ಬೆಳ್ತಂಗಡಿ ಹಿರಿಯ ದಲಿತ ಮುಖಂಡ ಚಂದು ಎಲ್ ಇನ್ನಿಲ್ಲ

ಬೆಳ್ತಂಗಡಿ ಹಿರಿಯ ದಲಿತ ಮುಖಂಡ ಚಂದು ಎಲ್ ಇನ್ನಿಲ್ಲ

Share
IMG-20240620-WA0001-1-523x1024 ಬೆಳ್ತಂಗಡಿ ಹಿರಿಯ ದಲಿತ ಮುಖಂಡ ಚಂದು ಎಲ್ ಇನ್ನಿಲ್ಲ

ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಇದರ ರಾಜ್ಯ ಸಂಘಟನಾ ಸಂಚಾಲಕ, ಬೆಳ್ತಂಗಡಿ ತಾಲೂಕು ಪಂಚಾಯತಿನ ಮಾಜಿ ಉಪಾಧ್ಯಕ್ಷ, ಹಿರಿಯ ಹೋರಾಟಗಾರ ಚಂದು ಎಲ್(52)  ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು.

ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ  (ಕೆ.ವಿ. ರಾವ್) ಯಳಚಿತ್ತಾಯ ಅವರ ಹೋರಾಟಗಳಿಂದ ಪ್ರೇರೇಪಿತರಾಗಿ ಕೆಲ ಕಾಲ ಒಡನಾಟದಲ್ಲಿದ್ದರು.ಬೆಳ್ತಂಗಡಿ ತಾಲೂಕಿನಲ್ಲಿ 90ರ ದಶಕದಿಂದೀಚೆ  ಸುಮಾರು ಮೂರು ದಶಕಗಳಿಂದ ಅಂಬೇಡ್ಕರ್ ವಾದಿ ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಚಂದು ಎಲ್ ಅವರು ಕರ್ನಾಟಕ ಸಮತಾ ಸೈನಿಕ ದಳ,ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷಪ್ಪ ಸ್ಥಾಪಿತ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಂತಾದ ಸಂಘಟನೆಗಳಲ್ಲಿ ತಾಲೂಕು, ಜಿಲ್ಲೆ, ಹಾಗೂ ವಿಭಾಗೀಯ  ಮಟ್ಟದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ರಾಜ್ಯ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

 ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ.), ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷಪ್ಪ ಸ್ಥಾಪಿತ) ನೇತೃತ್ವದಲ್ಲಿ ನಡೆಯುತ್ತಿದ್ದ ಡಿ.ಸಿ.ಮನ್ನಾ ಭೂಹೋರಾಟ, ನಿಡ್ಲೆ ಅಸ್ಪೃಶ್ಯತೆ ಪ್ರಕರಣದ ವಿರುದ್ಧದ ಪ್ರತಿಭಟನೆ ಮುಂತಾದ ಹೋರಾಟಗಳಲ್ಲಿ ಪ್ರಮುಖ ಪಾತ್ರವಹಿಸಿದವರು.ಲಾಯಿಲಾ ಗ್ರಾಮಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಚಂದು ಎಲ್ ಒಂದು ಭಾರಿ ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ.)ದಿಂದ ಬೆಳ್ತಂಗಡಿ ವಿಧಾನ ಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ತಾ.ಪಂ.ಉಪಾಧ್ಯಕ್ಷರಾಗಿ ಅಧಿಕಾರದಲ್ಲಿರುವಾಗ ತಾಲೂಕಿನ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಸದಸ್ಯರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನ ಸರಕಾರಿ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ಅವ್ಯವಹಾರಗಳನ್ನು ಬಯಲಿಗೆಳೆದು ಸರಿಪಡಿಸುವವರೆಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಬೆನ್ನು ಬಿಡದೆ ಬಗೆಹರಿಸುತ್ತಿದ್ದರು. ತಾ.ಪಂ. ಸದಸ್ಯರಾಗಿ ಉಪಾಧ್ಯಕ್ಷರಾಗಿ ಅಧಿಕಾರದಲ್ಲಿರುವಾಗ ತಾಲೂಕು ಪಂಚಾಯತ್ ಸಭೆಗಳಲ್ಲಿ ದಲಿತರ, ಬಡವರ ಮೂಲಭೂತ ಸಮಸ್ಯೆ, ಕುಂದು ಕೊರತೆಗಳನ್ನು ಬೆಳಕಿಗೆ ತಂದು ಬಗೆಹರಿಸಲು ಧ್ವನಿ ಎತ್ತಿ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದಿದ್ದರು.ಇವರು ನಾಗರಿಕ ಸೇವಾ ಟ್ರಸ್ಟ್ ನಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದರು.                                                                                                                                   ಸಹೋದರ, ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಚಂದು ಎಲ್  ಅವರ ಅಂತ್ಯಕ್ರಿಯೆಯು ಲಾಯಿಲ ಗ್ರಾಮದ ನಿನ್ನಿಕಲ್ಲು ಮನೆಯಲ್ಲಿ ಮಧ್ಯಾಹ್ನ ನಡೆಯಲಿದೆ. ಮೃತರ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಜೂನ್ 20ನೇ  ಇಂದು ಗುರುವಾರ ಬೆಳಿಗ್ಗೆ 10-00 ಗಂಟೆಯಿಂದ 12-00 ಗಂಟೆಯವರೆಗೆ ಲಾಯಿಲ ಗ್ರಾಮದ ಪಡ್ಲಾಡಿ ಡಾ.ಬಿ‌.ಆರ್. ಅಂಬೇಡ್ಕರ್ ಭವನದಲ್ಲಿ  ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!