ 60, ಪ್ರಭಾಕರ್ 45 ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಎಲ್ಲರೂ ಒಂದೇ ಕುಟುಂಬದ ಸದಸ್ಯರು ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದರು ಎಂದು ಗೊತ್ತಾಗಿದೆ. ಕೊಟ್ಟಿಗೆಹಾರ -ಬಣಕಲ್ ಮಧ್ಯೆ ವಾಹನವೊಂದನ್ನು ಓವರ್ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ ಮೆಸ್ಕಾಂ ಇಲಾಖೆಯ ಲಾರಿಗೆ ಓಮ್ನಿ ಕಾರು ಡಿಕ್ಕಿ ಹೊಡೆದಿದ್ದು ಇನ್ನೊಂದೆಡೆ ಹಿಂಬಾಲಿಸಿ ಬರುತ್ತಿದ್ದ ಅದೇ ಕುಟುಂಬದ ಆಲ್ಟೋ ಕಾರು ಓಮ್ನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ಓಮ್ನಿ ಕಾರಲ್ಲಿದ್ದ ಮೂವರು ಪುರುಷರು ಮತ್ತು ಓರ್ವ ಮಹಿಳೆ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment