ಉದ್ಘಾಟನೆಗೂ ಮುನ್ನ ಸೋರುತ್ತಿದೆ; ಲಾಯಿಲಾದ ನೂತನ ಗ್ರಂಥಾಲಯ ತಾ.ಪಂ.- ಕೆ.ಆರ್.ಡಿ.ಎಲ್ ನ 15 ಲಕ್ಷ ರೂ ಅನುದಾನ : ಕಾಮಗಾರಿಯ ಗುಣಮಟ್ಟವೇ ಅನುಮಾನ
![1719915242898-1-1-1024x768 ಉದ್ಘಾಟನೆಗೂ ಮುನ್ನ ಸೋರುತ್ತಿದೆ; ಲಾಯಿಲಾದ ನೂತನ ಗ್ರಂಥಾಲಯ ತಾ.ಪಂ.- ಕೆ.ಆರ್.ಡಿ.ಎಲ್ ನ 15 ಲಕ್ಷ ರೂ ಅನುದಾನ : ಕಾಮಗಾರಿಯ ಗುಣಮಟ್ಟವೇ ಅನುಮಾನ](https://newscounter.in/wp-content/uploads/2024/07/1719915242898-1-1-1024x768.jpg)
ಬೆಳ್ತಂಗಡಿ : ಲಾಯಿಲಾ ಗ್ರಾಮಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಪ್ರದೇಶದ ಕುಟುಂಬಗಳ ವಿದ್ಯಾರ್ಥಿಗಳಿಗೆ, ವಿದ್ಯಾವಂತ ಯುವಕ ಯುವತಿಯರಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಬೇಡಿಕೆಯಂತೆ ನೂತನ ಗ್ರಂಥಾಲಯವೊಂದನ್ನು ತೆರೆಯಲಾಗಿದ್ದು ಉದ್ಘಾಟನೆಯೇ ಆಗದ ಗ್ರಂಥಾಲಯದ ಮೇಲ್ಛಾವಣಿಯು ಇದೀಗ ಮಳೆಗಾಲ ಪ್ರಾರಂಭದಲ್ಲೇ ಸೋರಲಾರಂಭಿಸಿದೆ. ನೂತನ ಗ್ರಂಥಾಲಯದ ಮೇಲ್ಛಾವಣಿಯ ಸೋರಿಕೆಗೆ ಕಳಪೆ ಕಾಮಗಾರಿಯೇ ಕಾರಣವೆಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದ್ದು ಸದ್ಯ ಕಟ್ಟಡದ ಗುತ್ತಿಗೆದಾರರತ್ತ ನೋಡುವಂತಾಗಿದೆ.
ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಪುತ್ರಬೈಲು ಪ್ರದೇಶದಲ್ಲಿ 2023-24ನೇ ಸಾಲಿನಲ್ಲಿ ಕೆ.ಆರ್ . ಡಿ .ಎಲ್ ನಿಂದ 5 ಲಕ್ಷ ರೂ ಹಾಗೂ ತಾಲೂಕು ಪಂಚಾಯತ್ ನಿಂದ 10 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯದ ಮೇಲ್ಛಾವಣಿ ಉದ್ಘಾಟನೆಗೂ ಮುನ್ನ ಸೋರುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಲು ಕಾರಣವಾಗಿದೆ.ಪುತ್ರಬೈಲು ಪರಿಸರದಲ್ಲಿ ಹೆಚ್ಚಾಗಿ ಪರಿತಿಷ್ಟ ಜಾತಿಯ ಕುಟುಂಬಗಳಿದ್ದು ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೂ, ಯುವ ಜನತೆಗೂ ಅನುಕೂಲವಾಗಲೆಂದು ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ.
ಲಾಯಿಲಾ ಗ್ರಾಮದಲ್ಲಿ ಎಲ್ಲಾ ಸಮುದಾಯಗಳ ಕ್ರೀಡಾ, ಸಾಂಸ್ಕೃತಿಕ, ಧಾರ್ಮಿಕ ಸಂಘ, ಸಂಸ್ಥೆಗಳು ಗ್ರಾಮಸ್ಥರ ಹಿತದೃಷ್ಟಿಯಲ್ಲಿ ನಾನಾ ಸಮುದಾಯ ಮುಖೀ ಚಟುವಟಿಕೆಗಳನ್ನು ಆಗಾಗ ಆಯೋಜಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಯುವ ಸಮುದಾಯದಲ್ಲಿ ಓದುವ ಹವ್ಯಾಸಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಇಂಥ ಪ್ರದೇಶದಲ್ಲಿ ಗ್ರಂಥಾಲಯವನ್ನು ಆರಂಭಿಸಲಾಗಿದೆ. ಆದರೆ ಸೋರುತ್ತಿರುವ ಈ ನೂತನ ಗ್ರಂಥಾಲಯದೊಳಗೆ ಬಿಡುವಿದ್ದಾಗ ಓದಲು ಪ್ರವೇಶಿಸುವುದೆಂದರೆ ಸ್ಥಳೀಯ ಮಕ್ಕಳು ಆತಂಕ ಪಡುವಂತಾಗಿದೆ.
ಸೋರುತ್ತಿರುವ ನೂತನ ಗ್ರಂಥಾಲಯ ಕಟ್ಟಡದ ಮೇಲ್ಛಾವಣಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಅಗತ್ಯ ಬಿದ್ದರೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
Post Comment