ಶಾಸಕ ಹರೀಶ್ ಪೂಂಜ ವಿರುದ್ಧದ ಸರಣಿ ಪ್ರಕರಣ: ಎರಡು ಕೇಸುಗಳ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
ಬೆಳ್ತಂಗಡಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೌಡಿ ಶೀಟರ್, ಬೆಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಪ್ರಮೋದ್ ಗೌಡ ವಿರುದ್ಧ ಕೇಸು ದಾಖಲಾದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರ ವಿರುದ್ಧ ಗದರಿಸಿದ್ದ ಶಾಸಕ ಹರೀಶ್ ಪೂಂಜ ಪೊಲೀಸ್ ನೋಟೀಸ್ ಸ್ವೀಕರಿಸಿದ ಬಳಿಕ ಠಾಣೆಗೆ ಹಾಜರಾಗಿ ಜಾಮೀನು ಪಡೆದ ಬೆನ್ನಲ್ಲೇ ಶಾಸಕರ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳಗಳ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಇದೀಗ ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ 28ರಂದು ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್ ) ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ದಕ ಎಸ್.ಪಿ. ರಿಷ್ಯಂತ್ ಅವರ ಮಾರ್ಗದರ್ಶನದಂತೆ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಬಿಜೆಪಿ ಯುವ ಮೋರ್ಚಾದ ನಾಯಕರುಗಳಾದ ಶಶಿರಾಜ್ ಶೆಟ್ಟಿ ಮತ್ತು ಪ್ರಮೋದ್ ಉಜಿರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಈ ಪೈಕಿ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯ ಹೆಸರಲ್ಲಿ ಶಾಸಕ ಹರೀಶ್ ಪೂಂಜ ಅವರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲದೆ ಪೊಲೀಸರ ವಿರುದ್ಧ ಅಸಂವಿಧಾನಿಕ ಪದ ಬಳಸಿ ನಿಂದಿಸಿದ ಬಗ್ಗೆ ಒಂದು ಪ್ರಕರಣ ದಾಖಲಾಗಿತ್ತು. ಈ ವಿಚಾರವನ್ನು ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಬಳಿ ನಡೆದಿದ್ದ ಪ್ರತಿಭಟನೆಯ ವೇಳೆ ಮತ್ತೆ ಶಾಸಕರು ಪೊಲೀಸರ ವಿರುದ್ಧ ಮಾತನಾಡಿ ಪೊಲೀಸರಿಗೂ ಠಾಣೆಗೂ ಹರಿಹಾಯ್ದು ಬೆದರಿಕೆ ಹಾಕಿದ ಬಗ್ಗೆ ಎರಡನೇ ಎಫ್ ಐ ಆರ್ ದಾಖಲಾಗಿತ್ತು. ಮೊದಲೇ ಎರುಡು ಎಫ್ ಐ ಆರ್ ಎದುರಿಸುತ್ತಿದ್ದು ಬಳಿಕ ಮೊನ್ನೆಯ ಪ್ರಕರಣ ಸಂಬಂಧವಾಗಿ ಶಾಸಕರಿಗೆ ನೋಟೀಸು ನೀಡಿ ಠಾಣೆಗೆ ವಿಚಾರಣೆಗೆ ಕರತರಲು ಪೊಲೀಸರು ಮನೆಗೆ ತೆರಳಿದ್ದ ವೇಳೆ ಅಲ್ಲೂ ಸಾವಿರಾರು ಜನ ಜಮಾಯಿಸಿ ಹೈಡ್ರಾಮಾ ನಡೆದಿತ್ತು. ಈ ಎರಡೂ ಪ್ರಕರಣಗಳ ತನಿಖೆಗೆ ಎಸ್.ಪಿ ಅವರು ನಿಯೋಜಿಸಿದ ತಂಡ ಇದೀಗ ತನಿಖೆ ಪೂರ್ತಿಗೊಳಿಸಿದ್ದು ಇದೀಗ ಶಾಸಕ ಹರೀಶ್ ಪೂಂಜ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು ಪ್ರಕರಣವು ಕುತೂಹಲ ಮೂಡಿಸಿದೆ.
Post Comment