ಕಲ್ಮಂಜ ದರೋಡೆ ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : 2020ರ ಜೂ 26ರಂದು ಕಲ್ಮಂಜ ಗ್ರಾಮದ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ಚಿನ್ನಾಭರಣ ಹಾಗೂ ನಗದು ದರೋಡೆಗೈದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು ಇದೀಗ ಆರೋಪಿಗಳಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ದರೋಡೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಲು ಹಾಗೂ ಕಳವು ಮಾಡಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು ಇದೀಗ ಕಸ್ಟಡಿ ಅವಧಿ ಮುಗಿದಿದೆ.ಮೂರು ಮಂದಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅಡಿಕೆ ವ್ಯಾಪಾರಿ ರಿಯಾಝ್(41), ಆತನ ಸಹೋದರ ಬೆಂಗಳೂರಿನಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ನವಾಝ್ (38), ಮತ್ತು ಬೆಂಗಳೂರು ನಿವಾಸಿ ಕೃಷ್ಣ (37), ಎಂಬವರನ್ನು ಇದೀಗ ಮಂಗಳೂರು ಸಬ್ ಜೈಲಿಗೆ ಕಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ದರೋಡೆಗೈದ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದ್ದು ಅಚ್ಚುತ ಭಟ್ ಕುಟುಂಬಕ್ಕೆ ವಾಪಾಸು ದೊರೆಯಲಿದೆ.















Post Comment