ವಸಂತ ಬಂಗೇರ ‘ಇಲ್ಲದ’ ಬೆಳ್ತಂಗಡಿಗೆ ಭರ್ತಿ ಒಂದು ತಿಂಗಳು.. !

ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ತಮ್ಮ ಕಚೇರಿಯ ಇದೇ ಆಸನದಿಂದ ಹುಟ್ಟುಹಬ್ಬದಂದು ಎದ್ದು ಬೆನ್ನು ಹಾಕಿ ಹೋದವರು ಮತ್ತೆ ಬರಲೇ ಇಲ್ಲ: ಅಂದು ಆ ಮೂಕ ಕುರ್ಚಿಗೇನು ಗೊತ್ತಿತ್ತು ; ತನ್ನ ಪ್ರೀತಿಯ ಯಜಮಾನ ಇನ್ನೆಂದೂ ಬರಲಾರನೆಂದು.! ಇಂದಿಗೆ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರಿಲ್ಲದ ಬೆಳ್ತಂಗಡಿ ರಾಜಕೀಯಕ್ಕೆ ಭರ್ತಿ ಒಂದು ತಿಂಗಳಾಯಿತು; ಅವರು ಬೆಳ್ತಂಗಡಿಯ ರಾಜಕೀಯ ಬೆಳವಣಿಗೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ, ಪ್ರತಿಕ್ರಿಯಿಸದೆ, ಅಥವಾ ಘರ್ಜಿಸದೆ ಭರ್ತಿ 4 ತಿಂಗಳಾಗುತ್ತಾ ಬಂತು. ಹೌದು, ವಸಂತ ಬಂಗೇರ ಎಂಬ ಕೇದೆಯ ಕೇದಗೆ ಬಾಡಿ ಹೋಗಿ ಅವರ ಕಚೇರಿಗೂ ಬಿಕೋ ಎನ್ನುವ ಒಂಟಿತನ ಕಾಡುತ್ತಿರಬಹುದೇನೋ.! ಈ ಕಚೇರಿಯಲ್ಲಿ ವಸಂತ ಬಂಗೇರ ಕೂರುತ್ತಿದ್ದ ಆಸನ, ಆ ಮೇಜಿನ ಮೇಲಿರುವ, ಅವರು ದಿನ ನಿತ್ಯ ಬಳಸುತ್ತಿದ್ದ ಬೆಲ್, ಪೆನ್ನು, ನೋಟ್ ಪ್ಯಾಡ್, ಇತ್ಯಾದಿಗಳು ತಮ್ಮ ಯಜಮಾನನ ಆಪ್ತ ಸ್ಪರ್ಶವಿಲ್ಲದೆ ಅನಾಥ ಭಾವದಿಂದ ಕಂಗಾಲಾದಂತೆ ಬಾಸವಾಗುತ್ತಿದೆ.ಹತ್ತಾರು ರಾಜಕೀಯ ವಿರೋಧಿಗಳು, ನೂರಾರು ಆಪ್ತರು, ಸಾವಿರಾರು ಅಭಿಮಾನಿಗಳು ಹುಟ್ಟಿಕೊಳ್ಳಲು ಕಾರಣವಾಗಿದ್ದು ಇದೇ ಗೌರವಾನ್ವಿತ ಕುರ್ಚಿಯೂ ಆಗಿರಬಹುದು. ಕೆಲವು ಕೆಲಸಗಳು ವಸಂತ ಬಂಗೇರರಿಂದ ಮಾತ್ರ ಸಾಧ್ಯವೆಂದು ಭಾವಿಸಿಕೊಂಡು ಬಿಜೆಪಿಗರೂ ಕದ್ದುಮುಚ್ಚಿ ಬರುತ್ತಿದ್ದ ಕಚೇರಿಯೂ ಇದೇ…! ವಸಂತ ಬಂಗೇರ ಯಾವುದೇ ಕಷ್ಟಗಳಿಗೆ ಸ್ಪಂದಿಸುವಾಗ ನೊಂದು ಬಂದವರ ಪಕ್ಷ ನೋಡಿದವರಲ್ಲ, ಕಷ್ಟ ಮಾತ್ರ ನೋಡುತ್ತಿದ್ದವರು ಎಂಬ ಮಾತುಗಳಿವೆ. ಈ ಭಾರಿಯ ಲೋಕಸಭಾ ಚುನಾವಣಾ ಘೋಷಣೆಗೂ ಮೊದಲೇ ಅಂದರೆ ಜನವರಿ 15 ರಂದು ಬಂಧುಗಳು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಾಕ್ಷಿಯಾಗಿ ವಿಜೃಂಭಣೆಯಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನವೇ ಆರೋಗ್ಯದಲ್ಲಿ ಏರು ಪೇರಾಗಿ ಮೊದಲಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮೇ8-2024ರಂದು ನಿಧನರಾದರು.
ಆದರೆ ವಸಂತ ಬಂಗೇರ ಮತ್ತೆ ಚೇತರಿಸಿಕೊಂಡು ಎಂದಿನಂತೆ ಕಚೇರಿಗೆ ಬಂದು ಅವರ ಆಸನದಲ್ಲಿ ಕುಳಿತು ಸಕ್ರೀಯರಾಗುತ್ತಾರೆ , ಆಪ್ತರಿಗೆ, ಅಭಿಮಾನಿಗಳಿಗೆ ಮತ್ತೆ ಸಿಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ವಸಂತ ಬಂಗೇರ ಅವರ ‘ಅಗಲುವಿಕೆ’ಯ ಸುದ್ದಿ ಆಘಾತವೆನಿಸಿತು.
ಏನೇ ತುರ್ತು ಅಗತ್ಯವಿರಲಿ, ಕಾರಣವೇ ಇಲ್ಲದಿರಲಿ ಅವರ ಇರುವಿಕೆಯನ್ನು ಖಚಿತಪಡಿಸಿಕೊಂಡು ದಿನಕ್ಕೊಮ್ಮೆಯಾದರೂ ಕಚೇರಿಗೆ ಬಂದು ತಮ್ಮ ಹೆಮ್ಮೆಯ ನಾಯಕನನ್ನು ಕಂಡು ಮಾತನಾಡಿಸಿಕೊಂಡು ಅಗತ್ಯವಾದ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಪಡೆದುಕೊಂಡು ಹೋಗುತ್ತಿದ್ದ ಅಭಿಮಾನಿಗಳಿಗೆ ವಸಂತ ಬಂಗೇರ ‘ಇಲ್ಲ’ ಎನ್ನುವ ವಾಸ್ತವ ವಿಚಾರವನ್ನು ಅರಗಿಸಿಕೊಳ್ಳಲು ಸಹಜವಾಗಿ ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ, ಏಕೆಂದರೆ ಆಪ್ತರ, ಅಭಿಮಾನಿಗಳ ದೃಷ್ಟಿಯಲ್ಲಿ ಹಿರಿಯ ನಾಯಕ ಕೆ.ವಸಂತ ಬಂಗೇರ ಅವರ ಗಂಭೀರ ವ್ಯಕ್ತಿತ್ವ, ಬದುಕಿದ ರೀತಿ, ನಡೆದು ಬಂದ ದಾರಿ, ಸಾಧಿಸಿದ ಸಾಧನೆಗಳು ಬೆಳ್ತಂಗಡಿ ರಾಜಕೀಯ ಇತಿಹಾಸದಲ್ಲಿ ಒಂದು ಅಧ್ಯಾಯದಂತೆ, ಮರೆಯಲಾಗದ ದಂತ ಕಥೆಯಂತೆ ಅಚ್ಚಳಿಯದೆ ಉಳಿದುಕೊಂಡಿದೆ.

ವಸಂತ ಬಂಗೇರ ಪ್ರಚಾರದ ವ್ಯಾಮೋಹದಿಂದ ಕೀಳು ಮಟ್ಟದ ರಾಜಕೀಯ ಮಾಡಿದವರಲ್ಲ, ಎಂಥಾ ಸವಾಲಿನ ಸಂದರ್ಭದಲ್ಲಿ ಸತ್ಯದ ವಿರುದ್ಧ ಯಾರಿಗೂ ಮಣಿದವರಲ್ಲ, ಶರಣಾದವರೂ ಅಲ್ಲ ಎಂಬುದು ಅಭಿಮಾವಿಗಳ ಅಭಿಮಾನದ ಮಾತು.ವಸಂತ ಬಂಗೇರ ಅವರು ಗೆದ್ದರೂ ಸೋತರೂ ಹಾಲಿಯಾದರೂ ಮಾಜಿಯಾದರೂ ಈ ಸಿಂಹಾಸನದಂಥ ಕುರ್ಚಿಯಲ್ಲಿ ರಾಜ ಗಾಂಭೀರ್ಯದಲ್ಲಿ ಕುಳಿತು, ಕೆಲವು ಆಪ್ತರಿಗೆ ತಾಯಿಯಂತೆ, ಕೆಲವರಿಗೆ ಗದರಿಸಿ ತಿದ್ದುವ ಗಾಡ್ ಫಾದರ್ ನಂತೆ ಇದ್ದವರು, ಅದೆಷ್ಟೋ ತಕರಾರುಗಳನ್ನು ತಮ್ಮ ಮಧ್ಯಸ್ಥಿಕೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪಂಚಾಯಿತಿ ಮಾಡಿ ಇತ್ಯರ್ಥ ಮಾಡಿ ಮುಗಿಸುತ್ತಿದ್ದವರು. ತೊಂದರೆ, ಅನ್ಯಾಯಗಳಿಂದ ನೊಂದು ಬಂದವರಿಗೆ ನ್ಯಾಯ ಕೊಡಿಸುತ್ತಿದ್ದ ಅವರು ಅನಿವಾರ್ಯವೆನಿಸಿದಲ್ಲಿ ಮಾತ್ರ ದೂರವಾಣಿ ಕರೆ ಮಾಡಿ ಘಟನೆಯ ವಿವರ ಹೇಳಿ ಪೊಲೀಸ್ ಠಾಣೆಗೆ ಕಳಿಸಿ ಬಿಡುತ್ತಿದ್ದರೇ ಹೊರತು ಕ್ಷುಲ್ಲಕ ಕಾರಣಗಳಿಗೆ ನೇರವಾಗಿ ಪೊಲೀಸ್ ಠಾಣೆಗಾಗಲಿ, ತಾಲೂಕು ಕಚೇರಿಗಾಗಲಿ ಹೋಗುತ್ತಿರಲಿಲ್ಲ. ಆದರೆ ಸೋಮಾರಿ ಸರಕಾರಿ ಅಧಿಕಾರಿಗಳಿಂದಾಗಲಿ, ಭ್ರಷ್ಟ ಸಿಬ್ಬಂದಿಗಳಿಂದಾಗಲಿ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುತ್ತಿದೆ, ಅನ್ಯಾಯವಾಗುತ್ತಿದೆ, ಕೆಲಸ ವಿಳಂಬವಾಗುತ್ತಿದೆ ಎಂಬ ಸಂಗತಿ ಕಿವಿಗೆ ಬಿದ್ದರೆ ಯಾವ ಕ್ಷಣದಲ್ಲಿ ಬೇಕಾದರೂ ತಾಲೂಕು ಕಚೇರಿಗಾಗಲಿ ಸಾರ್ವಜನಿಕ ಆಸ್ಪತ್ರೆಗಾಗಲಿ ಭೇಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಚಳಿ ಬಿಡಿಸಿ, ಸಿಬ್ಬಂದಿಗಳ ಪಂಚೇಂದ್ರಿಯಗಳು ಚುರುಕಾಗುವಷ್ಟರ ಮಟ್ಟಿಗೆ ಚಾರ್ಜ್ ಮಾಡಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುತ್ತಿದ್ದರು. ಅಧಿಕಾರದಲ್ಲಿರಲಿ, ಇಲ್ಲದಿರಲಿ, ಸರಕಾರಿ ಆಸ್ಪತ್ರೆಯಲ್ಲಿ ಅಥವಾ ತಾಲೂಕು ಕಚೇರಿಯಲ್ಲಿ ಜನರಿಗೆ ತೊಂದರೆಯಾದರೆ ಅವರು ಸಹಿಸುತ್ತಿರಲಿಲ್ಲ: ವಸಂತ ಬಂಗೇರ ಅವರ ರಾಜಕೀಯ ಜೀವನದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಅತೀ ಹೆಚ್ಚು ಭೇಟಿ ನೀಡಿರುವುದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಇರಬೇಕು; ಅಷ್ಟರ ಮಟ್ಟಿಗೆ ಸರಕಾರಿ ಆಸ್ಪತ್ರೆಯಲ್ಲಿ ನೊಂದವರು ಅಳಲು ತೋಡಿಕೊಳ್ಳಲು ಪದೇ ಪದೇ ಇವರ ಬಳಿ ಬರುತ್ತಿದ್ದರು.ವಸಂತ ಬಂಗೇರ ಅವರ ರಾಜಕೀಯ ಜೀವನದ ಕೊನೆಯವರೆಗೂ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆಗಳನ್ನು ಸರಿಪಡಿಸಲು ಬೆಂಬಿಡದೆ ಹೋರಾಡುತ್ತಿದ್ದ ಬಡವರಪರ ಕಾಳಜಿಯನ್ನು ಜನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂಬ ಮಾತುಗಳಿವೆ.
ಮೂರು ದಶಕಗಳ ಲೋಕಸಭಾ ಚುನಾವಣೆಗಳ ಚುನಾವಣಾ ಪ್ರಚಾರದಲ್ಲಿ ರಾಜ್ಯ ನಾಯಕರುಗಳು ಮೆಚ್ಚಿಕೊಳ್ಳುವಂತಹ ತಮ್ಮದೇ ನಿರ್ಣಾಯಕ ಕೊಡುಗೆಯನ್ನು ನೀಡುತ್ತಾ ಬಂದಿದ್ದ ವಸಂತ ಬಂಗೇರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ತಮ್ಮ ವಯಸ್ಸಿಗೆ ಮೀರಿ ಆರೋಗ್ಯದ ಸಮಸ್ಯೆಯನ್ನೂ ಲೆಕ್ಕಿಸದೆ ದುಡಿದಿದ್ದು ಅದೇ ಅವರು ಕಂಡ ಕೊನೆಯ ಚುನಾವಣೆಯಾಯಿತು.
ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಯಕ ವಸಂತ ಬಂಗೇರ ಅವರ ಅನುಪಸ್ಥಿತಿ ಒಂದು ದೊಡ್ಡ ಕೊರತೆಯಾಗಿ ಎದ್ದು ಕಾಣುತ್ತಿತ್ತು, ಪಕ್ಷದ ನಾಯಕರನ್ನು ಕಾಡುತ್ತಿತ್ತು ಎಂದರೂ ತಪ್ಪಾಗದು. ನಾಲ್ಕು ತಿಂಗಳುಗಳಿಂದ ಬೆಳ್ತಂಗಡಿಯಲ್ಲಿ ಯಾವುದೇ ಮಹತ್ವದ’ ರಾಜಕೀಯ ಬೆಳವಣೆಗೆಗಳಾಗಲಿ, ಅಥವಾ ಪ್ರಮುಖ ಘಟನೆಗಳಾದರೂ “ಈಗ ವಸಂತ ಬಂಗೇರರು ಇರಬೇಕಿತ್ತು… ಇದಕ್ಕೆಲ್ಲ ಬಂಗೇರರೇ ಆಗಬೇಕು..” ಎಂಬಿತ್ಯಾದಿ ಅಭಿಪ್ರಾಯಗಳು ಅಭಿಮಾನಿಗಳಿಂದ ಮಾತ್ರವಲ್ಲ, ರಾಜಕೀಯ ವಿರೋಧಿಗಳಿಂದಲೂ ಕೇಳಿ ಬರುತ್ತಿದೆ. ಇಂಥ ಸಂದರ್ಭಗಳಲ್ಲಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರು, ಎಂಬುದೇ ಈ ಮಾತುಗಳ ಹಿಂದಿರುವ ಸಾಂದರ್ಭಿಕ ಕುತೂಹಲವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ದಿನ ಕಳೆಂಜ ಗ್ರಾಮದಲ್ಲಿ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟದ ಬಳಿಕ ನಡೆದ ನಾಟಕೀಯ ಬೆಳವಣಿಗೆ, ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಬಿಜೆಪಿ ದಾಖಲಿಸಿರುವ (ಫೇಕ್ ?) ಎಟ್ರಾಸಿಟಿ ಕೇಸು, ಹಾಗೂ ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತನ ಮೇಲೆ .ಕಾಂಗ್ರೆಸ್ ದಾಖಲಿಸಿರುವ (ಫೇಕ್ ?) ಫೋಕ್ಸೋ ಪ್ರಕರಣ, ಈ ಘಟನೆಯ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪತ್ರಿಕಾಗೋಷ್ಠಿ ಸಮರ ನಡೆದಿದ್ದು ಇಂಥ ರಾಜಕೀಯ ಬೆಳವಣೆಗೆಗಳು ನಡೆದಾಗ ವಸಂತ ಬಂಗೇರ ಇರಲಿಲ್ಲ. ಮೊನ್ನೆ ಬಿಜೆಪಿ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರು
“ ಮಾಜಿ ಶಾಸಕ ಕೆ.ವಸಂತ ಬಂಗೇರ ಇಂಥ ಕೀಳು ಮಟ್ಟದ ಅಥವಾ ದ್ವೇಷದ ರಾಜಕೀಯ ಮಾಡುತ್ತಿರಲಿಲ್ಲ… ಅವರು ಏನಿದ್ದರೂ ತಮ್ಮ ಘನತೆ, ಗೌರವಗಳಿಗೆ ತಕ್ಕಂತೆ ರಾಜಕೀಯ ಮಾಡುತ್ತಿದ್ದರು” ಎಂಬ ಹೇಳಿಕೆ ನೀಡಿರುವುದು “ಸತ್ತ ದನಕ್ಕೆ ಹಾಲು ಜಾಸ್ತಿ..” ಎಂಬ ಮಾತಿನಂತಿತ್ತು.! ಆದರೆ ಬೆಳ್ತಂಗಡಿ ರಾಜಕೀಯದಲ್ಲಿ ಕೆ. ವಸಂತ ಬಂಗೇರ ಅವರ ನಾಯಕತ್ವದ ಸ್ಥಾನವನ್ನಾಗಲಿ, ಒಂದು ಗಟ್ಟಿ ಪ್ರತಿರೋಧದ ಧ್ವನಿಯನ್ನಾಗಲಿ ಪೂರ್ಣ ಪ್ರಮಾಣದಲ್ಲಿ ತುಂಬಲು ಈಗ ಇರುವ ಕಾಂಗ್ರೆಸ್ ನಾಯಕರ ಪೈಕಿ ಯಾರಿದ್ದಾರೆ? ಎಂಬ ಪ್ರಶ್ನೆಯೇ ಅವರ ಆಪ್ತ ವಲಯದಲ್ಲಿ ಉಳಿದುಕೊಂಡಿದೆ. ವಸಂತ ಬಂಗೇರ ಅವರಿಲ್ಲದ ಬೆಳ್ತಂಗಡಿ ರಾಜಕೀಯ ಏನೋ ಒಂಥರಾ ಮಿಸ್ಸಿಂಗ್.. ಎಂಬ ಮಾತು ನಿಜವಿರಬಹುದಲ್ಲವೇ?
Post Comment